ಬೆಂಗಳೂರು : ಮಧ್ಯರಾತ್ರಿಯಲ್ಲಿ ಬಂದು ಕನ್ನಡಿಗರ ಹೆಮ್ಮೆಯ ಪುತ್ರ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪ ಮಾಡಿರುವ, ವಾಹನಗಳ ಮೇಲೆ ಕಲ್ಲು ಹೊಡೆದು ಬೆಂಕಿ ಇಟ್ಟಿರುವ ನಾಡದ್ರೋಹಿಗಳನ್ನು ರಾಜ್ಯದಿಂದ ಗಡಿಪಾರು ಮಾಡಬೇಕು. ಘಟನೆಯಲ್ಲಿ ಭಾಗಿಯಾಗಿರುವ ಸಂಘಟನೆಗಳನ್ನು ನಿಷೇಧ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ರಾಯಣ್ಣ ಪ್ರತಿಮೆ ವಿರೂಪಗೊಳಿಸಿದ ಕನ್ನಡ ದ್ರೋಹಿಗಳನ್ನು ಗಡಿಪಾರು ಮಾಡಿ, ಆ ಸಂಘಟನೆ ನಿಷೇಧಿಸಿ : ಹೆಚ್‌ಡಿಕೆ ಒತ್ತಾಯ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಮಾತನಾಡಿದ ಅವರು, ಮಧ್ಯರಾತ್ರಿ ಬಂದು ರಾಯಣ್ಣ ಪ್ರತಿಮೆಯನ್ನು ಹಾಳು ಮಾಡಿರುವುದು ಹೇಡಿತನ. ಭಾಷಾ ಸಾಮರಸ್ಯ ಹಾಳು ಮಾಡುವ ಇಂಥ ಕಿಡಿಗೇಡಿಗಳನ್ನು ಸುಮ್ಮನೆ ಬಿಡಬಾರದು ಎಂದರು.
ಎಲ್ಲರೂ ತಲೆತಗ್ಗಿಸುವಂತೆ ಆಗಿದೆ :ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಯನ್ನು ವಿರೂಪ ಮಾಡಿರುವುದು ಹೇಯ ಕೃತ್ಯ. ಇದು ವಿಕೃತವಲ್ಲದೇ ಮತ್ತೇನು ಅಲ್ಲ. ಈ ಮೂಲಕ ಕಿಡಿಗೇಡಿಗಳು ಕನ್ನಡಿಗರಿಗೆ ಮಾತ್ರವಲ್ಲ ಮರಾಠಿಗರಿಗೆ ಕೂಡ ದ್ರೋಹ ಎಸಗಿದ್ದಾರೆ. ಓರ್ವ ರಾಷ್ಟ್ರಪ್ರೇಮಿ, ಮಹಾನ್ ಯೋಧನಿಗೆ ಆಗಿರುವ ಈ ಅಪಚಾರದಿಂದ ಎಲ್ಲರೂ ತಲೆತಗ್ಗಿಸುವಂತೆ ಆಗಿದೆ.
ಈ ಕೃತ್ಯದಲ್ಲಿ ಯಾವುದೇ ಸಂಘಟನೆಗಳು ಭಾಗಿಯಾಗಿದ್ದರೂ ಅವುಗಳನ್ನು ರಾಜ್ಯದಲ್ಲಿ ನಿಷೇಧ ಮಾಡಬೇಕು ಹಾಗೂ ತಪ್ಪಿತಸ್ಥರನ್ನು ರಾಜ್ಯದಿಂದ ಗಡೀಪಾರು ಮಾಡಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು. ಈ ಘಟನೆಯ ಹಿಂದೆ ಯಾರಿದ್ದಾರೆ ಎನ್ನುವುದನ್ನು ಹೊರಗೆಳೆದು, ಷಡ್ಯಂತ್ರ ನಡೆಸಿದ ಎಲ್ಲರಿಗೂ ತಕ್ಕ ಶಾಸ್ತಿ ಮಾಡಬೇಕು ಎನ್ನುವುದು ನನ್ನ ಒತ್ತಾಯವಾಗಿದೆ ಎಂದರು.
ಎಂಇಎಸ್ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಮೃದು ಧೋರಣೆ ಅನುಸರಿಸುತ್ತಿವೆ ಎಂದು ಜನ ದೂರುತ್ತಿದ್ದಾರಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಅವರು, ಯಾರ ಮೇಲೆ ಯಾರಿಗೆ ಮೃದು ಧೋರಣೆ ಇದೆ ಎನ್ನುವುದಕ್ಕಿಂತ ನಮ್ಮ ನೆಲದಲ್ಲೇ ಇದ್ದು, ಇಲ್ಲಿನ ನೀರು ಗಾಳಿ ಅನ್ನ ಸೇವಿಸುತ್ತಾ ನಮ್ಮ ನಾಡಿನ ಬಗ್ಗೆ ದ್ರೋಹ ಚಿಂತನೆ ಮಾಡುವುದು ಘೋರ ಅಪರಾಧ. ಇದಕ್ಕೆ ಕ್ಷಮೆ ಇಲ್ಲ ಎಂದರು.
ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೆ ನಾನು ಹೇಳುವುದು ಇಷ್ಟೇ, ಎರಡು ರಾಜ್ಯಗಳ ನಡುವೆ ದ್ವೇಷವನ್ನು ಬಿತ್ತಿ ಸಾಮರಸ್ಯ ಹಾಳು ಮಾಡುವಂತ ವಿಚಿತ್ರ ಶಕ್ತಿಗಳಿಗೆ ಬೆಂಬಲ ಕೊಟ್ಟು ನಿಮ್ಮ ರಾಜಕೀಯ ಶಕ್ತಿ ವೃದ್ಧಿ ಮಾಡಿಕೊಳ್ಳಲು ಸಾಧ್ಯವಿಲ್ಲ. ನಾವು ಪರಸ್ಪರ ಸಹೋದರ ಭಾವದಿಂದ ಕೆಲಸ ಮಾಡಬೇಕು. ಒಕ್ಕೂಟ ವ್ಯವಸ್ಥೆಯನ್ನು ನಾಶ ಮಾಡುವಂತ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಎಂಇಎಸ್ ಸಂಘಟನೆಯನ್ನು ನಿಷೇಧ ಮಾಡುವ ಬಗ್ಗೆ ಸರ್ಕಾರವೇ ಕಾನೂನು ವ್ಯಾಪ್ತಿಯಲ್ಲಿ ಆಲೋಚನೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಿಎಂ ಭಾವನಾತ್ಮಕ ಹೇಳಿಕೆ ತಪ್ಪೇನಿಲ್ಲ :ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ತವರು ಕ್ಷೇತ್ರದಲ್ಲಿ ತಮ್ಮ ಅಧಿಕಾರದ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿರುವ ಬಗ್ಗೆ ನಾನು ವ್ಯಾಖ್ಯಾನ ಮಾಡಲು ಹೋಗುವುದಿಲ್ಲ ಎಂದ ಮಾಜಿ ಸಿಎಂ, ಶಿಗ್ಗಾಂವಿಯಲ್ಲಿ ಅವರು ನಾಲ್ಕು ಚುನಾವಣೆಗಳನ್ನು ಸತತವಾಗಿ ಗೆದ್ದಿದ್ದಾರೆ. ಜನ ಆಶೀರ್ವಾದ ಮಾಡಿದ್ದಾರೆ. ಹೀಗಾಗಿ, ಆ ಭಾವನೆಗಳು ಸಹಜ. ಭಾವನಾತ್ಮಕ ವ್ಯಕ್ತಿಗಳಿಗೆ ಮಾತ್ರ ಅದು ಅರ್ಥವಾಗುತ್ತದೆ. ಆ ಸ್ಥಾನಕ್ಕೆ ಅವರು ಬರಬೇಕಾದರೆ ಆ ಕ್ಷೇತ್ರದ ಜನರೇ ಕಾರಣ. ಹೀಗಾಗಿ, ಸಿಎಂ ಅವರು ಭಾವನಾತ್ಮಕವಾಗಿ ಮಾತನಾಡಿರಬಹುದು. ಅದರಲ್ಲಿ ತಪ್ಪೇನಿಲ್ಲ ಎಂದರು.
