ಕರ್ನಾಟಕ

karnataka

ETV Bharat / city

ಪಿಎಸ್​ಐ ಹಗರಣ: ಗೃಹ ಸಚಿವ ಆರಗ ಜ್ಞಾನೇಂದ್ರ ವಜಾಕ್ಕೆ ಸಿದ್ದರಾಮಯ್ಯ ಆಗ್ರಹ - ಮಾಜಿ ಸಿಎಂ ಸಿದ್ದರಾಮಯ್ಯ

ಪಿಎಸ್​ಐ ಹಗರಣದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸಂಪುಟದಿಂದ ಕೈಬಿಡಲು ಆಗ್ರಹಿಸಿದ್ದಾರೆ.

ಗೃಹ ಸಚಿವ ಆರಗ ಜ್ಞಾನೇಂದ್ರ ವಜಾಕ್ಕೆ ಸಿದ್ದರಾಮಯ್ಯ ಆಗ್ರಹ
ಗೃಹ ಸಚಿವ ಆರಗ ಜ್ಞಾನೇಂದ್ರ ವಜಾಕ್ಕೆ ಸಿದ್ದರಾಮಯ್ಯ ಆಗ್ರಹ

By

Published : Jul 5, 2022, 8:51 AM IST

ಬೆಂಗಳೂರು:ಪಿಎಸ್ಐ ನೇಮಕಾತಿ ಹಗರಣದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಭಾಗಿಯಾಗಿದ್ದು, ಕೂಡಲೇ ಸಂಪುಟದಿಂದ ಕಿತ್ತು ಹಾಕಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಗ್ರಹಿಸಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಅವರು, ಕಪಾಟಿನೊಳಗಿಂದ ಒಂದೊಂದೇ ಅಸ್ತಿಪಂಜರಗಳು ಹೊರಗೆ ಬೀಳುತ್ತಿವೆ. ಪಿಎಸ್ಐ ನೇಮಕಾತಿ ಹಗರಣದಲ್ಲಿ ಎಡಿಜಿಪಿ ಅಮೃತಪೌಲ್ ಬಂಧನವೇ ಇದಕ್ಕೆ ಸಾಕ್ಷಿ. ಹಗರಣವೇ ನಡೆದಿಲ್ಲ ಎಂದು ಮೈಮೇಲೆ ಬರುತ್ತಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹಸಚಿವ ಆರಗ ಜ್ಞಾನೇಂದ್ರ ಈಗ ಏನು ಹೇಳುತ್ತಾರೆ? ಎಂದು ಪ್ರಶ್ನಿಸಿದ್ದಾರೆ.

ಪಿಎಸ್ಐ ನೇಮಕಾತಿ ಹಗರಣದಲ್ಲಿ ಅಧಿಕಾರಿಗಳನ್ನು ಮಾತ್ರ ಹೊಣೆ ಮಾಡಿ ಜಾರಿಕೊಳ್ಳುವುದು ಬೇಡ. ಈ ಹಗರಣಕ್ಕೆ ಅಧಿಕಾರಿಗಳಷ್ಟೇ ಆರಗ ಜ್ಞಾನೇಂದ್ರ ಅವರೂ ಕಾರಣ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮೊದಲು ಗೃಹ ಸಚಿವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.

ಆರ್​​ಎಸ್​ಎಸ್ ವಿರುದ್ಧ ಕಿಡಿ:ಸಾಂಸ್ಕೃತಿಕ ಭಯೋತ್ಪಾದನೆ ಎಂಬ ಟ್ಯಾಗ್​ಲೈನ್​ನಲ್ಲಿ ಟ್ವೀಟ್ ಮಾಡಿ ಆರ್​ಎಸ್​ಎಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, ಶಿವಮೊಗ್ಗದ ಅನವಟ್ಟಿಯಲ್ಲಿ ಕನ್ನಡ ನಾಟಕ 'ಜತೆಗಿರುವನು ಚಂದಿರ' ಪ್ರದರ್ಶನಕ್ಕೆ ಆರ್‌ಎಸ್‌ಎಸ್ ಅಡ್ಡಿಪಡಿಸಿರುವುದು ಸಾಂಸ್ಕೃತಿಕ ಭಯೋತ್ಪಾದನೆಯಲ್ಲದೆ ಮತ್ತೇನಲ್ಲ. ಈ ಗೂಂಡಾಗಿರಿಯಲ್ಲಿ ಪಾಲುದಾರರಾದ ಎಲ್ಲಾ ದುಷ್ಕರ್ಮಿಗಳನ್ನು ಸರ್ಕಾರ ಈ ಕೂಡಲೇ ಬಂಧಿಸಿ, ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಮಹಾದೇವರ ಪುಸ್ತಕಕ್ಕೆ ಮೆಚ್ಚುಗೆ:ಮತ್ತೊಂದು ಟ್ವೀಟ್​​ನಲ್ಲಿ ದೇವನೂರು ಮಹಾದೇವ ಅವರು ಬರೆದಿರುವ ಕೃತಿಯನ್ನು ಬಣ್ಣಿಸಿರುವ ಅವರು, ಆರ್‌.ಎಸ್‌.ಎಸ್‌ ನ ಆಳ-ಅಗಲಗಳನ್ನು ಪರಿಚಯಿಸುವ ಪುಸ್ತಿಕೆಯನ್ನು ಸಾಹಿತಿ ದೇವನೂರ ಬರೆದಿದ್ದಾರೆ. ಈ ಪುಸ್ತಕದ ಒಂದೊಂದು ಅಕ್ಷರವೂ ಪ್ರತಿಯೊಬ್ಬ‌ ಮನುಷ್ಯನ ಎದೆಯೊಳಗೆ ಬೀಳಬೇಕು. ಅದು ವ್ಯರ್ಥವಾಗಲಾರದು. ದಯವಿಟ್ಟು ಎಲ್ಲರೂ ಈ ಪುಸ್ತಿಕೆಯನ್ನು ಓದಿ, ಓದಿಸಿ ಎಂದಿದ್ದಾರೆ.

ಓದಿ:'ವರ್ಗಾವಣೆ ಬೆದರಿಕೆಗೆ ಬಗ್ಗಲ್ಲ': ಹೈಕೋರ್ಟ್ ನ್ಯಾಯಮೂರ್ತಿ ಹೆಚ್‌.ಪಿ.ಸಂದೇಶ್ ದಿಟ್ಟ ನುಡಿ

ABOUT THE AUTHOR

...view details