ಬೆಂಗಳೂರು: ಕಲ್ಲು ಬಂಡೆಗಳನ್ನು ನುಂಗಿ, ಮಣ್ಣು ಬಗೆದು ಪರರಿಗೆ ಬಿಕರಿ(ಮಾರಾಟ) ಮಾಡಿಕೊಂಡು ಕೋಟೆ ಕೊತ್ತಲಗಳನ್ನು ಕಟ್ಟಿಕೊಂಡು ಮೆರೆಯುತ್ತಿರುವ 'ಡಿಸೈನ್ ವೀರರಿಗೆ' ನಮ್ಮ ನೆಲ, ನಮ್ಮ ಜಲ ಎನ್ನುವುದು ಈಗ ನೆನಪಿಗೆ ಬಂದಿದೆ. ಅಭದ್ರತೆ ಅಡಿಪಾಯವನ್ನೇ ಅಲ್ಲಾಡಿಸುತ್ತಿದೆ! ಅಲ್ಲವೇ? ಎಂದು ಡಿ.ಕೆ.ಶಿವಕುಮಾರ್ ಸಹೋದರರ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕನಕಪುರ, ರಾಮನಗರ ಯಾರೊಬ್ಬರ ಸ್ವತ್ತಲ್ಲ. ಈ ನೆಲದ ಮಕ್ಕಳು ಎಂದು ಬಡಾಯಿ ಬಿಡುವ ಸಹೋದರರು ಇದೇ ನೆಲವನ್ನು ಹೇಗೆಲ್ಲಾ ನುಂಗಿ ನೀರು ಕುಡಿಯುತ್ತಿದ್ದಾರೆ ಎಂಬುದು, ನನಗಿಂತ ಇಲ್ಲಿನ ಜನರಿಗೇ ಚೆನ್ನಾಗಿ ಗೊತ್ತು. ಆಟ ಎಂದ ಮೇಲೆ ಅಂತ್ಯವೂ ಇರಬೇಕಲ್ಲವೇ?. ಆ ಕ್ಷಣ ಹತ್ತಿರ ಬಂದಿದೆಯೇನೋ ಎಂದು ಹೇಳಿದ್ದಾರೆ.
ನಾವು ಹಾಸನದಿಂದ ಬಂದಿದ್ದೇವೆ ನಿಜ. ಇಲ್ಲಿನ ಜನ ನಮ್ಮನ್ನು ಮನೆ ಮಕ್ಕಳೆಂದು ಭಾವಿಸಿದ್ದಾರೆ. ನಾವೂ ಹಾಗೆಯೇ ನಡೆದುಕೊಂಡಿದ್ದೇವೆ. ಜನರ ಪ್ರೀತಿ, ಅಭಿಮಾನ, ನಮ್ಮ ದುಡಿಮೆ ಫಲವಾಗಿ ಜಿಲ್ಲೆಯಲ್ಲಿ ರಾಜಕೀಯ ಮಾಡುತ್ತಿದ್ದೇವೆ. ಜನರೇ ನಮಗೆ ಅಧಿಕಾರ ನೀಡಿದ್ದಾರೆ ಎಂದು ಹೆಚ್‌ಡಿಕೆ ತಿರುಗೇಟು ನೀಡಿದ್ದಾರೆ.