ಬೆಂಗಳೂರು: ಕೊರೊನಾ ಲಾಕ್ಡೌನ್ನಿಂದಾಗಿ ಹೂವಿನ ವ್ಯಾಪಾರದಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡಿದೆ. ವ್ಯಾಪಾರಸ್ಥರು ಸಂಕಷ್ಟ ಎದುರಿಸುತ್ತಿದ್ದು, ಹೂವಿನ ಸೀಸನ್ನಲ್ಲಿಯೇ ವ್ಯಾಪಾರವಿಲ್ಲದಂತಾಗಿದೆ.
ಪ್ರತೀ ಅಂಗಡಿಗಳಿಗೆ ಒಂದರಿಂದ-ಎರಡು ಲಕ್ಷದವರೆಗೆ ವ್ಯಾಪಾರ ಆಗುತ್ತಿತ್ತು. ಆದ್ರೆ ಈಗ ವ್ಯಾಪಾರ ನಡೆಸುವುದಕ್ಕೆ ಅನುಮತಿ ಇಲ್ಲ. ಏಪ್ರಿಲ್ ಇಪ್ಪತ್ತರ ನಂತರವಾದ್ರೂ ಪರಿಸ್ಥಿತಿ ಸುಧಾರಿಸುತ್ತಾ ಅಂತ ಕಾದು ನೋಡ್ಬೇಕಾಗಿದೆ ಅಂತಾರೆ ಕೆ.ಆರ್. ಮಾರುಕಟ್ಟೆಯ ನ್ಯೂ ಬಾಲಾಜಿ ಫ್ಲವರ್ ಸ್ಟಾಲ್ನ ಹೂವಿನ ವ್ಯಾಪಾರಿ ಯೋಗೇಶ್.
ಸೀಸನ್ನಲ್ಲೆ ಕೈಕೊಟ್ಟ ಹೂವಿನ ವ್ಯಾಪಾರ ಇನ್ನೊಂದೆಡೆ ಹೂವು ಬೆಳೆದಿರುವ ರೈತರ ಸ್ಥಿತಿ ಕೂಡಾ ಯಾರೂ ಕೇಳದಂತಾಗಿದೆ. ಅಲ್ಲದೆ ಸುಗಂಧ ದ್ರವ್ಯಗಳ ಬಳಕೆ, ಬಟ್ಟೆಗಳ ಡೈಯಿಂಗ್ಗೆ ಹೂವುಗಳನ್ನು ವ್ಯಾಪಕವಾಗಿ ಬಳಸುತ್ತಿದ್ರೂ ಈಗ ಎಲ್ಲವೂ ನಿಂತುಹೋಗಿದೆ. ಸದ್ಯ ಕೆ.ಆರ್. ಮಾರುಕಟ್ಟೆ ಮುಚ್ಚಲ್ಪಟ್ಟಿದೆ. ನೆರೆಯ ರಾಜ್ಯಗಳಿಂದ ಹೂವಿನ ಸರಬರಾಜು ಕೂಡಾ ಆಗ್ತಿಲ್ಲ. ಮದುವೆ, ಸಮಾರಂಭ, ಪೂಜೆ ಪುನಸ್ಕಾರ, ಹಬ್ಬ ಹರಿದಿನಗಳ ಆಚರಣೆಗೆ ನಿರ್ಬಂಧವಿರುವ ಹಿನ್ನೆಲೆ ಹೂವಿನ ವ್ಯಾಪಾರವೇ ನಡೆಯುತ್ತಿಲ್ಲ.
ಇನ್ನು ಮನೆಯ ಪೂಜೆಗಾಗಿ ಅಲ್ಲಿ ಇಲ್ಲಿ, ಗಲ್ಲಿಗಳಲ್ಲಿ ಹೂವಿನ ವ್ಯಾಪಾರ ನಡೆಸಿದ್ರೆ ಪೊಲೀಸರು ಅಂಗಡಿ ಬಂದ್ ಮಾಡಿಸುತ್ತಿದ್ದಾರೆ. ದುಂಡುಮಲ್ಲಿಗೆ, ಕನಕಾಂಬರ ಸೀಸನ್ ಆದ್ರೂ ಅರ್ಧಕ್ಕರ್ಧ ಬೆಲೆಯಲ್ಲಿ ಮಾರಬೇಕಾಗಿದೆ. ಮುನ್ನೂರು, ನಾನೂರು ರೂಪಾಯಿಯ ಗುಲಾಬಿ ಹೂವಿನ ಹಾರ, ದುಂಡು ಮಲ್ಲಿಗೆ ಹಾರವನ್ನು ನೂರು ರುಪಾಯಿಗೆ ಕೊಟ್ರೂ ತಗೊಳೋರಿಲ್ಲ ಎಂದು ಯಶವಂತಪುರು ಹೂವಿನ ಮಾರುಕಟ್ಟೆಯ ವ್ಯಾಪಾರಸ್ಥೆ ಕಲಾವತಿ ಹೇಳಿದರು.
ಪೊಲೀಸರ ಅಂಜಿಕೆಯ ನಡುವೆ ತರಕಾರಿ ವ್ಯಾಪಾರ
ಒಂದೆಡೆ ರಾಜ್ಯ ಸರ್ಕಾರ ತರಕಾರಿ ಕೊಳ್ಳಲು ಯಾವುದೇ ಅಡ್ಡಿ ಇಲ್ಲ ಎಂದೂ ಹೇಳಿದ್ದರೂ ಕೂಡಾ ಕೈಗಾಡಿಯಲ್ಲಿ ತರಕಾರಿ ಮಾರಾಟಕ್ಕೆ ಪೊಲೀಸರೇ ಅಡ್ಡಿಪಡಿಸುತ್ತಿದ್ದಾರಂತೆ. ಇನ್ನು ಕೆಲವೆಡೆ ಮನೆ ಬಳಿಯೇ ಬರುವ ತರಕಾರಿ ಕೊಳ್ಳುತ್ತಿರುವುದರಿಂದ ಮಾರುಕಟ್ಟೆಯತ್ತ ಜನ ಸುಳಿಯುತ್ತಿಲ್ಲ ಎಂದು ವ್ಯಾಪರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಸಾರಿಗೆ ವ್ಯವಸ್ಥೆಯ ಕೊರತೆಯ ನಡುವೆಯೂ ತುಂಬಾ ದೂರದಿಂದ ತರಕಾರಿ ತಂದ್ರೂ ಮಾರಾಟಕ್ಕೆ ಪೊಲೀಸರು ಅನುಮತಿ ಕೊಡುತ್ತಿಲ್ಲ. ಗ್ರಾಹಕರು ಗುಂಪಾಗಿ ಸೇರಬಾರದೆಂದು ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ. ಇನ್ನೊಂದೆಡೆ ಕೆಲವು ವ್ಯಾಪಾರಿಗಳು ಕೂಡಾ ಹೆಚ್ಚಿನ ಬೆಲೆಗೆ ತರಕಾರಿ ಮಾರಾಟ ಮಾಡುತ್ತಿದ್ದಾರೆ. ಆದ್ರೆ ಗ್ರಾಹಕರೇ ಮನೆಯಿಂದ ಹೊರ ಬಾರದ ಕಾರಣ ಪ್ರತಿನಿತ್ಯ ಬಿಸಿಲಿಗೆ ತರಕಾರಿ ಒಣಗಿ ಹಾಳಾಗುತ್ತಿದೆ ಎಂದು ವ್ಯಾಪಾರಿಗಳು ಬೇಸರ ವ್ಯಕ್ತಡಿಸುತ್ತಿದ್ದಾರೆ.