ಬೆಂಗಳೂರು :ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಿ ಎಸ್ ಯಡಿಯೂರಪ್ಪ ತಮಗಿರುವ ಮಾಸ್ ಇಮೇಜ್ ಉಳಿಸಿಕೊಳ್ಳಲು ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ. ಅಧಿಕಾರವಿಲ್ಲದೆ ಇದ್ದರೂ ರಾಜ್ಯದಲ್ಲಿ ತಮಗಿರುವ ವರ್ಚಸ್ಸು ಕುಂದದಂತೆ ನೋಡಿಕೊಳ್ಳಲು ರಾಜ್ಯ ರಾಜಕೀಯದಲ್ಲಿ ತಮಗಿರುವ ಹಿಡಿತ ಕಳೆದುಕೊಳ್ಳದಿರಲು ಹೊಸ ಗೇಮ್ ಪ್ಲಾನ್ ರೂಪಿಸಿದ್ದಾರೆ.
ಪ್ರವಾಸದ ಹಾದಿ ಆಯ್ಕೆ :75 ವರ್ಷ ದಾಟಿದ ನಂತರ ಯಾವುದೇ ಅಧಿಕಾರ ಸ್ಥಾನಮಾನದ ಜವಾಬ್ದಾರಿ ನೀಡದಿರುವ ಅಲಿಖಿತ ನಿಯಮವನ್ನು ಅಳವಡಿಸಿಕೊಂಡಿರುವ ಹಿನ್ನೆಲೆ ಬಿಜೆಪಿ ಹಿರಿಯ ನಾಯಕರಾದ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ ಜೋಶಿ ಮಾರ್ಗದರ್ಶಕ ಮಂಡಳಿ ಸೇರಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ತಮಗೂ ಮಾರ್ದರ್ಶಕ ಮಂಡಳಿ ಸೇರುವ ಪರಿಸ್ಥಿತಿ ಬಾರದಿರಲಿ ಎಂದು ರಾಜಕಾರಣದಲ್ಲಿ ಸಕ್ರಿಯವಾಗಿರಲು ಮಾಜಿ ಸಿಎಂ ಯಡಿಯೂರಪ್ಪ ನಿರ್ಧರಿಸಿದ್ದಾರೆ. ಅದಕ್ಕಾಗಿ ರಾಜ್ಯ ಪ್ರವಾಸದ ಹಾದಿ ಆಯ್ಕೆ ಮಾಡಿದ್ದಾರೆ.
1983ರಿಂದ 2021ರವರೆಗೂ ಸುದೀರ್ಘ ರಾಜಕಾರಣದಲ್ಲಿ ಯಡಿಯೂರಪ್ಪ ವಿರಮಿಸಿಯೇ ಇಲ್ಲ. 2006-2011ರವರೆಗೆ ಮತ್ತು 2019-2021ರವರೆಗೆ ಒಟ್ಟು 7 ವರ್ಷ ಮಾತ್ರ ಸರ್ಕಾರದಲ್ಲಿದ್ದ ಯಡಿಯೂರಪ್ಪ ಉಳಿದಂತೆ ಪ್ರತಿಪಕ್ಷದಲ್ಲಿದ್ದುಕೊಂಡು ಹೋರಾಟ ಮಾಡಿಕೊಂಡೇ ಬಂದವರು. ನಿಂತಲ್ಲಿ ನಿಲ್ಲದೆ ಪಾದರಸದಂತೆ ಸದಾ ಚಟುವಟಿಕೆಯಿಂದ ಇದ್ದು ಪ್ರವಾಸದ ಮೂಲಕ ಪಕ್ಷ ಸಂಘಟನೆ ಮಾಡುತ್ತಲೇ ಜೀವ ಸವೆಸಿದ್ದಾರೆ.