ಅವರ ಮಾತುಗಳು ತಾಯಿ ಹೃದಯ ಇರುವವರಿಗೆ ಮಾತ್ರ ಅರ್ಥವಾಗುತ್ತವೆ. ಬೇರೆಯವರಿಗೆ ಅದು ಅರ್ಥ ಆಗಲ್ಲ. ನನ್ನ ಬಗ್ಗೆಯೂ ಕೆಲವರು ಮಾತನಾಡಿದ್ದಾರೆ. ನಾನು ಅನೇಕ ಸಲ ಹೇಳಿದ್ದೇನೆ, ನನಗೆ ರಾಜಕೀಯ ಜನ್ಮ ಕೊಟ್ಟವರು ರಾಮನಗರದ ಜನ ಅಂತಾ. ಅವರ ಬಗ್ಗೆ ಹೇಳುವಾಗ ನಾನೂ ಭಾವುಕನಾಗಿದ್ದೇನೆ. ಇದು ಮನುಷ್ಯ ಸಹಜ ಗುಣ ಎಂದು ಕುಮಾರಸ್ವಾಮಿ ಅವರು ಅಭಿಪ್ರಾಯಪಟ್ಟರು. ಮುಖ್ಯಮಂತ್ರಿ ಬದಲಾವಣೆ ಆಗುತ್ತೆ ಅಂತಾ ಬೊಮ್ಮಾಯಿ ಅವರು ಹೀಗೆ ಮಾತನಾಡಿದ್ದಾರೆ ಎನ್ನುವುದನ್ನು ನಾನು ಒಪ್ಪಲು ತಯಾರಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಅಧಿವೇಶನ ಕಲಾಪ ಕಥೆ ಏನಾಗಿದೆ?:ವಿಧಾನ ಮಂಡಲ ಕಲಾಪಕ್ಕೆ ಹೋಗಿ ಏನು ಮಾಡಲಿ. ಐದು ದಿನ ಕಲಾಪ ನಡೆದಿದೆ. ಟಿಎ, ಡಿಎ ಬಿಲ್ ಕ್ಲೈಮ್ ಮಾಡಿಕೊಳ್ಳಲು ಹೋಗಬೇಕು ಅಷ್ಟೇ.. ಈ ಐದು ದಿನಗಳ ಕಲಾಪ ಅದೆಷ್ಟು ಮೌಲ್ಯಾಧಾರಿತವಾಗಿತ್ತು? ಒಂದು ದಿನ ಭೈರತಿ ಬಸವರಾಜು ಪ್ರಕರಣ ಇಟ್ಟುಕೊಂಡು ಬಾವಿಗೆ ಇಳಿದರು.
ಇನ್ನೊಂದು ದಿನ ಸಂಡೂರು ತಹಶೀಲ್ದಾರ್ ವಿಷಯ ಇಟ್ಟುಕೊಂಡು ಒಂದು ದಿನದ ಕಲಾಪವನ್ನು ವ್ಯರ್ಥ ಮಾಡಿದರು. ಇನ್ನೊಂದು ದಿನ ಮಾಜಿ ಸ್ಪೀಕರ್ ಹೇಳಿಕೆಗೆ ಕಲಾಪ ಬಲಿ ಆಯಿತು. ಕಲಾಪದಲ್ಲಿ ಏನು ಚರ್ಚೆ ಆಯಿತು? ಇದನ್ನೆಲ್ಲ ಕೇಳಲಿಕ್ಕೆ ನೋಡಲಿಕ್ಕೆ ಹೋಗಬೇಕಿತ್ತಾ ನಾನು? ಎಂದು ಪ್ರಶ್ನಿಸಿದ್ರು. ನಾಳೆ ನಾನು ಕಲಾಪಕ್ಕೆ ಹೋಗುತ್ತೇನೆ. ಸದನಕ್ಕೆ ಬೇಕಿಲ್ಲದ ವಿಷಯಗಳಿಗೆ ಮಹತ್ವ ಕೊಡುವ ವ್ಯಕ್ತಿ ನಾನಲ್ಲ.
ಕಳೆದ ಬಾರಿ ಬೆಂಗಳೂರಿನಲ್ಲಿ ನಡೆದ ಅಧಿವೇಶನದಲ್ಲಿ ಕೋವಿಡ್ ಬಗ್ಗೆ ಸರ್ಕಾರಕ್ಕೆ ಗುಣಾತ್ಮಕ ಸಲಹೆ ನೀಡಿದ್ದೆ. ಅದು ಎಷ್ಟರ ಮಟ್ಟಿಗೆ ಜಾರಿ ಆಗಿದೆಯೋ ಗೊತ್ತಿಲ್ಲ. ಮಂಗಳವಾರ ಮತ್ತು ಬುಧವಾರ ನಾನು ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳು ಮತ್ತು ಸಮಸ್ಯೆಗಳ ಬಗ್ಗೆ ಮಾತನಾಡಲಿದ್ದೇನೆ. ಗುರುವಾರ ಮತ್ತೆ ನಾನು ಬಿಡದಿಗೆ ವಾಪಸ್ ಬರಬೇಕಿದೆ. ಅಲ್ಲಿ ಪಟ್ಟಣ ಪಂಚಾಯತ್ ಚುನಾವಣೆ ಇದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಇದನ್ನೂ ಓದಿ:ಬೆಳಗಾವಿಯ ಅಧಿವೇಶನದಲ್ಲಿ ನಾಳೆಯೇ ಮತಾಂತರ ನಿಷೇಧ ಕಾಯ್ದೆ ಮಂಡನೆ : ಸಚಿವ ಸಂಪುಟ ತೀರ್ಮಾನ