ಕರ್ನಾಟಕ

karnataka

ETV Bharat / city

ಯಾವುದೇ ಕಾರಣಕ್ಕೂ ರಾಷ್ಟ್ರೀಯ ಪಕ್ಷಗಳ ಮನೆ ಬಾಗಿಲಿಗೆ ಹೋಗಲ್ಲ: ಹೆಚ್.ಡಿ. ಕುಮಾರಸ್ವಾಮಿ ಪ್ರತಿಜ್ಞೆ - 2023 ರ ಚುನಾವಣೆ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ

2023 ರ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

kumaraswamy
ಹೆಚ್.ಡಿ.ಕುಮಾರಸ್ವಾಮಿ

By

Published : Jan 27, 2022, 5:58 PM IST

ಬೆಂಗಳೂರು:ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಅವರು 2023ರ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಮತ್ತೊಂದು ಪ್ರತಿಜ್ಞೆ ಮಾಡಿದ್ದಾರೆ. ಮುಂದಿನ ಬಾರಿ ನಡೆಯುವ ಚುನಾವಣೆಯಲ್ಲಿ ಯಾವುದೇ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಮೊದಲ ಕೋರ್ ಕಮಿಟಿ ಸಭೆಗೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ರಾಷ್ಟ್ರೀಯ ಪಕ್ಷಗಳ ಮನೆ ಬಾಗಿಲಿಗೆ ಇಲ್ಲಿಯವರೆಗೂ ಹೋಗಿಲ್ಲ. ಮುಂದೆಯೂ ಹೋಗುವುದಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಯಾರ ಜೊತೆಯೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದರು.

ನಿನ್ನೆ ನಮ್ಮ ಪಕ್ಷದ ಸಂಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದೆ. ಕೆಲವು ಮಾಧ್ಯಮದಲ್ಲಿ ತಪ್ಪು ಗ್ರಹಿಕೆ ಹೋಗಿದೆ. 2023 ಕ್ಕೆ ಕಾರ್ಯಕರ್ತರ ಶ್ರಮದಿಂದ ನಮ್ಮ ಶ್ರಮ ಸಾಬೀತು ಮಾಡುತ್ತೇವೆ. ಆಗ ಜೆಡಿಎಸ್​ಗಿರುವ ಶಕ್ತಿ ಏನು, ಜೆಡಿಎಸ್ ಬಿಟ್ಟು ಏನು ಮಾಡಲು ಆಗಲ್ಲ ಅನ್ನೋದರ ಬಗ್ಗೆ ಹೇಳಿದ್ದೆ ಎಂದು ಸ್ಪಷ್ಟೀಕರಣ ನೀಡಿದರು.

123 ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ..ಅತಂತ್ರ ವಿಧಾನಸಭೆ ನಿರ್ಮಾಣವಾದಾಗ ರಾಷ್ಟ್ರೀಯ ಪಕ್ಷಗಳು ನಮ್ಮ ಮನೆ ಬಾಗಿಲಿಗೆ ಬಂದಿವೆ. 2023 ರ ವಿಧಾನಸಭೆ ಚುನಾವಣೆಯಲ್ಲಿ 123 ಕ್ಷೇತ್ರಗಳಲ್ಲಿ ಗೆಲ್ಲಬೇಕೆಂಬ‌ ಗುರಿ ತಲುಪಲು ಶ್ರಮಿಸುತ್ತೇವೆ ಎಂದರು.

ಕೊರೊನಾ ಸೋಂಕು ಇರುವುದರಿಂದ ಪಕ್ಷ ಸಂಘಟನೆಗೆ ವೇಗ‌ ನೀಡಿಲ್ಲ. ನಮ್ಮ ಸಂಘಟನೆಯಿಂದ ಜನರಿಗೆ ತೊಂದರೆ ಆಗಬಾರದು ಎಂದು ಸಂಘಟನೆಗೆ ಹೆಚ್ಚು ಒತ್ತು ಕೊಟ್ಟಿಲ್ಲ.‌ ಆದರೆ ಆಂತರಿಕವಾಗಿ ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ಜೆಡಿಎಸ್ ಅತಂತ್ರ ಆದಾಗ ಸ್ವತಂತ್ರರಾಗ್ತಾರೆ ಎಂದು‌ ಮುಖ್ಯಮಂತ್ರಿ ಹೇಳಿದ್ದಾರೆ. ನಾವೆಂದೂ ಅತಂತ್ರರಾಗಿಲ್ಲ. ಅವರೇ ಅತಂತ್ರವಾದಾಗ ಜೆಡಿಎಸ್ ಬಾಗಿಲು ಬಡಿದಿದ್ದಾರೆ ಎಂದು ತಿರುಗೇಟು ನೀಡಿದರು.

