ಬೆಂಗಳೂರು:ಒಂದೆಡೆ ಪ್ರವಾಹದಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟ ಉಂಟಾಗಿದ್ದರೆ, ಮತ್ತೊಂದೆಡೆ ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ಅಂದಾಜು 60 ರಿಂದ 65 ತಾಲೂಕುಗಳು ಬರ ಪೀಡಿತವಾಗಿವೆ ಎಂದು ತಿಳಿದುಬಂದಿದೆ.
ಬರ ಪೀಡಿತ ತಾಲೂಕುಗಳ ಕುರಿತು ಪಟ್ಟಿ ತಯಾರಾಗಿದ್ದು, ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ಈ ಬಗ್ಗೆ ರಾಜ್ಯ ಸರ್ಕಾರ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಜೂನ್ನಿಂದ ಆಗಸ್ಟ್ ಅಂತ್ಯದವರೆಗೆ ರಾಜ್ಯದಲ್ಲಿ ಬಿದ್ದ ಮಳೆ ಪ್ರಮಾಣ, ಬಿತ್ತನೆ, ಬೆಳೆ ಪರಿಸ್ಥಿತಿ, ತೇವಾಂಶ ಮತ್ತಿತರ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಬರ ಪೀಡಿತ ಪ್ರದೇಶಗಳನ್ನು ನಿರ್ಧರಿಸಲಾಗುತ್ತದೆ. ಜೂನ್ ಮತ್ತು ಜುಲೈ ತಿಂಗಳಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಮಳೆ ಕೊರತೆ ಉಂಟಾಗಿ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿತ್ತು. ಕೆಲವೆಡೆ ಬಿತ್ತಿದ ಬೆಳೆಯೂ ಮೊಳಕೆ ಹಂತದಲ್ಲೇ ಒಣಗಿದ್ದರೆ, ಕೆಲವೆಡೆ ಮಳೆ ಕೊರತೆಯಿಂದಾಗಿ ಬೆಳೆಯೂ ಒಣಗಿದೆ.
ದಕ್ಷಿಣ ಕರ್ನಾಟಕ, ಹೈದರಾಬಾದ್ ಕರ್ನಾಟಕ ಭಾಗದಲ್ಲೇ ಹೆಚ್ಚು ಪ್ರದೇಶ ಬರ ಪೀಡಿತವಾಗಿದೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬಳ್ಳಾರಿ, ಚಿತ್ರದುರ್ಗ, ಕಲಬುರಗಿ, ಬೀದರ್ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಮಳೆ ಕೊರತೆ ಕಂಡು ಬಂದಿದೆ. ಸುಮಾರು 50 ಕ್ಕೂ ಹೆಚ್ಚು ತಾಲೂಕುಗಳು ತೀವ್ರ ಮಳೆ ಕೊರತೆ ಎದುರಿಸುತ್ತಿದ್ದು, ಆಗಸ್ಟ್ನಲ್ಲಿ ರಾಜ್ಯದ ಒಳನಾಡು ಸೇರಿದಂತೆ ಹಲವು ಭಾಗಗಳಲ್ಲಿ ಮಳೆಯಾಗಿದೆ. ಸರಾಸರಿ ಮಳೆ ಪ್ರಮಾಣ ಕೆಲವೆಡೆ ವಾಡಿಕೆಯಷ್ಟಿದ್ದರೂ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ.
ಕೆಲವೆಡೆ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಆಗಸ್ಟ್ನಲ್ಲಿ ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು ಭಾಗಗಳಲ್ಲಿ ಭಾರೀ ಪ್ರಮಾಣದ ಮಳೆ ಉಂಟಾಗಿ ಪ್ರವಾಹ ಪರಿಸ್ಥಿತಿಗೂ ಕಾರಣವಾಗಿತ್ತು. ಮಹಾರಾಷ್ಟ್ರದಲ್ಲಿ ಬಿದ್ದ ಭಾರೀ ಮಳೆಯಿಂದಾಗಿ ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಇದರಿಂದ ಲಕ್ಷಾಂತರ ಜನರು ತಮ್ಮ ಮನೆಗಳು, ಜಾನುವಾರುಗಳು, ಬೆಳೆ, ಆಸ್ತಿಗಳನ್ನು ಕಳೆದುಕೊಂಡರು. ಇನ್ನು ಕೆಲ ಜಿಲ್ಲೆಗಳಲ್ಲಿ ಜೀವಹಾನಿಯೂ ಆಗಿದೆ. ಹೀಗಾಗಿ ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬರ ಪೀಡಿತ ಪ್ರದೇಶಗಳನ್ನು ಘೋಷಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಮೂಲಗಳ ಪ್ರಕಾರ, ರಾಜ್ಯದ ಹಲವೆಡೆ ಆಗಸ್ಟ್ಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿ ಸಮೀಕ್ಷೆಯಲ್ಲಿ ಕಂದಾಯ, ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ತೊಡಗಿರುವುದರಿಂದ ಬರ ಪೀಡಿತ ಪ್ರದೇಶಗಳ ಸಮೀಕ್ಷೆ ವಿಳಂಬವಾಗುತ್ತಿದೆ. ಆಗಸ್ಟ್ ವರೆಗಿನ ಮಾಹಿತಿ ಕಲೆ ಹಾಕಿ ಬರಪೀಡಿತ ಪ್ರದೇಶಗಳನ್ನು ಘೋಷಣೆ ಮಾಡಲು ಸಾಧ್ಯವಾಗದಿದ್ದರೆ, ಸೆಪ್ಟೆಂಬರ್ ಅಂತ್ಯದ ವೇಳೆಗೆ ಘೋಷಣೆ ಮಾಡಿ ನೆರವಿಗಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ ಎಂದು ತಿಳಿದು ಬಂದಿದೆ.