ಬೆಂಗಳೂರು:ಇನ್ನೊಂದು ವರ್ಷದಲ್ಲಿ ವಿಧಾನಸಭೆ ಚುನಾವಣೆ ಮುಂದಿಟ್ಟುಕೊಂಡು ಪಕ್ಷ ಸಂಘಟನೆಗೆ ಮುಂದಾಗಿರುವ ರಾಜ್ಯ ಕಾಂಗ್ರೆಸ್ ನಾಯಕರಿಗೆ ಪಂಚರಾಜ್ಯಗಳ ಚುನಾವಣೆ ನಾಯಕರ ಆತ್ಮಬಲವನ್ನು ಅದುರಿಸಿದೆ.
2013ರಲ್ಲಿ ಅಧಿಕಾರಕ್ಕೆ ಬಂದು ಐದು ವರ್ಷ ಪೂರ್ಣಾವಧಿ ಸರ್ಕಾರ ನಡೆಸಿದ ಕಾಂಗ್ರೆಸ್ಗೆ 2018 ರ ಚುನಾವಣೆಯಲ್ಲಿ ಪೂರ್ಣ ಬಹುಮತ ಸಿಗಲಿಲ್ಲ. ಈ ಮಧ್ಯೆ ಜೆಡಿಎಸ್ ಜೊತೆ ಮೈತ್ರಿ ಸರ್ಕಾರ ಮಾಡಿಕೊಂಡರೂ ಪರಸ್ಪರ ಭಿನ್ನಾಭಿಪ್ರಾಯ ಸರ್ಕಾರವನ್ನು ಹೆಚ್ಚು ಸಮಯ ಮುಂದುವರಿಯದಂತೆ ಮಾಡಿತು. ಅಂತಿಮವಾಗಿ ಆಪರೇಷನ್ ಕಮಲದಿಂದಾಗಿ 17 ಶಾಸಕರು ಮೈತ್ರಿ ಸರ್ಕಾರಕ್ಕೆ ಕೈಕೊಟ್ಟಿದ್ದರಿಂದ ಸರ್ಕಾರ ಪತನವಾಗಿ ಬಿಜೆಪಿ ಅಧಿಕಾರಕ್ಕೆ ಬಂತು.
ಇದೀಗ 2023ರ ವಿಧಾನಸಭೆ ಚುನಾವಣೆಯಲ್ಲಿ ಶತಾಯಗತಾಯ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿರುವ ಕಾಂಗ್ರೆಸಿಗೆ ಪಂಚರಾಜ್ಯಗಳ ಚುನಾವಣೆ ತೀವ್ರ ಆಘಾತವನ್ನು ಉಂಟುಮಾಡಿದೆ. ಪಕ್ಷ ಸಂಘಟನೆಗೆ ಮುಂದಾಗುವ ಉತ್ಸಾಹದಲ್ಲಿದ್ದ ರಾಜ್ಯ ಕಾಂಗ್ರೆಸ್ ನಾಯಕರ ಆತ್ಮ ಬಲಕ್ಕೆ ಪೆಟ್ಟು ನೀಡಿದೆ.
ನಾಯಕರ ಮಧ್ಯೆ ಕಿತ್ತಾಟ:ಒಂದೆಡೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಡುವೆ ಆಂತರಿಕ ಭಿನ್ನಾಭಿಪ್ರಾಯ ದಿನದಿಂದ ದಿನಕ್ಕೆ ಪಕ್ಷದ ಸಂಘಟನೆಗೆ ಹೊಡೆತ ನೀಡುತ್ತಿದೆ. ಇನ್ನೊಂದೆಡೆ ಇವರಿಬ್ಬರನ್ನು ಹೊರತುಪಡಿಸಿ ಬಿ.ಕೆ. ಹರಿಪ್ರಸಾದ್, ಸತೀಶ್ ಜಾರಕಿಹೊಳಿ, ಕೃಷ್ಣಬೈರೇಗೌಡ, ಎಂ.ಬಿ.ಪಾಟೀಲ್, ಎಚ್.ಕೆ.ಪಾಟೀಲ್ ಹಾಗೂ ಆರ್.ವಿ.ದೇಶಪಾಂಡೆ ಸೇರಿದಂತೆ ಹಲವು ಪ್ರಮುಖ ನಾಯಕರು ಸಿಎಂ ಸ್ಥಾನದತ್ತ ದೃಷ್ಟಿ ನೆಟ್ಟಿದ್ದಾರೆ. ಪಕ್ಷವನ್ನು ಅಧಿಕಾರಕ್ಕೆ ತರುವ ಉತ್ಸಾಹದ ಜೊತೆಗೆ, ತಮಗೂ ಒಂದು ಆಯಕಟ್ಟಿನ ಸ್ಥಾನಮಾನವನ್ನು ನಿರೀಕ್ಷಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ಪಂಚರಾಜ್ಯ ಚುನಾವಣೆ ಫಲಿತಾಂಶ ಆಘಾತ ನೀಡಿದೆ.