ಓದಿ:ಅಕ್ರಮ ಗಣಿಗಾರಿಕೆ: ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಕೋರ್ಟ್ ಆದೇಶ

ಬಿಜೆಪಿ‌ ನಾಯಕರಲ್ಲೇ ಕಡಿವಾಣ ಹಾಕುವ ಸ್ಥಿತಿ ಇಲ್ಲ.‌ ಗೊಂದಲ ಸೃಷ್ಟಿ ಮಾಡುವುದಕ್ಕೆ ನಾವು ಅವಕಾಶ ಕೊಟ್ಟಿಲ್ಲ.‌ ಅವರನ್ನು ಹದ್ದುಬಸ್ತಲ್ಲಿ ಇಟ್ಟುಕೊಳ್ಳಲಿಕ್ಕೆ ಆಗಿಲ್ಲ. ಅವರ ಪಕ್ಷದ ಉಳಿವಿಗಾಗಿ ಏನು ಮಾಡುತ್ತಿದ್ದಾರೋ, ಹಾಗೇ ನಾವೂ ಮಾಡುತ್ತಿದ್ದೇವೆ. ನಮಗೆ ಸವಾಲಿದೆ, ಗುರಿ ಇದೆ. ಪ್ರತ್ಯುತ್ತರ ಕೊಡಲು ನಾವು ಸಿದ್ಧರಿದ್ದೇವೆ ಎಂದು ಹೇಳಿದ್ರು.

ಸಿ.ಎಂ. ಇಬ್ರಾಹಿಂ ಬಂದರೆ ಸ್ವಾಗತ:ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಹಿರಿಯರಿದ್ದಾರೆ. ನಮ್ಮ ಪಕ್ಷ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಏಳು ಬೀಳಿನಲ್ಲಿ ಅವರು ಜೊತೆಯಾದವರು.‌ ಮೇಲ್ಮನೆ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಅವರ ಹೆಸರು ಕೇಳಿ‌ ಬಂದಿತ್ತು. ಅವರಿಗೆ ಇನ್ನೂ ದೇವೇಗೌಡರು ಹಾಗೂ ನಮ್ಮ ಪಕ್ಷದ ಬಗ್ಗೆ ವ್ಯಾಮೋಹ ಇದೆ.‌ ಅವರು ಪಕ್ಷಕ್ಕೆ ಬಂದರೆ ಸ್ವಾಗತಿಸುವುದಾಗಿ ಕುಮಾರಸ್ವಾಮಿ ಹೇಳಿದರು.

ನಾವು ಕದ್ದು ಮುಚ್ಚಿ ಯಾವುದನ್ನೂ ಮಾಡಿಲ್ಲ. ಇಂದೂ ಕೂಡ ನಾನು ಕರೆ ಮಾಡಿ ಇಬ್ರಾಹಿಂ ಅವರ ಜೊತೆ ಮಾತನಾಡಿದ್ದೇನೆ. ಅವರು ನಮ್ಮ ಪಕ್ಷಕ್ಕೆ ಬಂದರೆ ಸೂಕ್ತ ಸ್ಥಾನಮಾನ ಕೊಡುತ್ತೇವೆ ಎಂದರು.

ವಿಧಾನಸಭೆಯಲ್ಲಿ ಪಕ್ಷದ್ರೋಹದ ಚರ್ಚೆ:ಜೆಡಿಎಸ್​ ಪಕ್ಷ ಮುಗಿದೇ ಹೋಯ್ತು ಅಂತಾರೆ.‌ ಕಾರ್ಯಕರ್ತರ ಶ್ರಮ ನಮ್ಮ ಪಕ್ಷಕ್ಕೆ ಇದೆ. ನಾಡಿನ ನೀರಾವರಿ ಯೋಜನೆ ಜಾರಿ ಆಗಬೇಕು. ನೀರಾವರಿ, ನದಿ ವಿಚಾರವಾಗಿ ರಾಜ್ಯದ ಜನರಿಗೆ ಎರಡು ರಾಷ್ಟ್ರೀಯ ಪಕ್ಷಗಳು ದ್ರೋಹ ಮಾಡಿರುವುದನ್ನು ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಹೇಳಿದರು‌.

ಜನತಾ ಪರಿವಾರದ ನಾಯಕರು ಸೆಟಲ್ ಆಗಿದ್ದಾರೆ. ಅವರನ್ನು ವಾಪಸ್ ತರುವ ನಿರೀಕ್ಷೆ ಇಟ್ಟುಕೊಂಡಿಲ್ಲ. ಯುವ ನಾಯಕತ್ವ ತರುವ ನಿಟ್ಟಿನಲ್ಲಿ ಚಿಂತಿಸಲಾಗುತ್ತಿದೆ. ಹೊಸ ನಾಯಕರಿಗೆ ಜವಾಬ್ದಾರಿ ನೀಡಲಾಗುತ್ತಿದೆ. ಹೊಸ ನಾಯಕರ ಸೃಷ್ಟಿ ಮೊದಲಿನಿಂದಲೂ ನಮಗೆ ಗುರು ಮನೆ ಇದ್ದಂತೆ. ಹಲವಾರು ಜನ ನಾಯಕರಾಗಿ‌ ಬೆಳೆದು ಹೋಗಿದ್ದಾರೆ ಎಂದರು.

ಈ ವೇಳೆ ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್, ಶಾಸಕರಾದ ಮಂಜುನಾಥ್, ಕೃಷ್ಣಾರೆಡ್ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

TAGGED:

ABOUT THE AUTHOR

...view details