ಬೆಂಗಳೂರು:ಜೆಡಿಎಸ್ ಪಕ್ಷವನ್ನು ಸಂಘಟಿಸಲು ಹೊಸ ಚಿಂತನೆ ನಡೆಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದ ಮಟ್ಟದಲ್ಲಿ ಹೊಸದಾಗಿ 5,000 ಕಾರ್ಯಕರ್ತರನ್ನು ಗುರುತಿಸಲು ಯೋಜನೆ ರೂಪಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಪಕ್ಷ ಸಂಘಟನೆಗೆ ಜೆಡಿಎಸ್ ಹೊಸ ಚಿಂತನೆ .. ಸಂವಾದದಲ್ಲಿ ಮಾಹಿತಿ ಬಿಚ್ಚಿಟ್ಟ ಹೆಚ್ಡಿಕೆ ಜೆ ಪಿ ನಗರದ ತಮ್ಮ ನಿವಾಸದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿಗೆ ಸಹಕಾರ ನೀಡಿದ ಪಕ್ಷದ ಕಾರ್ಯಕರ್ತರಿಗೆ ಧನ್ಯವಾದಗಳು. ಈ ನಾಡಿನ ಅಭಿವೃದ್ಧಿಗೆ ಕೆಲಸ ಮಾಡಲು ಪ್ರೋತ್ಸಾಹ ಕೊಟ್ಟಿದ್ದೀರಿ. ನಾನು ರಾಜಕಾರಣಕ್ಕೆ ಬಂದಿದ್ದೇ ಆಕಸ್ಮಿಕ. ನಾನು ರಾಜಕಾರಣದ ಪ್ರವೇಶ ಮಾಡಿದಾಗ ಮೊದಲನೆಯ ಪ್ರಯತ್ನದಲ್ಲಿ ಆಶೀರ್ವಾದ ಮಾಡಿದ್ದೀರಿ. ನನ್ನ ವೈಯಕ್ತಿಕ ನಿರ್ಧಾರಗಳು ಏನೇ ಇದ್ದರೂ ನಾಡಿನ ಜನತೆಗೆ ಹಾಗೂ ಪಕ್ಷದ ನಿಷ್ಠಾವಂತ ಲಕ್ಷಾಂತರ ಕಾರ್ಯಕರ್ತರ ದುಡಿಮೆಗೆ ಎಂದಿದ್ದಾರೆ.
ಪಕ್ಷದ ಕಚೇರಿಯಲ್ಲಿ ನೀವೆಲ್ಲರೂ ಸನ್ಮಾನ ಮಾಡಿದ ಸಂದರ್ಭದಲ್ಲಿ ಕಣ್ಣಲ್ಲಿ ನೀರು ಹಾಕಿರುವುದನ್ನು ಹಲವಾರು ರೀತಿಯಲ್ಲಿ ವ್ಯಾಖ್ಯಾನಗಳು ಮಾಡಿದ್ದಾರೆ. ಆದರೆ, ಇರುವಂತಹ ವಾಸ್ತವಾಂಶವನ್ನು ನಿಮ್ಮ ಮುಂದೆ ಹೇಳಬೇಕಾದರೆ ನನ್ನ ಕಣ್ಣಲ್ಲಿ ನೀರು ಬಂದಿತ್ತು. ಹಲವಾರು ರೀತಿಯ ಅಪಪ್ರಚಾರಗಳ ನಡುವೆಯೂ ಸಹ ನಿಮ್ಮಂತಹ ನಿಷ್ಠಾವಂತ ಕಾರ್ಯಕರ್ತರರಿಂದ ಪಕ್ಷದ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದ್ದೇವೆ ಎಂದು ಹೆಚ್ಡಿಕೆ ಹೇಳಿದರು.
