ಬೆಂಗಳೂರು:ರಾಮನಗರ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ರೈತನ ಮೇಲೆ ರೀಲರ್ ಒಬ್ಬ ದುಂಡಾವರ್ತನೆ ನಡೆಸಿದ ಘಟನೆ ಖಂಡನೀಯ. ಹಗಲು ರಾತ್ರಿ ನಿದ್ದೆಗೆಟ್ಟು ಕಷ್ಟದಿಂದ ರೇಷ್ಮೆಗೂಡು ಬೆಳೆದು ತರುವ ರೈತರ ಮೇಲೆ ಈ ರೀತಿ ದೌರ್ಜನ್ಯ ಎಸಗುವುದು ಅಕ್ಷಮ್ಯ. ದೌರ್ಜನ್ಯ ಎಸಗಿದ ರೀಲರ್ಗಳ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್ ಅವರಿಗೆ ತಿಳಿಸಿದ್ದೇನೆ ಎಂದಿದ್ದಾರೆ.
ರೇಷ್ಮೆಗೂಡು ಹರಾಜು ನಡೆಯುವ ಸಂದರ್ಭದಲ್ಲಿ ಹೆಚ್ಚುವರಿ ಭದ್ರತೆ ಒದಗಿಸುವಂತೆಯೂ ಸೂಚಿಸಿದ್ದೇನೆ. ಇಂಥ ಘಟನೆಗಳು ಮರುಕಳಿಸದಂತೆ ಬಿಗಿಕ್ರಮ ಕೈಗೊಳ್ಳುವಂತೆ ಹೇಳಿದ್ದೇನೆ. ಹರಾಜು ಸಂದರ್ಭದಲ್ಲಿ ರೇಷ್ಮೆ ಗೂಡನ್ನು ಬೇರ್ಪಡಿಸುವುದು, ಅಕ್ರಮವಾಗಿ ಗೂಡನ್ನು ತೆಗೆದುಕೊಳ್ಳುವುದು, ಕಳ್ಳತನ ಮಾಡುವುದು ರಾಮನಗರ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಬಗ್ಗೆ ನನಗೆ ಅನೇಕ ದೂರುಗಳು ಬಂದಿವೆ. ಇಂಥ ಕಾನೂನು ಬಾಹಿರ ಕೃತ್ಯಗಳನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.