ಬೆಂಗಳೂರು :ಜುಲೈ 16ರಿಂದ 27ರವರೆಗೆ ನಿಗದಿಯಾಗಿದ್ದ ಪ್ರಥಮ ಪಿಯುಸಿ ಪೂರಕ ಪರೀಕ್ಷೆ ಕೋವಿಡ್-19 ಹಿನ್ನೆಲೆ ರದ್ದುಪಡಿಸಲಾಗಿದೆ ಎಂದು ಸಚಿವ ಎಸ್ ಸುರೇಶ್‌ಕುಮಾರ್ ಹೇಳಿದ್ದಾರೆ.
ಸುಮಾರು 60 ಸಾವಿರ ವಿದ್ಯಾರ್ಥಿಗಳು ಈ ಪರೀಕ್ಷೆ ತೆಗೆದುಕೊಳ್ಳಬೇಕಿತ್ತು. ಕಾಲೇಜು ಹಂತದಲ್ಲಿ ಪರೀಕ್ಷೆಗಳನ್ನು ನಡೆಸಲು ನಂತರ ಇದೇ 30ರಂದು ಫಲಿತಾಂಶ ಪ್ರಕಟಿಸಲು ಈ ಹಿಂದೆ ನಿರ್ಧರಿಸಲಾಗಿತ್ತು. ಕೋವಿಡ್-19 ಸೋಂಕಿನ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ವಾರ್ಷಿಕ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳ ಪರೀಕ್ಷೆ ಬರೆದು ಅನುತ್ತೀರ್ಣಗೊಂಡ ವಿದ್ಯಾರ್ಥಿಗಳನ್ನೂ ದ್ವಿತೀಯ ಪಿಯುಸಿಗೆ ತೇರ್ಗಡೆಗೊಳಿಸಲಾಗುವುದು. ಪರೀಕ್ಷೆಯಲ್ಲಿ ಉತ್ತೀರ್ಣತೆ ಪಡೆಯಲು ಅವಶ್ಯಕವಿರುವ ಕನಿಷ್ಠ ಅಂಕಗಳನ್ನು ಕಾಲೇಜು ಹಂತದಲ್ಲಿಯೇ ನೀಡಲಾಗುತ್ತೆ ಎಂದರು.
ಹಾಜರಾತಿ ಕೊರತೆಯಿಲ್ಲದ, ಅನಿವಾರ್ಯ ಸಂದರ್ಭದಲ್ಲಿ ಪರೀಕ್ಷೆಗೆ ಗೈರು ಹಾಜರಾದ ವಿದ್ಯಾರ್ಥಿಗಳಿಗೆ ಮುಂದಿನ ತರಗತಿಗಳು ಪ್ರಾರಂಭವಾದ ಬಳಿಕ ದ್ವಿತೀಯ ಪಿಯುಸಿಯ ಪ್ರಥಮ ಕಿರು ಪರೀಕ್ಷೆಗೂ ಪೂರ್ವದಲ್ಲಿ ಪ್ರಥಮ ಪಿಯುಸಿಯಲ್ಲಿ ಅನುತ್ತೀರ್ಣವಾದ ವಿಷಯಗಳಿಗೆ ಮತ್ತೊಮ್ಮೆ ಕಾಲೇಜು ಹಂತದಲ್ಲಿ ಕಿರು ಪರೀಕ್ಷೆಯನ್ನು ನಡೆಸಿ ಅವರ ಕಲಿಕೆಯ ಮಟ್ಟವನ್ನು ಮೌಲ್ಯಮಾಪನ ಮಾಡಲಾಗುವುದೆಂದು ಸಚಿವರು ಹೇಳಿದ್ದಾರೆ. ಹಾಜರಾತಿಯ ಕೊರತೆಯಿಂದ ವಾರ್ಷಿಕ ಪರೀಕ್ಷೆಗೆ ಹಾಜರಾಗಲು ಅನುಮತಿ ಪಡೆಯದ ವಿದ್ಯಾರ್ಥಿಗಳು ಮಾತ್ರ ಅನುತ್ತೀರ್ಣಗೊಳ್ಳುವರು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ನಾಳೆ ದ್ವಿತೀಯ ಪಿಯು ಫಲಿತಾಂಶ ಇಲ್ಲಿ ವೀಕ್ಷಣೆ ಮಾಡಬಹುದು..
ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ನಾಳೆ ಮಧ್ಯಾಹ್ನ 12 ಗಂಟೆಯ ಬಳಿಕ ಸರ್ಕಾರದ ಅಧಿಕೃತ ಜಾಲತಾಣ www.karresults.nic.inಗಳಲ್ಲಿಯೂ ಸಹ ವೀಕ್ಷಿಸಬಹುದು. ಮಾರ್ಚ್ 4 ರಿಂದ 21ರವರೆಗೆ ವಿವಿಧ ವಿಷಯಗಳ ಪರೀಕ್ಷೆಗಳು ನಡೆದಿವೆ. ನಂತರ ಕೋವಿಡ್-19 ಸಂದರ್ಭದಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಜೂನ್ 18ರಂದು ಆಂಗ್ಲಭಾಷೆಯ ಪರೀಕ್ಷೆಗಳನ್ನು ನಡೆಸಲಾಗಿತ್ತು. ಸುಮಾರು 6.75 ಲಕ್ಷ ವಿದ್ಯಾರ್ಥಿಗಳ ಫಲಿತಾಂಶ ನಾಳೆ ಹೊರ ಬೀಳಲಿದೆ ಎಂದು ಸಚಿವರು ಹೇಳಿದ್ದಾರೆ.