ಪಕ್ಷ ಸಂಘಟನೆಗೆ ಹೊಸ ಚಿಂತನೆ:ಜೆಡಿಎಸ್ ಪಕ್ಷವನ್ನು ಸಂಘಟಿಸಲು ಹೊಸ ಚಿಂತನೆ ನಡೆಸಿರುವ ಕುಮಾರಸ್ವಾಮಿ ಅವರು, ಪ್ರತಿ ವಿಧಾನಸಭಾ ಕ್ಷೇತ್ರದ ತಾಲೂಕು ಮಟ್ಟದಲ್ಲಿ ಹೊಸದಾಗಿ 5,000 ಕಾರ್ಯಕರ್ತರನ್ನು ಗುರುತಿಸಲು ಯೋಜನೆ ರೂಪಿಸಿದ್ದಾರೆ. ಪ್ರಾಥಮಿಕ ಹಂತದಲ್ಲಿ ಐದು ತಾಲೂಕುಗಳನ್ನು ಪ್ರಾಯೋಗಿಕ ಯೋಜನೆಗೆ ಸಿದ್ಧಪಡಿಸಿದ್ದಾರೆ. ಈ ಕುರಿತು ಜಿಲ್ಲಾ ಕಾರ್ಯಕರ್ತರೊಂದಿಗೆ ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ನಾನು ಪಕ್ಷದ ಸಂಘಟನೆ ವಿಚಾರದಲ್ಲಿ ಯಾವುದೇ ರೀತಿಯಲ್ಲೂ ನಿಷ್ಕ್ರಿಯನಾಗಿಲ್ಲ. ಸಂಘಟನೆ ಸಂಬಂಧ ತಾಲೂಕು ಮಟ್ಟದಲ್ಲಿ ಹೊಸದಾಗಿ 5,000 ಕಾರ್ಯಕರ್ತರನ್ನು ಗುರುತಿಸುವ ಯೋಜನೆಯನ್ನು ರೂಪಿಸಲಾಗಿದೆ. ಪ್ರಾಥಮಿಕ ಹಂತದಲ್ಲಿ ಪಾವಗಡ, ಮುಳಬಾಗಿಲು, ಬಂಗಾರಪೇಟೆ, ಹುಣಸೂರು, ಇಂಡಿ ತಾಲೂಕುಗಳನ್ನು ಯೋಜನೆಗೆ ಬಳಕೆ ಮಾಡಲಾಗುವುದು. ಪಕ್ಷದ ಕಾರ್ಯಕರ್ತರು ಸಾವಿರಾರು ಮಂದಿಯಿದ್ದು, ಪ್ರತಿಯೊಬ್ಬರು 50 ಮಂದಿಯನ್ನು ಪಕ್ಷದ ಕಾರ್ಯಕರ್ತರನ್ನಾಗಿ ಮಾಡಿದರೆ ಪಕ್ಷವು ಬಲಗೊಳ್ಳಲಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಮುಂದಾಗಬೇಕು ಎಂದು ಕರೆ ನೀಡಿದರು.
ಕೋವಿಡ್ ಇರುವ ಕಾರಣ ಪ್ರತಿ ಜಿಲ್ಲೆಗೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ. ನಿಯಂತ್ರಣವಾದ ನಂತರ ಜಿಲ್ಲೆಗಳಿಗೆ ಭೇಟಿ ನೀಡಲಾಗುವುದು. ಮೊದಲಿನಂತೆ ಸಕ್ರಿಯವಾಗಿಲ್ಲ ಎಂಬುದು ವಾಸ್ತವವಾಗಿದ್ದರೂ, ಕಾರ್ಯಕರ್ತರು ನಾನು ನಿಷ್ಕ್ರಿಯನಾಗಿದ್ದೇನೆ ಎಂದು ಭಾವಿಸಬಾರದು. ಕಾರ್ಯಕರ್ತರು ಹುರುಪಿನಿಂದ ಕೆಲಸ ಮಾಡಬೇಕು. ಸರ್ಕಾರದ ತಪ್ಪುಗಳನ್ನು ದಾಖಲೆ ಸಮೇತವಾಗಿ ಮುಂದೂಡುವ ಕೆಲಸ ಮಾಡುತ್ತಿದ್ದೇನೆ. ಕೇವಲ ಪ್ರಚಾರಕ್ಕಾಗಿ ಯಾವುದೇ ಆರೋಪ ಮಾಡುವುದಿಲ್ಲ. ಹಿಂದೆಯೂ ಸಹ ದಾಖಲೆಗಳ ಸಮೇತ ಸರ್ಕಾರದ ತಪ್ಪುಗಳನ್ನು ಮುಂದಿಟ್ಟಿದ್ದೇನೆ. ದೇಶದಲ್ಲಿನ ಈಗಿನ ವ್ಯವಸ್ಥೆಯಲ್ಲಿ ಸಂವಿಧಾನ ಚೌಕಟ್ಟಿನಲ್ಲಿರುವ ಸಂಸ್ಥೆಗಳು