ಬೆಂಗಳೂರು:ರಾಜೀನಾಮೆಗೆ ನನ್ನ ಮೇಲೆ ಯಾವುದೇ ಒತ್ತಡ ಇರಲಿಲ್ಲ. ನಾನೇ ಸ್ವಯಂಪ್ರೇರಣೆಯಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಕೋವಿಡ್ಗೆ ಸಂಬಂಧಿಸಿದ ಚರ್ಚೆ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಅವರು, ನಾನು ತೆಗೆದುಕೊಂಡ ತೀರ್ಮಾನವನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಹೊಗಳಿದರು. ದೇಶದ ಜನ ಕೂಡ ನನ್ನ ರಾಜೀನಾಮೆ ನಿರ್ಧಾರ ಒಪ್ಪಿದರು. ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಲಾಯ್ತು ಎಂದು ಸದನಕ್ಕೆ ಸ್ಪಷ್ಟನೆ ನೀಡಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೇರೆಯವರಿಗೆ ಅವಕಾಶ ಸಿಗಬೇಕೆಂದು ಬಸವರಾಜ ಬೊಮ್ಮಾಯಿಯವರನ್ನು ಸಿಎಂ ಮಾಡಿದ್ದು ನಾನೇ. ಇದರಲ್ಲಿ ಯಾರಿಗೂ ಯಾವುದೇ ಅನುಮಾನ ಬೇಡ. ನನ್ನ ಮೇಲೆ ಯಾವುದೇ ಒತ್ತಡ ಇರಲಿಲ್ಲ ಎಂದು ಬಿಎಸ್ವೈ ಹೇಳಿದರು.
ಸಚಿವ ಆರ್.ಅಶೋಕ್ ಮಾತನಾಡಿ, ನೋಡಿ ಸಿದ್ದರಾಮಯ್ಯ ಅವರೇ ಇದು ನಮ್ಮ ಬಿಜೆಪಿ ಸಂಸ್ಕೃತಿ. ನೀವು ಪಂಜಾಬ್ನಲ್ಲಿ ನೋಡಿ. ಹೇಗಾಗಿದೆ ಅಲ್ಲಿನ ಪರಿಸ್ಥಿತಿ ಎಂದು ಕಾಲೆಳೆದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು ಬಸನಗೌಡ ಪಾಟೀಲ್ ಯತ್ನಾಳ್, ಸಿ.ಪಿ.ಯೋಗೇಶ್ವರ್ ಏನೇನೋ ಹೇಳುತ್ತಿದ್ದರೂ ಅವರ ವಿರುದ್ಧ ಏನು ಕ್ರಮ ತೆಗೆದುಕೊಳ್ಳಲಾಗಿದೆ. ಅವರು ಯಾವ ಪಕ್ಷ ಎಂದು ತಿರುಗೇಟು ನೀಡಿದರು.
ಜೊತೆಗೆ ಯಡಿಯೂರಪ್ಪ ಅವರು ಇಲ್ಲ ಅಂದಿದ್ರೆ ನೀವು ಯಾರೂ ಮುಂದಿನ ಸಾಲಿನಲ್ಲಿ ಕೂರುತ್ತಿರಲಿಲ್ಲ. ಯಡಿಯೂರಪ್ಪ ಅವರು ಆಪರೇಷನ್ ಕಮಲ ಮಾಡಿದ್ದಕ್ಕೆ ನೀವು ಇಲ್ಲಿ ಕೂತಿರುವುದು ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು. ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಡಿ.ಕೆ. ಶಿವಕುಮಾರ್, ಹೌದು ಯಡಿಯೂರಪ್ಪ ಅವರು ಆಪರೇಷನ್ ಕಮಲ ಮಾಡಿದ್ದಕ್ಕೆ ನಾವು ಈ ಕಡೆ, ನೀವು ಆ ಕಡೆ ಕೂತಿರುವುದು ಎಂದು ಹೇಳಿದರು.
ಈ ವೇಳೆ ಜೆಡಿಎಸ್ ಸದಸ್ಯ ಹೆಚ್.ಡಿ.ರೇವಣ್ಣ ಮಾತನಾಡಿ, ಸಚಿವ ಡಾ.ಸುಧಾಕರ್ ಯಾವಾಗಲೂ ಯಡಿಯೂರಪ್ಪ ಹಿಂದೆಯೇ ಇರುತ್ತಿದ್ದರು. ಇದೀಗ ಬಸವರಾಜ ಬೊಮ್ಮಾಯಿ ಹಿಂದೆಯೇ ಇರುತ್ತಾರೆ. ಹಿಂದೆಯೇ ಇರೋದನ್ನು ನಾನು ಟಿವಿಯಲ್ಲಿ ನೋಡಿದ್ದೇನೆ. ಮೂರನೇ ಅಲೆ ಮುನ್ನೆಚ್ಚರಿಕೆ ಕ್ರಮ ಚೆನ್ನಾಗಿದೆ ಎಂದು ಕಾಲೆಳೆದರು.
ಕಾಂಗ್ರೆಸ್ನ ಹಿರಿಯ ಸದಸ್ಯ ಹೆಚ್.ಕೆ.ಪಾಟೀಲ್ ಮಾತನಾಡಿ, ಕೋವಿಡ್ ವಿಚಾರದಲ್ಲಿ ಮಾನವೀಯತೆ ಮೆರೆಯಬೇಕು. ಆದರೆ ಸರ್ಕಾರ ಇದರಲ್ಲಿ ಹೊಗಳಿಕೆ ಬಯಸುತ್ತಿದೆ. ಕೋವಿಡ್ ವಿಚಾರದಲ್ಲಿ ಸರ್ಕಾರ ವಿಫಲವಾಗಿದೆ. ಕೋವಿಡ್ ಪರಿಕರಗಳ ಖರೀದಿಯಲ್ಲೂ ಅಕ್ರಮ ನಡೆದಿದೆ. ಸಾರ್ವಜನಿಕ ಲೆಕ್ಕಪತ್ರ ಸಮಿತಿ ವರದಿ ಸಲ್ಲಿಸಿದೆ. ವರದಿಯನ್ನು ಈ ಸದನದಲ್ಲಿ ಮಂಡಿಸಬೇಕು. ಸರ್ಕಾರ ಸ್ಪೀಕರ್ ಮೇಲೆ ಒತ್ತಡ ತಂದು ನಿಲ್ಲಿಸಿದೆ. ಸರ್ಕಾರದ ಒತ್ತಡಕ್ಕೆ ಮಣಿದರೆ ತಪ್ಪು. ವಿಧಾನಸಭೆ ಕಾರ್ಯದರ್ಶಿ ಕೂಡ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ವರದಿ ಮಂಡಿಸಿ, ಸರಿ ಇಲ್ಲವಾದರೆ ತಿರಸ್ಕರಿಸಿ ಎಂದು ಆಗ್ರಹಿಸಿದರು.
ಇದನ್ನೂ ಓದಿ:ಆರ್ಥಿಕ ಶಿಸ್ತು ತರಲು ಅಪ್ರಿಯವಾದರೂ ಕಠಿಣ ಕ್ರಮ ಕೈಗೊಳ್ಳಲಿದ್ದೇನೆ: ಸಿಎಂ ಬೊಮ್ಮಾಯಿ