ಬೆಂಗಳೂರು :ಆಂಧ್ರದ ವಿಜಯವಾಡ ಕೋವಿಡ್ ಸೆಂಟರ್ನಲ್ಲಿ ನಡೆದ ಅಗ್ನಿ ದುರಂತದಲ್ಲಿ ಏಳು ಮಂದಿ ಸಾವನ್ನಪ್ಪಿದ ಹಿನ್ನೆಲೆ ರಾಜ್ಯದ ಕೊರೊನಾ ಚಿಕಿತ್ಸಾ ಕೇಂದ್ರಗಳಲ್ಲಿ ಯಾವುದೇ ದುರಂತ ಸಂಭವಿಸದಂತೆ ರಾಜ್ಯ ಅಗ್ನಿಶಾಮಕ ಇಲಾಖೆ ಸಕಲ ಮುಂಜಾಗ್ರತಾ ಕ್ರಮ ಕೈಗೊಂಡಿದೆ.
ಗುಜರಾತ್ನ ಅಹ್ಮದಾಬಾದ್ ಹಾಗೂ ವಿಜಯವಾಡ ಕೊರೊನಾ ಸೆಂಟರ್ಗಳಲ್ಲಿ ನಡೆದ ಅಗ್ನಿ ದುರಂತ ಎಲ್ಲಾ ರಾಜ್ಯಗಳಿಗೆ ಅಪಾಯದ ಕರೆಗಂಟೆಯಾಗಿದೆ. ರಾಜ್ಯದ ಕೊರೊನಾ ಸೆಂಟರ್ಗಳಲ್ಲಿ ಯಾವುದೇ ಅಗ್ನಿ ದುರಂತ ನಡೆಯದಂತೆ ಹಾಗೂ ಪ್ರತಿ ಕೇಂದ್ರಗಳಲ್ಲಿ ಪರಿವೀಕ್ಷಣೆ ನಡೆಸುವಂತೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳಿಗೆ ಇಲಾಖೆಯ ಎಡಿಜಿಪಿ ಸುನಿಲ್ ಅಗರವಾಲ್ ಆದೇಶಿಸಿದ್ದಾರೆ.
ಕೊರೊನಾ ಕ್ವಾರಂಟೈನ್ ಕೇಂದ್ರಗಳಲ್ಲಿ ಫೈರ್ ಸೇಫ್ಟಿ ಪ್ರತಿ ಕೋವಿಡ್ ಸೆಂಟರ್ಗಳಲ್ಲಿ ಅಧಿಕಾರಿಗಳು ಪರಿವೀಕ್ಷಣೆ ನಡೆಸಬೇಕು. ಎಷ್ಟು ಮಂದಿ ರೋಗಿಗಳಿದ್ದಾರೆ. ಸ್ಥಳಾವಕಾಶ ಎಷ್ಟಿದೆ. ಅಗತ್ಯನುಗುಣವಾಗಿ ಸೂಕ್ತ ಅಗ್ನಿ ನಂದಕಗಳು ಹಾಗೂ ಅಗ್ನಿಶಾಮಕ ವಾಹನ ಸೇರಿ ಅಗತ್ಯ ಅಗ್ನಿ ಸುರಕ್ಷತಾ ಕ್ರಮಗಳನ್ನು ಒದಗಿಸುವಂತೆ ಅಗರವಾಲ್ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಸೂಚನೆಯಂತೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ.
ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪಟ್ಟಿ ತಯಾರಿಸುತ್ತಿದ್ದಾರೆ. ಜಿಲ್ಲಾ ಕೇಂದ್ರಗಳಲ್ಲಿ ಅಗ್ನಿ ಅವಘಡ ನಡೆದ್ರೆ ಸಂಬಂಧ ಪಟ್ಟ ಅಧಿಕಾರಿಗಳೇ ಹೊಣೆಗಾರರಾಗಲಿದ್ದಾರೆ. ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಅಗರವಾಲ್ ಎಚ್ಚರಿಕೆ ನೀಡಿದ್ದಾರೆ.
