ಬೆಂಗಳೂರು: ನಗರದಲ್ಲಿ ನಿನ್ನೆ ನಡೆದ ಅಪಘಾತದಲ್ಲಿ ಕಾರು ತಲೆ ಕೆಳಗಾಗಿ ಬಿದ್ದು ಬೆಂಕಿ ಹೊತ್ತಿಕೊಂಡಿದ್ದು ಈ ಸಂಬಂಧ ಕಾರು ಚಾಲಕ ಪ್ರದೀಪ್ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಜಾಲಹಳ್ಳಿ ಸಂಚಾರ ಪೊಲೀಸರು ಠಾಣಾ ಜಾಮೀನಿನ ಆಧಾರದ ಮೇಲೆ ಆರೋಪಿಗಳನ್ನು ಬಿಟ್ಟು ಕಳುಹಿಸಿದ್ದಾರೆ.
ಕಾರು ಅಪಘಾತ ಪ್ರಕರಣ: ಸ್ಟೇಷನ್ ಬೇಲ್ ಆಧಾರದ ಮೇಲೆ ಐವರು ಆರೋಪಿಗಳು ಬಿಡುಗಡೆ - ಬೆಂಗಳೂರು ರಸ್ತೆ ಅಪಘಾತ ನ್ಯೂಸ್
ನಿನ್ನೆ ನ್ಯೂ ಬಿಇಎಲ್ ರಸ್ತೆಯ ಬಳಿ ವೇಗವಾಗಿ ಕಾರ್ ಚಲಾಯಿಸಿಕೊಂಡು ನಿಯಂತ್ರಣಕ್ಕೆ ಸಿಗದೆ ರಸ್ತೆಯ ಡಿವೈಡರ್ಗೆ ಡಿಕ್ಕಿ ಹೊಡೆದ ಪ್ರಕರಣದ ಐವರು ಆರೋಪಿಗಳನ್ನು ಇಂದು ಸ್ಟೇಷನ್ ಬೇಲ್ ಆಧಾರದ ಮೇಲೆ ಪೊಲೀಸರು ಬಿಟ್ಟು ಕಳುಹಿಸಿದ್ದಾರೆ.
ಗರುಡಾಚಾರ್ ಪಾಳ್ಯ ಮೋಹಿತ್ ಬಾರ್ನಲ್ಲಿ ಕೆಲಸ ಮಾಡುತ್ತಿದ್ದ ಚಾಲಕ ಸೇರಿದಂತೆ ಐವರು ಆರೋಪಿಗಳು ನಿನ್ನೆ ನ್ಯೂ ಬಿಇಎಲ್ ರಸ್ತೆಯ ಬಳಿ ವೇಗವಾಗಿ ಕಾರ್ ಚಲಾಯಿಸಿಕೊಂಡು ನಿಯಂತ್ರಣಕ್ಕೆ ಸಿಗದೆ ರಸ್ತೆಯ ಡಿವೈಡರ್ಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಪಲ್ಟಿ ಹೊಡೆದು ಪೆಟ್ರೋಲ್ ಸೋರಿಕೆಯಾಗಿ ಏಕಾಏಕಿ ಕಾರಿಗೆ ಬೆಂಕಿ ಹತ್ತಿಕೊಂಡು ನೋಡು ನೋಡುತ್ತಿದ್ದಂತೆ ಹೊತ್ತಿ ಉರಿದಿತ್ತು.
ಘಟನೆಯಲ್ಲಿ ಚಾಲಕ ಪ್ರದೀಪ್ ಸೇರಿದಂತೆ ಅಶೋಕ್, ಸತೀಶ್, ತಿಪ್ಪೇಶ್ ಐವರು ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಸಂಬಂಧ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 279 ರ ಅಡಿ ವೇಗ ಹಾಗೂ ನಿರ್ಲಕ್ಷ್ಯ ಕಾರು ಚಾಲನೆ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇಂದು ಜಾಮೀನಿನ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಬಿಟ್ಟು ಕಳುಹಿಸಿದ್ದಾರೆ.