ಬೆಂಗಳೂರು:ರಾಜ್ಯ ಸರ್ಕಾರ ಪಠ್ಯಪುಸ್ತಕದಲ್ಲಿ ಏಳೆಂಟು ತಿದ್ದುಪಡಿಗಳನ್ನು ಮಾತ್ರ ಮಾಡುವ ಮೂಲಕ ತಿಪ್ಪೆ ಸಾರಿಸುವ ಕಾರ್ಯ ಮಾಡುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಲೋಪ ದೋಷಗಳಾಗಿವೆ ಎಂದು ಸರ್ಕಾರ ಕೊನೆಗೂ ಒಪ್ಪಿಕೊಂಡಿದೆ. 1 ರಿಂದ 10 ನೇ ತರಗತಿಯವರೆಗಿನ ಕನ್ನಡ ಭಾಷಾ ಪಠ್ಯ ಪುಸ್ತಕ, ಸಮಾಜ ವಿಜ್ಞಾನ ಪಠ್ಯಪುಸ್ತಕ ಹಾಗೂ ಸೀಮಿತ ತರಗತಿಗಳ ಪರಿಸರ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ ಒಟ್ಟು 83 ಕಡೆ ತಿದ್ದುಪಡಿಗಳನ್ನು ಮಾಡಲಾಗಿದೆ ಎಂಬ ಮಾಹಿತಿ ಇದೆ. ಮಾಡಿರುವ ತಿದ್ದುಪಡಿಗಳಲ್ಲಿ ಬಹುತೇಕ ವಿವರಗಳು ಜೀವ ವಿರೋಧಿ ನಿಲುವಿನಿಂದ ಕೂಡಿವೆ ಎಂಬುದು ನಾಡಿನ ಶಿಕ್ಷಣ ತಜ್ಞರ ಅಭಿಪ್ರಾಯವಾಗಿದೆ ಎಂದಿದ್ದಾರೆ.
ಶಿಫಾರಸು ಪರಿಶೀಲಿಸಿ:ಸರ್ಕಾರ ತನ್ನ ಆದೇಶದಲ್ಲಿ ಏಳೆಂಟು ತಿದ್ದುಪಡಿಗಳನ್ನಷ್ಟೆ ಮಾಡಿ ತಿಪ್ಪೆ ಸಾರಿಸುವ ಕೆಲಸ ಮಾಡುತ್ತಿದೆ. ಇದು ಸರಿಯಾದ ಕ್ರಮವಲ್ಲ. ರೋಹಿತ್ ಚಕ್ರತೀರ್ಥ ಸಮಿತಿ ಮಾಡಿರುವ ಶಿಫಾರಸ್ಸುಗಳು ನಾಡಿನ ಜ್ಞಾನ ಪರಂಪರೆಗೆ ಅನುಗುಣವಾಗಿವೆಯೆ? ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುತ್ತವೆಯೆ? ಮಕ್ಕಳಿಗೆ ಕಲಿಸುವ ಸಂಗತಿಗಳು ದೇಶದ ಹಾಗೂ ಜಗತ್ತಿನ ವಿವಿಧ ಜ್ಞಾನ ಶಾಖೆಗಳ ವಿದ್ವಾಂಸರು ಒರೆಗೆ ಹಚ್ಚಿ, ಪರಿಶೀಲಿಸಿ ಸರ್ವ ಸಮ್ಮತಿಯ ಅಭಿಪ್ರಾಯಕ್ಕೆ ಬರಲಾಗಿದೆಯೆ? ಎಂಬ ಅಂಶಗಳೆಲ್ಲ ಮೊದಲು ಇತ್ಯರ್ಥವಾಗಬೇಕಾಗುತ್ತದೆ ಎಂದಿದ್ದಾರೆ.