ಬೆಂಗಳೂರು:ಕರ್ನಾಟಕದ ನಿವೃತ್ತ ಮುಖ್ಯ ಕಾರ್ಯದರ್ಶಿ ಜೆ.ಸಿ. ಲಿನ್ (84) ಸೈಂಟ್ ಫಿಲೋಮಿನಾ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಶುಕ್ರವಾರ ನಗರದಲ್ಲಿ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಜೆ.ಸಿ. ಲಿನ್ ಕರ್ನಾಟಕ ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ 1992ರಿಂದ 1994ರ ತನಕ ಸೇವೆ ಸಲ್ಲಿಸಿದ್ದರು. 34 ವರ್ಷದ ತಮ್ಮ ವೃತ್ತಿ ಜೀವನದಲ್ಲಿ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಹಲವು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದರು. ವೀರೇಂದ್ರ ಪಾಟೀಲ್, ಡಿ.ದೇವರಾಜ ಅರಸ್, ಆರ್.ಗುಂಡೂರಾವ್ ಅವರ ಅಧಿಕಾರಾವಧಿಯಲ್ಲಿ 10 ವರ್ಷಗಳ ಕಾಲ ಲಿನ್ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು.
1992ರಲ್ಲಿ ಅಂದಿನ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಲಿನ್ ಅವರನ್ನು ಮತ್ತೆ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದರು. 1994ರ ಡಿಸೆಂಬರ್‌ನಲ್ಲಿ ಸೇವೆಯಿಂದ ನಿವೃತ್ತಿಯಾಗುವವರೆಗೂ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ನಿವೃತ್ತಿಯ ನಂತರ ಅವರನ್ನು ಕರ್ನಾಟಕದ ಆರ್‌ಬಿಐನ ಮೊದಲ ಓಂಬುಡ್ಸ್ಮನ್ ಆಗಿ ನೇಮಿಸಲಾಯಿತು. 1998ರ ತನಕ ಅವರು ಈ ಹುದ್ದೆಯಲ್ಲಿದ್ದರು.
ಜೆ ಸಿ ಲಿನ್ ಅತ್ಯಂತ ದಕ್ಷ ಅಧಿಕಾರಿ ಎಂಬ ಹಗ್ಗಳಿಕೆ ಗಳಿಸಿದ್ದರು. ರಾಜ್ಯ ಕಂಡ ಕೆಲವೇ ಅತ್ಯುತ್ತಮ ಮುಖ್ಯಕಾರ್ಯದರ್ಶಿಗಳಲ್ಲಿ ಇವರು ಒಬ್ಬರು. ತಾವು ಸರ್ಕಾರದ ಸೇವೆಗೆ ಏಕೆ ಬಂದಿದ್ದೇವೆ ಎಂಬ ಸ್ಪಷ್ಟ ಕಲ್ಪನೆ ಅವರಿಗಿತ್ತು. ಯುವ ಅಧಿಕಾರಿಗಳಿಗೆ ಅತ್ಯುತ್ತಮ ಮೇಲ್ಪಂಕ್ತಿಯಾಗಿ ಕಾರ್ಯ ನಿರ್ವಹಿಸಿದ್ದರು. ದಕ್ಷತೆ, ಜನಪರ ಮನಸ್ಥಿತಿ ಹಾಗೂ ಕಾರ್ಯಕ್ಷಮತೆಗೆ ಹೆಸರಾಗಿದ್ದರು.