ದೊಡ್ಡಬಳ್ಳಾಪುರ(ಬೆಂಗಳೂರು): 20 ವರ್ಷಗಳ ನಂತರ ಅರ್ಕಾವತಿ ನದಿ ಪಾತ್ರದ ಕೆರೆಗಳು ತುಂಬಿ ಹರಿಯುತ್ತಿದೆ. ಆದ್ರೆ ನದಿ ಪಾತ್ರದ ಕೆರೆಗಳಿಗೆ ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯ ಒಳಚರಂಡಿ ನೀರು ಮತ್ತು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ತ್ಯಾಜ್ಯ ನೀರು ಸೇರಿ ಕೆರೆಯ ಬಣ್ಣ ಕಪ್ಪು ಬಣ್ಣಕ್ಕೆ ತಿರುಗಿದೆ. ಅಲ್ಲದೇ, ಕೆರೆ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿದಾಗ ಅಪಾಯಕಾರಿ 2.10ರಷ್ಟು ಫ್ಲೋರೈಡ್ ಪ್ರಮಾಣ ಪತ್ತೆಯಾಗಿದೆ ಮತ್ತು ಬಳಕೆಗೆ ಯೋಗ್ಯವಲ್ಲದ ನೀರು ಎಂಬ ಆತಂಕಕಾರಿ ವರದಿ ಬಂದಿದೆ.
ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ 1 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ನಗರದ ತ್ಯಾಜ್ಯ ನೀರನ್ನು ಒಳಚರಂಡಿ ವ್ಯವಸ್ಥೆಯ ಮೂಲಕ ಅರ್ಕಾವತಿ ನದಿಪಾತ್ರದ ಚಿಕ್ಕತುಮಕೂರು ಕೆರೆಗೆ ಬೀಡಲಾಗುತ್ತಿದೆ. ಒಳಚರಂಡಿ ನೀರು ಶುದ್ಧೀಕರಣವಾಗದೆ ನೇರವಾಗಿ ಚಿಕ್ಕತುಮಕೂರು ಕೆರೆಗೆ ಸೇರುತ್ತಿದೆ. ಈ ಕೆರೆಯ ನೀರು ಕೋಡಿ ಬಿದ್ದು ದೊಡ್ಡತುಮಕೂರು ಕೆರೆಯನ್ನು ಸೇರುತ್ತಿದೆ. ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ತ್ಯಾಜ್ಯ ನೀರು ಸಹ ದೊಡ್ಡತುಮಕೂರು ಕೆರೆಯನ್ನು ಸೇರುತ್ತಿದೆ.
ಈ ವರ್ಷ ಉತ್ತಮ ಮಳೆಯಿಂದ 20 ವರ್ಷಗಳ ನಂತರ ದೊಡ್ಡತುಮಕೂರು ಕೆರೆ ಕೋಡಿ ಬಿದ್ದಿದೆ. ಆದರೆ ಕೆರೆ ಕೋಡಿ ಬಿದ್ದಿರುವ ಖುಷಿ ಗ್ರಾಮಸ್ಥರಿಗೆ ಇಲ್ಲ. ಕೆರೆಯ ನೀರು ಕಪ್ಪು ಬಣ್ಣಕ್ಕೆ ತಿರುಗಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.