ಬೆಂಗಳೂರು:ದೋಸ್ತಿ ಸರ್ಕಾರ ನುಗ್ಗೆ ಮರದ ರೀತಿ ಟೊಳ್ಳಾಗಿದೆ. ಯಾವಾಗ ಬೇಕಾದರೂ ಮುರಿದು ಬಿದ್ದು ಹೋಗಬಹುದು. ನುಗ್ಗೆ ಮರದ ಒಳಗೆ ಯಾರಿದ್ದಾರೋ, ಅವರೆಲ್ಲಾ ಆದಷ್ಟು ಬೇಗ ಹೊರಬರಲಿದ್ದಾರೆ ಎಂದು ಕಾಂಗ್ರೆಸ್ನಿಂದ ಕೆಲವರು ಹೊರಬರಲಿದ್ದಾರೆ ಎಂದು ಪರೋಕ್ಷವಾಗಿ ಮಾಜಿ ಡಿಸಿಎಂ ಆರ್ ಅಶೋಕ್ ಸುಳಿವು ನೀಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ದೇಶದಲ್ಲಿ ಕಾಂಗ್ರೆಸ್ ಮಣ್ಣು ಮುಕ್ಕಿದೆ. ಕರ್ನಾಟಕದಲ್ಲಿಯೂ ಕೂಡ ಜೆಡಿಎಸ್ ಸಹವಾಸ ಮಾಡಿ ಕಾಂಗ್ರೆಸ್ ಧೂಳಿಪಟವಾಗಿದೆ. ಕಾಂಗ್ರೆಸ್ನಲ್ಲಿ ಒಳಜಗಳ, ಗುಂಪುಗಾರಿಕೆ ಇದೆ. ಇದೆಲ್ಲಾ ಇವತ್ತು ರೋಶನ್ ಬೇಗ್ ಅವರ ಹೇಳಿಕೆಯಿಂದ ಜಗಜ್ಜಾಹಿರಾಗಿದೆ.
ಸಿದ್ದರಾಮಯ್ಯ ಕಾಂಗ್ರೆಸ್ನಲ್ಲಿ ಅತಂತ್ರರಾಗಿದ್ದಾರೆ...
ಸದಾ ಸಿದ್ದರಾಮಯ್ಯನವರು ನರೇಂದ್ರ ಮೋದಿ, ಯಡಿಯೂರಪ್ಪ ವಿರುದ್ಧ ಏಕವಚನ ಪದ ಪ್ರಯೋಗ ಮಾಡುತ್ತಿದ್ದರು. ಇವತ್ತು ಅವರದೇ ಪಕ್ಷದ ಶಾಸಕ, ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ಮಾತನಾಡಿದ್ದಾರೆ ಎಂದರೆ, ಸಿದ್ದರಾಮಯ್ಯ ಕಾಂಗ್ರೆಸ್ನಲ್ಲಿ ಒಂದು ರೀತಿ ಅತಂತ್ರರಾಗಿದ್ದಾರೆ. ಯಾರು ಕೂಡ ಬೆಲೆ ಕೊಡದಂತಹ ಪರಿಸ್ಥಿತಿಗೆ ತಲುಪಿದ್ದಾರೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ನಲ್ಲಿ ಗುಂಪುಗಾರಿಕೆ ದೊಡ್ಡಮಟ್ಟದಲ್ಲಿ ಆರಂಭವಾಗಿದೆ. ಬೇಸರ ಹಾಗೂ ಅತೃಪ್ತಿ ಇರುವ ಶಾಸಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದು ಇನ್ನೂ ದೊಡ್ಡ ಗೊಂದಲವಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವೇ ಒಡೆದು ಹೋಗುವ ಸಂದರ್ಭ ಬಂದರೂ ಆಶ್ಚರ್ಯವಿಲ್ಲ. ನಾಯಕತ್ವಕ್ಕಾಗಿ ಡಿ.ಕೆ ಶಿವಕುಮಾರ್, ದಿನೇಶ್ ಗುಂಡುರಾವ್, ಸಿದ್ದರಾಮಯ್ಯ, ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಈ ರೀತಿ ಪಟ್ಟಿ ದೊಡ್ಡದಿದೆ. ಅವರೆಲ್ಲ ನಾಯಕತ್ವಕ್ಕಾಗಿ ಹೊಡೆದಾಡುತ್ತಿದ್ದಾರೆ. ಈ ಗುಂಪುಗಾರಿಕೆಯಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಮಣ್ಣು ಪಾಲಾಗಲಿದೆ. ಇವತ್ತು ರೋಷನ್ ಬೇಗ್ ಎಪಿಸೋಡ್ನಿಂದಲೇ ಇದು ಜಗಜ್ಜಾಹೀರಾಗಿದೆ ಎಂದರು.