ಬಹುತೇಕ ಕ್ವಾರಂಟೈನ್ ಸೆಂಟರ್ಗಳಲ್ಲಿ ಫೈರ್ ಸೇಫ್ಟಿ ಅಳವಡಿಸಿಲ್ಲ :ಬೆಂಗಳೂರಿನಲ್ಲಿ ಈಗಾಗಲೇ ಸುರಕ್ಷಿತ ಅಗ್ನಿಶಾಮಕ ಉಪಕರಣ ಅಳವಡಿಸುವಂತೆ ಎಲ್ಲಾ ಆಸ್ಪತ್ರೆಗಳಿಗೆ ನೋಟಿಸ್ ರವಾನೆ ಮಾಡಲಾಗಿದೆ. ಶಾಲಾ ಕಟ್ಟಡಗಳು, ಸಭಾಂಗಣಗಳು ಹಾಗೂ ಬಯಲು ಪ್ರದೇಶಗಳು ಕೋವಿಡ್ ಕೇರ್ ಸೆಂಟರ್ಗಳಾಗಿ ಪರಿವರ್ತಿಸುವುದರಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬೆಂಗಳೂರಿನ ನಾಲ್ಕು ಭಾಗಗಳಲ್ಲಿ ಕೊರೊನಾ ನೊಡಲ್ ಅಧಿಕಾರಿಗಳಾಗಿ ಈಗಾಗಲೇ ನೇಮಕ ಮಾಡಲಾಗಿದೆ.
ಇದರಂತೆ ಬೆಂಗಳೂರು ನಗರದಲ್ಲಿ 90 ಕೊವೀಡ್ ಸೆಂಟರ್ಗಳು ಇರುವುದನ್ನು ಗುರುತಿಸಲಾಗಿದೆ. ಈಗಾಗಲೇ ಅಧಿಕಾರಿಗಳು ಪರಿವೀಕ್ಷಣೆ ನಡೆಸಿದ್ದು, ಬಹುತೇಕ ಸುರಕ್ಷಿತ ಅಗ್ನಿಶಾಮಕ ವ್ಯವಸ್ಥೆ ಇಲ್ಲದಿರುವುದು ಕಂಡು ಬಂದಿದೆ. ಈ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳಿಗೆ ದಂಡ ವಿಧಿಸುವ ಬದಲು ತಿಳುವಳಿಕೆ ಮೂಡಿಸುವ ಕೆಲಸ ಮಾಡಲಾಗುತ್ತಿದೆ.
ರಾಷ್ಟ್ರೀಯ ಕಟ್ಟಡ ನಿಯಮ ಪ್ರಕಾರ 15ಕ್ಕಿಂತ ಹೆಚ್ಚು ಮೀಟರ್ ಎತ್ತರದ ಕಟ್ಟಡಗಳಲ್ಲಿ ಅಗ್ನಿಶಾಮಕ ಇಲಾಖೆಯಿಂದ ಎನ್‌ಒಸಿ ಪಡೆಯುವುದು ಕಡ್ಡಾಯ. ಬಹುತೇಕ ಕಡೆ ಈ ನಿಯಮ ಪಾಲನೆಯಾಗುತ್ತಿಲ್ಲ. ಕೊರೊನಾ ಸಂಕಷ್ಟ ಹಿನ್ನೆಲೆ ಇಲಾಖೆ ಸಂಬಂಧಪಟ್ಟ ಆಸ್ಪತ್ರೆ ಅಥವಾ ಸಂಸ್ಥೆ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳುತ್ತಿಲ್ಲ. ಇದರ ಬದಲಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಈಟಿವಿ ಭಾರತಕ್ಕೆ ಸುನಿಲ್ ಅಗರವಾಲ್ ಮಾಹಿತಿ ನೀಡಿದರು.
ಕೊರೊನಾ ಸೆಂಟರ್ ಗಳಲ್ಲಿ ಅಳವಡಿಸಿಕೊಳ್ಳಬೇಕಾದ ಕ್ರಮಗಳು:
- ಕೊರೊನಾ ಸೆಂಟರ್ಗಳಲ್ಲಿರುವ ಜನಸಂಖ್ಯೆಗೆ ಅನುಗುಣವಾಗಿ ಸುರಕ್ಷಿತ ಅಗ್ನಿಶಾಮಕ ಉಪಕರಣವಿರುವಂತೆ ನೋಡಿಕೊಳ್ಳಬೇಕು.
- ಒಂದೇ ಸೂರಿನಡಿ ಸಾವಿರಾರು ರೋಗಿಗಳಿರುವ ಕ್ವಾರಂಟೈನ್ ಕೇಂದ್ರಗಳಲ್ಲಿ ಅಗ್ನಿಶಾಮಕ ವಾಹನ ಸದಾ ಇರುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
- ಖಾಸಗಿ ಆಸ್ಪತ್ರೆಗಳಲ್ಲಿ ಅಗ್ನಿ ನಂದಕಗಳು ಕೆಲಸ ಮಾಡುತ್ತಿದೆಯಾ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು ಒಳಿತು.