ಬೆಂಗಳೂರು :ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ ಕರ್ನಾಟಕ ಸ್ಥಳೀಯ ನಿಧಿ ಪ್ರಾಧಿಕಾರಗಳ ಆರ್ಥಿಕ ಹೊಣೆಗಾರಿಕೆ ತಿದ್ದುಪಡಿ ವಿಧೇಯಕ-2021ಕ್ಕೆ ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಸದಸ್ಯರ ಸಭಾತ್ಯಾಗದ ನಡುವೆ ಧ್ವನಿಮತದ ಮೂಲಕ ವಿಧಾನ ಪರಿಷತ್ನಲ್ಲಿ ಅಂಗೀಕಾರ ನೀಡಲಾಯಿತು.
ವಿಧಾನ ಪರಿಷತ್ ಶಾಸನ ರಚನೆ ಕಲಾಪದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪರವಾಗಿ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ ಕರ್ನಾಟಕ ಸ್ಥಳೀಯ ನಿಧಿ ಪ್ರಾಧಿಕಾರಗಳ ಆರ್ಥಿಕ ಹೊಣೆಗಾರಿಕೆ ತಿದ್ದುಪಡಿ ವಿಧೇಯಕ ಮಂಡಿಸಿದರು.
ವಿಧೇಯಕದ ಮೇಲೆ ಮಾತನಾಡಿದ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್, ಸಾರ್ವಜನಿಕರ ಹಣ, ತೆರಿಗೆ ರೂಪದ ಹಣ ನಗರಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆಗೆ ಬರಲಿದೆ. ಈ ಹಣದ ರಕ್ಷಣೆಗೆ ಇದರ ಮೇಲೆ ಹದ್ದಿನ ಕಣ್ಣಿಡಬೇಕಿದೆ. ಅವ್ಯವಹಾರ ಆಗದಂತೆ ನೋಡಿಕೊಳ್ಳಬೇಕು.
ಈ ರೀತಿಯ ತಿದ್ದುಪಡಿ ಅವಶ್ಯಕತೆ ಯಾಕೆ? ಕಳ್ಳನ ಕೈಗೆ ಕೀಲಿ ಕೈ ಕೊಟ್ಟ ರೀತಿ ಆಗಲಿದೆ. ಕೌಂಟರ್ ಚೆಕ್ ಬೇಡ ಎನ್ನುವುದು ಯಾಕೆ? ಇದನ್ನು ಮತ್ತಷ್ಟು ಬಿಗಿ ಮಾಡಬೇಕು. ಇದರ ಬದಲು ಅಕೌಂಟಬಿಲಿಟಿಯೇ ಇಲ್ಲದಂತಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ, ಹಣಕಾಸು ಲೆಕ್ಕಪತ್ರ ನಿರ್ವಹಣೆ ಅಧಿಕಾರವನ್ನು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಕೊಡುವ ಬಿಲ್, ಹಾಗಾದರೆ ಎಲ್ಲಾ ಇಲಾಖೆಗೂ ಇದೇ ರೀತಿ ಅಧಿಕಾರ ಕೊಟ್ಟು ಬಿಡಿ ಎಂದರು. ತೇಜಸ್ವಿನಿಗೌಡ, ರವಿಕುಮಾರ್ ಸೇರಿ ಬಿಜೆಪಿ ಸದಸ್ಯರು ವಿಧೇಯಕವನ್ನು ಸಮರ್ಥಿಸಿಕೊಂಡರು.