ನಾಡಿನ ಅಭ್ಯುದಯಕ್ಕಾಗಿ ಅವುಗಳ ಜವಾಬ್ದಾರಿ ನಿರ್ವಹಣೆಯಲ್ಲಿ ಲೋಪಗಳನ್ನು ಎಸಗುತ್ತಿವೆ. ನಿಷ್ಪಕ್ಷಪಾತವಾಗಿ, ನ್ಯಾಯವಾಗಿ ನಡೆಯುವಂತಹ ಸಂಸ್ಥೆಗಳಿಗೆ ಕಡಿವಾಣ ಹಾಕಿ ಸಂಪೂರ್ಣವಾಗಿ ತಮ್ಮ ಕಡೆ ತೆಗೆದುಕೊಳ್ಳುವ ಅಡ್ಡದಾರಿಯಲ್ಲಿ ಹೋಗಲಾಗುತ್ತಿದೆ. ಇಂತಹ ವಿಷ ವರ್ತುಲದಲ್ಲಿ ಎಂತಹ ದಾಖಲೆಗಳನ್ನು ಇಟ್ಟರೂ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಇದೆ. ಆದರೆ, ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ್ದೇನೆ ಎಂದು ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ಹೇಳಿದರು.
ಪ್ರವಾಹ ವಿಚಾರದಲ್ಲಿ ರಾಜ್ಯ ಸರ್ಕಾರ ಜನರ ಆಶೋತ್ತರಗಳಿಗೆ ತಕ್ಕಂತೆ ಸ್ಪಂದಿಸಿಲ್ಲ. ಹಲವು ಅನಾಹುತಗಳು ನಡೆಯುತ್ತಿವೆ. ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರುವಲ್ಲಿ ಸರ್ಕಾರ ವಿಫಲವಾಗುತ್ತಿದೆ. ಕೋವಿಡ್ನಿಂದ ಜನರನ್ನು ರಕ್ಷಿಸಲು ಸರ್ಕಾರ ಮುಂದಾಗದೆ, ಮಾಧ್ಯಮಗಳ ಮುಂದೆ ಮುಖದರ್ಶನ ಕೊಡಲು ಮಾತ್ರ ಸೀಮಿತವಾಗಿದೆ. ಸರಿಯಾದ ಪೂರ್ವಸಿದ್ಧತೆಗಳನ್ನು ಕೈಗೊಂಡಿಲ್ಲ. ಸೋಂಕಿತರನ್ನು ನೋಡುವ ದೃಷ್ಟಿಕೋನ ಬದಲಾಗುತ್ತಿದೆ. ಈ ವಿಷಯವನ್ನು ಮನೆ-ಮನೆಗೆ ತಲುಪಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದು ಸೂಚಿಸಿದರು.
ಕೋವಿಡ್ ವೈದ್ಯಕೀಯ ಉಪಕರಣ ಖರೀದಿಯಲ್ಲಿ ಸರ್ಕಾರ 323 ಕೋಟಿ ರೂ. ವೆಚ್ಚವಾಗಿದೆ ಎಂದು ಹೇಳುತ್ತಿದೆ. ಆದರೆ, ಕಾಂಗ್ರೆಸ್ 2 ಸಾವಿರ ಕೋಟಿ ರೂ. ಲೂಟಿಯಾಗಿದೆ ಎಂದು ಹೇಳುತ್ತಿದೆ. ಪ್ರಸ್ತುತ ಸನ್ನಿವೇಶದಲ್ಲಿ ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡುವುದಕ್ಕಿಂತ ಜನರ ಜೀವ ರಕ್ಷಣೆ ಮಾಡುವುದು ಮುಖ್ಯ. ಈ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕಾದ ಅಗತ್ಯತೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿಡಿಯೋ ಸಂವಾದದಲ್ಲಿ ಪಕ್ಷ ಕಾರ್ಯಕರ್ತರಿಗೆ ತಿಳಿಸಿದರು.