ಬೆಂಗಳೂರು: ಖಾಲಿ ಖಜಾನೆ ತುಂಬಿಕೊಳ್ಳಲು ಬಿಬಿಎಂಪಿ, ಮಹಾನಗರ ಪಾಲಿಕೆಗಳು, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಗುತ್ತಿಗೆ ನೀಡಿರುವ ಜಮೀನು ಪರಭಾರೆಗೆ ಮುಂದಾಗಿರುವ ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನು ತಕ್ಷಣ ಹಿಂಪಡೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕೋವಿಡ್-19 ಪರಿಸ್ಥಿತಿ ಎದುರಾದ ನಂತರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ಸರ್ಕಾರದ ಈ ನಿರ್ಧಾರ ಭವಿಷ್ಯದಲ್ಲಿ ಮುಳುವಾಗಲಿದೆ. ಕವಡೆ ಕಾಸಿಗೆ ಸ್ಥಳೀಯ ಸಂಸ್ಥೆಗಳ ಜಮೀನನ್ನು ಗುತ್ತಿಗೆ ನೀಡಿರುವ ಸರ್ಕಾರವು ಮಾರಾಟ ನಿರ್ಧಾರ ಕೈಬಿಟ್ಟು, ಬಾಡಿಗೆ ಹೆಚ್ಚಿಸಲು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
ಬಿಬಿಎಂಪಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಗುತ್ತಿಗೆ ನೀಡಿರುವ ಜಮೀನನ್ನು ಮಾರಾಟ ಮಾಡಿದರೆ, ಮುಂದೆ ಸಾರ್ವಜನಿಕ ಅವಶ್ಯಕತೆಗಳಿಗೆ ಸರ್ಕಾರಿ ಜಮೀನು ಇಲ್ಲದಂತಾಗುತ್ತದೆ. ಅಗತ್ಯ ಬಿದ್ದಾಗ ಖಾಸಗಿಯವರ ಎದುರು ಅಂಗಲಾಚಬೇಕಾದ ದೈನೇಸಿ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಹೇಳಿದ್ದಾರೆ.
ಬೊಕ್ಕಸ ತುಂಬಿಸಿಕೊಳ್ಳಲು ಬಿಡಿಎ ನಿವೇಶನಗಳನ್ನು ಹರಾಜು ಹಾಕುತ್ತಿರುವ ಸರ್ಕಾರ ಇದೀಗ ಸ್ಥಳೀಯ ಸಂಸ್ಥೆಗಳ ಗುತ್ತಿಗೆ ನೀಡಿರುವ ಜಮೀನಿನ ಮೇಲೆ ಕಣ್ಣಿಟ್ಟಿದೆ. ಇಂತಹ ತಾತ್ಕಾಲಿಕ ಉಪಶಮನಗಳಿಂದ ಸರ್ಕಾರ ಶಾಶ್ವತವಾಗಿ ಬೊಕ್ಕಸ ತುಂಬಿಸಿಕೊಳ್ಳಲು ಸಾಧ್ಯವಿಲ್ಲ. ಸುಮಾರು ₹5,000 ಕೋಟಿ ಆದಾಯ ನಿರೀಕ್ಷೆಯಲ್ಲಿರುವ ಸರ್ಕಾರ, ಇರುವುದನ್ನು ಕಳೆದುಕೊಳ್ಳುವ ಈ ಪ್ರಸ್ತಾವನೆಯನ್ನು ಸಾರಾಸಗಟಾಗಿ ತಿರಸ್ಕರಿಸುವಂತೆ ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.