ಬೆಂಗಳೂರು: ನಗರದಲ್ಲಿ ಕಳ್ಳತನದ ಘಟನೆಗಳು ನಡೆದಾಗ ಮೊದಲು ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಬೇಕು. ದೂರುದಾರರಿಗೆ ಇ-ಲಾಸ್ಟ್ ಪೋರ್ಟಲ್ ಮೂಲಕ ದೂರು ನೀಡಿ ಎಂಬ ಸಲಹೆಯನ್ನು ಕೊನೆಗಾಣಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ನಗರದ ಎಲ್ಲಾ ವಿಭಾಗದ ಡಿಸಿಪಿಗಳ ಮುಖಾಂತರ ಇನ್ಸ್ಪೆಕ್ಟರ್ಗಳಿಗೆ ತಾಕೀತು ಮಾಡಿದ್ದಾರೆ.
ಕಳ್ಳತನವಾದಾಗ ಮೊದಲು FIR ದಾಖಲಿಸಿ ತ್ವರಿತವಾಗಿ ತನಿಖೆ ನಡೆಸಿ: ಕಮಲ್ ಪಂತ್ - ಇ-ಲಾಸ್ಟ್ ಪೋರ್ಟಲ್
ಯಾವ ರೀತಿಯ ಕಳ್ಳತನ ನಡೆದರೂ ಕಡ್ಡಾಯವಾಗಿ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿ ಪ್ರಕರಣ ಭೇದಿಸಿ ಎಂದು ಪೊಲೀಸರಿಗೆ ಕಮಲ್ ಪಂತ್ ಖಡಕ್ ಸೂಚನೆ ನೀಡಿದ್ದಾರೆ.
![ಕಳ್ಳತನವಾದಾಗ ಮೊದಲು FIR ದಾಖಲಿಸಿ ತ್ವರಿತವಾಗಿ ತನಿಖೆ ನಡೆಸಿ: ಕಮಲ್ ಪಂತ್ Kamal Pant](https://etvbharatimages.akamaized.net/etvbharat/prod-images/768-512-9671928-thumbnail-3x2-megha.jpg)
ಹಲವು ಮಾದರಿಯ ಕಳ್ಳತನ ನಡೆದಾಗ ಆನ್ಲೈನ್ ಮೂಲಕ ಇ-ಲಾಸ್ಟ್ ಆ್ಯಪ್ನಲ್ಲಿ ದೂರು ನೀಡಿ ಎಂದು ಠಾಣಾಧಿಕಾರಿಗಳು ದೂರುದಾರರಿಗೆ ಸಲಹೆ ನೀಡುತ್ತಿದ್ದರು. ಇದರಂತೆ ಆನ್ಲೈನ್ನಲ್ಲಿ ದೂರು ದಾಖಲಾದರೂ ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸರು ವಿಫಲವಾಗುತ್ತಿದ್ದರು. ಇದರಿಂದ ಪೊಲೀಸರ ವಿರುದ್ಧ ಕಳ್ಳತನಕ್ಕೆ ಒಳಗಾದ ಮಾಲೀಕರು ಅಸಮಾಧಾನ ಹೊರಹಾಕಿದ್ದರು.
ಕಳೆದ ಶನಿವಾರ ಕಮಲ್ ಪಂತ್ರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಈ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬಂದಿದ್ದವು. ಇದರಿಂದ ಎಚ್ಚೆತ್ತ ಪೊಲೀಸ್ ಆಯುಕ್ತರು ಇನ್ನು ಮುಂದೆ ಯಾವ ರೀತಿಯ ಕಳ್ಳತನ ನಡೆದರೂ ಕಡ್ಡಾಯವಾಗಿ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿ ಪ್ರಕರಣ ಭೇದಿಸಬೇಕು. ಸಾರ್ವಜನಿಕರಿಗೆ ಸುಖಾಸುಮ್ಮನೆ ಆನ್ಲೈನ್ನಲ್ಲಿ ದೂರು ನೀಡಿ ಎಂಬ ಸಲಹೆ ಕೊಡದಂತೆ ನಗರದ ಎಲ್ಲಾ ಠಾಣಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.