ನಾವು ಆಪರೇಷನ್ ಕಮಲಕ್ಕೆ ಕೈ ಹಾಕಿಲ್ಲ. ಹಾಕುವುದೂ ಇಲ್ಲ...
ಬಿಜೆಪಿ ವಿರುದ್ಧ ಆಪರೇಷನ್ ಕಮಲದ ಆರೋಪ ಮಾಡುವುದೇ ಸಿಎಂ ಕುಮಾರಸ್ವಾಮಿಯವರಿಗೆ ಹವ್ಯಾಸವಾಗಿಬಿಟ್ಟಿದೆ. ಮೈತ್ರಿ ಸರ್ಕಾರ ಆರಂಭವಾದಾಗಿನಿಂದಲೇ ಇದನ್ನು ಶುರು ಮಾಡಿಕೊಂಡಿದ್ದಾರೆ. ಮೊದಲು 30ಕೋಟಿ ಎನ್ನುತ್ತಿದ್ದರು. ಈಗ 10 ಕೋಟಿಗೆ ಬಂದಿದ್ದಾರೆ. ಅವರ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಜೆಡಿಎಸ್ ರಾಜ್ಯಾಧ್ಯಕ್ಷರ ರಾಜೀನಾಮೆ ಅಂಗೀಕಾರ ಮಾಡದೆ ಅವರನ್ನೇ ಮುಂದುವರೆಯಿರಿ ಎಂದು ದುಂಬಾಲು ಬೀಳುತ್ತಿದ್ದಾರೆ. ಆದರೂ ವಿಶ್ವನಾಥ್ ಒಪ್ಪಲ್ಲ ಎಂದಿದ್ದಾರೆ. ಅವರ ಪಕ್ಷದವರನ್ನು ನ್ಯಾಯವಾಗಿ ಇಟ್ಟುಕೊಳ್ಳಲು ಸಾಧ್ಯವಾಗದವರು, ಬಿಜೆಪಿ ಮೇಲೆ ಇಲ್ಲಸಲ್ಲದ ಟೀಕೆ ಮಾಡುವ ಅವಶ್ಯಕತೆ ಇಲ್ಲ. ನಾವು ಯಾವುದೇ ಆಪರೇಷನ್ ಕಮಲಕ್ಕೆ ಕೈ ಹಾಕಿಲ್ಲ. ಹಾಕುವುದೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಬರಗಾಲವಿದೆ. ಸಚಿವ ಸಂಪುಟ ವಿಸ್ತರಣೆಯಾದರೂ ಖಾತೆ ಹಂಚಿಕೆ ಮಾಡಲು ಕ್ಯಾತೆ ಮಾಡುತ್ತಿದ್ದಾರೆ. ಸರ್ಕಾರ ನಡೆಸುವುದು ಬಿಟ್ಟು ಮೈಲೇಜ್ ಸಿಗಲಿದೆ ಎನ್ನುವ ಕಾರಣಕ್ಕೆ ಬಿಜೆಪಿಯನ್ನು ಟೀಕಿಸುತ್ತಿದ್ದಾರೆ. ಕೂಡಲೇ ವಿಧಾನಸಭೆ ಅಧಿವೇಶನ ಕರೆಯಬೇಕು. ಬಹಳ ಜ್ವಲಂತ ಸಮಸ್ಯೆಗಳಿವೆ. ಜಿಂದಾಲ್ ವಿವಾದ, ಬರಗಾಲ, ಐಎಂಎ ಹಗರಣವಿದೆ. ಸರ್ಕಾರದಲ್ಲಿ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಇವನ್ನೆಲ್ಲ ಚರ್ಚೆ ಮಾಡಬೇಕಿದೆ ಎಂದರು.