ಬೆಂಗಳೂರು :2021ನೇ ಸಾಲಿನ ಬೆಂಗಳೂರು ಪ್ರೆಸ್ ಕ್ಲಬ್ನ 'ವರ್ಷದ ವ್ಯಕ್ತಿ ಪ್ರಶಸ್ತಿ'ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ಅದೇ ರೀತಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ಪ್ರೆಸ್‌ಕ್ಲಬ್‌ನ ವಿಶೇಷ ಪ್ರಶಸ್ತಿ ಮತ್ತು ಕೊರೊನಾ ನಿರ್ವಹಣೆಯಲ್ಲಿ ಗಮನಾರ್ಹ ಸಾಧನೆ ಮಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಪ್ರೆಸ್‌ಕ್ಲಬ್‌ನ ವಿಶೇಷ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದಾರೆ.
ಇದರ ಜೊತೆಗೆ ಪ್ರೆಸ್‌ಕ್ಲಬ್‌ನ ವಾರ್ಷಿಕ ಪ್ರಶಸ್ತಿಗೆ 16 ಹಿರಿಯ ಪತ್ರಕರ್ತರು ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ಜನವರಿ 6ರಂದು ಸಂಜೆ 6 ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆಯಲಿದೆ.
ಇದೇ ಸಂದರ್ಭದಲ್ಲಿ 2020ನೇ ಸಾಲಿನ ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿಯಾಗಿ ವಿಪ್ರೋ ಸಂಸ್ಥೆಯ ಅಧ್ಯಕ್ಷ ಅಜೀಂ ಪ್ರೇಮ್ ಜಿ ಮತ್ತು ಚಿತ್ರ ನಟ ಸುದೀಪ್ ಹಾಗೂ ನಾರಾಯಣ ಹೃದಯಾಲಯದ ಡಾ. ದೇವಿಪ್ರಸಾದ್ ಶೆಟ್ಟಿ ಅವರಿಗೆ ವಿಶೇಷ ಪ್ರಶಸ್ತಿ ಹಾಗೂ ಪ್ರೆಸ್‌ಕ್ಲಬ್‌ನ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದ 25 ಹಿರಿಯ ಪತ್ರಕರ್ತರನ್ನು ಸನ್ಮಾನಿಸಲಾಗುವುದು.