ಬೆಂಗಳೂರು:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ನಂಜನಗೂಡು ದೇವಸ್ಥಾನದಲ್ಲಿ ಕುಟುಂಬ ಸಮೇತ ಪೂಜೆ ನಡೆಸಿದ ವಿಚಾರವಾಗಿ ಪ್ರತಿಕ್ರಿಯಿಸಿರುವ ಹೈಕೋರ್ಟ್ ಎಫ್ಐಆರ್ ದಾಖಲಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.
ಅಲ್ಲದೇ, ಈ ಸಂಬಂಧ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ನ್ಯಾಯಾಲಯ, ಸರ್ಕಾರಕ್ಕೆ ಸೂಚನೆ ನೀಡಿದೆ. ಹೀಗಾಗಿ ಸಿಎಂ ಪುತ್ರ ವಿಜಯೇಂದ್ರ ವಿರುದ್ಧ ಎಫ್ಐಆರ್ ದಾಖಲಾಗುವ ಸಾಧ್ಯತೆ ಇದೆ. ವಿಜಯೇಂದ್ರ ಕುಟುಂಬ ಸಮೇತರಾಗಿ ಮೇ 18ರಂದು ಮೈಸೂರಿನ ನಂಜನಗೂಡು ನಂಜುಂಡೇಶ್ವರ ದೇವಸ್ಥಾನಕ್ಕೆ ತೆರಳಿ, ವಿಶೇಷ ಪೂಜೆ, ಹೋಮ ಹವನ ನಡೆಸಿದ್ದರು. ಮುಖ್ಯಮಂತ್ರಿಯ ಮಗನಾಗಿ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿದ್ದವು. ಈ ವಿಚಾರವನ್ನು ವಕೀಲ ಜಿ.ಆರ್ ಮೋಹನ್ ಅವರು ಮೆಮೋ ಸಲ್ಲಿಸುವ ಮೂಲಕ ಹೈಕೋರ್ಟ್ ಗಮನಕ್ಕೆ ತಂದಿದ್ದರು.
ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ, ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ-1987ರ ಪ್ರಕಾರ ಆರೋಪಿತರ ನಡೆ ಅಪರಾಧದಿಂದ ಕೂಡಿದೆ. ಹೀಗಾಗಿ ಎಫ್ಐಆರ್ ದಾಖಲಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೇ, ಈ ಸಂಬಂಧ ಕೈಗೊಂಡಿರುವ ಕ್ರಮದ ಬಗ್ಗೆ ಮಾಹಿತಿ ನೀಡುವಂತೆ ಸರ್ಕಾರಕ್ಕೆ ಸೂಚಿಸಿದ್ದು, ಮೆಮೋವನ್ನು ಮೂಲ ಪ್ರಕರಣದೊಂದಿಗೆ ವಿಚಾರಣೆ ನಡೆಸುವುದಾಗಿ ತಿಳಿಸಿದೆ.
ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸಿದ ಬಿ.ವೈ.ವಿಜಯೇಂದ್ರ ವಿರುದ್ಧ ಮೈಸೂರು ಜಿಲ್ಲಾ ಕಾಂಗ್ರೆಸ್ ಘಟಕ ಜಿಲ್ಲಾಧಿಕಾರಿಗೆ ಈಗಾಗಲೇ ದೂರು ನೀಡಿದೆ. ಸರ್ಕಾರದ ನಿಯಮಗಳು ಜನ ಸಾಮಾನ್ಯರಿಗೆ ಅನ್ವಯಿಸುವಂತೆಯೇ ಸಿಎಂ ಪುತ್ರನಿಗೂ ಅನ್ವಯಿಸುತ್ತವೆ. ಹೀಗಾಗಿ ವಿಜಯೇಂದ್ರ ವಿರುದ್ಧ ಎಫ್ಐಆರ್ ದಾಖಲಿಸಲು ಪೊಲೀಸರಿಗೆ ಸೂಚನೆ ನೀಡುವಂತೆ ಹಾಗೂ ದೇವಾಲಯದ ಆಡಳಿತ ಸಿಬ್ಬಂದಿ, ಪುರೋಹಿತರನ್ನು ಅಮಾನತು ಮಾಡುವಂತೆ ಲಿಖಿತವಾಗಿ ಒತ್ತಾಯಿಸಿದೆ. ಈ ಎಲ್ಲ ವಿಚಾರಗಳನ್ನು ಕೂಡ ನ್ಯಾಯಾಲಯದ ಗಮನಕ್ಕೆ ತರಲಾಗಿದೆ.(ಲಾಕ್ಡೌನ್ ನಿಯಮ ಉಲ್ಲಂಘಿಸಿ ನಂಜುಂಡೇಶ್ವರನ ದರ್ಶನ ಪಡೆದ ಬಿ.ವೈ.ವಿಜಯೇಂದ್ರ)