ಮಾಸ್ ಇಮೇಜ್ ಕಾಪಾಡಿಕೊಳ್ಳಲು ತಂತ್ರ :ಈಗ 79 ವರ್ಷವಾದರೂ ರಾಜ್ಯವನ್ನು ಆಳಿ ರಾಜೀನಾಮೆ ನೀಡಿದ್ದಾರೆ. ಆದರೂ ಸುಮ್ಮನೆ ಕೂರುವ ಜಾಯಮಾನ ಯಡಿಯೂರಪ್ಪ ಅವರದ್ದಲ್ಲ. ಸದಾ ಜನರೊಂದಿಗೆ ಇರುವುದನ್ನೇ ರೂಢಿಸಿಕೊಂಡು ಬಂದಿರುವ ಬಿಎಸ್ವೈ ಈಗಲೂ ಅದೇ ಜನರ ಜೊತೆ ಇರುವ ಬಯಕೆ ಹೊಂದಿದ್ದಾರೆ. ಕೇವಲ ಲಿಂಗಾಯತ ಸಮುದಾಯಕ್ಕೆ ಸೀಮಿತವಾಗದೆ ಮಾಸ್ ಲೀಡರ್ ಆಗಿ ಬೆಳೆದಿದ್ದು, ಈಗ ತಮಗಿರುವ ಮಾಸ್ ಇಮೇಜ್ ಅನ್ನು ಮುಂದಿನ ಚುನಾವಣೆವರೆಗೂ ಕಾಪಾಡಿಕೊಳ್ಳಲು ತಂತ್ರ ಹೆಣೆದಿದ್ದಾರೆ.
ಸದ್ಯ ರಾಜ್ಯ ಬಿಜೆಪಿಗೆ ಹೊಸ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸಿದ್ದರೂ ಯಡಿಯೂರಪ್ಪ ಅವರೇ ರಾಜ್ಯ ಬಿಜೆಪಿಯ ಶಕ್ತಿ ಕೇಂದ್ರವಾಗಿದ್ದಾರೆ. ಪಕ್ಷದಲ್ಲಿ ತಮ್ಮದೇ ಹಿಡಿತ ಇದೆ. ಇದೇ ಹಿಡಿತವನ್ನು ಮುಂಬರಲಿರುವ ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆವರೆಗೂ ಹೊಂದಿರಬೇಕು ಎನ್ನುವುದು ಯಡಿಯೂರಪ್ಪ ಅವರ ಬಯಕೆಯಾಗಿದೆ. ಟಿಕೆಟ್ ಹಂಚಿಕೆಯಲ್ಲಿ ತಮ್ಮ ಪಾತ್ರ ಪ್ರಮುಖವಾಗಿರಬೇಕು. ಹಾಗಾಗಿ, ಈಗಿರುವ ಇಮೇಜ್ ಕಡಿಮೆಯಾಗದಂತೆ ನೋಡಿಕೊಳ್ಳಬೇಕಿದೆ.
ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಜವಾಬ್ದಾರಿ :ಬಿಜೆಪಿಯಲ್ಲಿ ಉಕ್ಕಿನ ಮನುಷ್ಯ ಎಂದೇ ಹೆಸರು ಮಾಡಿದ್ದ ಅಡ್ವಾಣಿ ಮಾರ್ಗದರ್ಶಕ ಮಂಡಳಿ ಸೇರುತ್ತಿದ್ದಂತೆ ಜನರಿಂದ ದೂರ ಉಳಿದು ನೇಪಥ್ಯಕ್ಕೆ ಸರಿದಿದ್ದಾರೆ. ಪಕ್ಷದಲ್ಲಿ ಇಂದು ಅವರ ಯಾವುದೇ ಮಾತುಗಳು ನಡೆಯದ ಸ್ಥಿತಿ ಇದೆ. ಅಂತಹ ಸ್ಥಿತಿ ತಮಗೆ ಎದುರಾಗಬಾರದು ಎನ್ನುವ ಕಾರಣಕ್ಕೆ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಜವಾಬ್ದಾರಿಯನ್ನು ಸ್ವತಃ ವಹಿಸಿಕೊಂಡಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆಯನ್ನೂ ಮಾಡಿದ್ದಾರೆ.