ಕರ್ನಾಟಕ

karnataka

ETV Bharat / city

ಕೆಲಸ ಗೊತ್ತಿಲ್ಲದ ಅಡ್ಡಕಸುಬಿ ವಿತ್ತ ಸಚಿವರು, ಮೋದಿ ಜಿಡಿಪಿ ಕುಸಿತಕ್ಕೆ ಕಾರಣ - ಸಿದ್ದರಾಮಯ್ಯ ಟ್ವೀಟೇಟು

2015ರಲ್ಲಿ ಜಿಡಿಪಿ ಅಂದಾಜು ಮಾಡುವ ಮೂಲವರ್ಷವನ್ನು 2004-05ರಿಂದ 2011-12ಕ್ಕೆ ಬದಲಾಯಿಸಲಾಯಿತು. ಅದರ ನಂತರ ಬಣ್ಣ ಬಯಲಾಗಬಾರದೆಂದು ಅಧಿಕೃತ ಅಂಕಿ ಅಂಶಗಳನ್ನೇ ತಡೆಹಿಡಿಯಲಾಯಿತು. ಈಗ ಎಲ್ಲವನ್ನು ಕೊರೊನಾ ಲೆಕ್ಕಕ್ಕೆ ಬರೆದು ಕೈತೊಳೆದುಕೊಳ್ಳಲು ಪ್ರಧಾನಿ ನರೇಂದ್ರ ಮೋದಿಯವರು ಹೊರಟಿದ್ದಾರೆ..

financial-management-is-responsible-for-the-great-depression-siddaramaiah
ಸಿದ್ದರಾಮಯ್ಯ

By

Published : Sep 1, 2020, 9:29 PM IST

ಬೆಂಗಳೂರು :ದೇಶದ ಜಿಡಿಪಿ ಶೇ.23.9ರಷ್ಟು ಕುಸಿತ ಕಂಡಿರುವುದು ಆಘಾತಕಾರಿ ಬೆಳವಣಿಗೆ ನಿಜ. ಆದರೆ, ಈ ಕುಸಿತದ ಪೂರ್ಣ ಹೊಣೆಯನ್ನು ಕೊರೊನಾ ರೋಗದ ಮೇಲೆ ಹೇರುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಇನ್ನೂ ಹೆಚ್ಚಿನ ಆಘಾತಕಾರಿ ಬೆಳವಣಿಗೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ.

ಈ ಸಂಬಂಧ ಟ್ವೀಟ್ ಮತ್ತು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ದೇಶದ ಆರ್ಥಿಕತೆ ರೋಗಗ್ರಸ್ತವಾಗಿದೆ ಎನ್ನವುದನ್ನು ಸರ್ಕಾರದ ಅಧಿಕೃತ ದಾಖಲೆಗಳೇ ಹೇಳುತ್ತಿವೆ. ಆರ್​ಬಿಐ ಗವರ್ನರ್ ಅವರಿಂದ ಹಿಡಿದು ಆರ್ಥಿಕ ಸಲಹೆಗಾರರವರೆಗೆ ದೇಶದ ಪ್ರಖ್ಯಾತ ಆರ್ಥಿಕ ತಜ್ಞರೆಲ್ಲರೂ ಆರ್ಥಿಕತೆ ಸಾಗುವ ದಾರಿ ಬಗ್ಗೆ ಆತಂಕ ಪಟ್ಟು ಎಚ್ಚರಿಸಿದ್ದರು. ಆಗ ಕುರುಡು-ಕಿವುಡು ಆಗಿದ್ದ ಸರ್ಕಾರ ಈಗ ಕೊರೊನಾಕ್ಕಾಗಿ ರೋಧಿಸುತ್ತಿದೆ ಎಂದು ಹೇಳಿದ್ದಾರೆ.

ಅಧಿಕೃತ ಅಂಕಿ ಅಂಶ ತಡೆಹಿಡಿಯಲಾಯಿತು:2015ರಲ್ಲಿ ಜಿಡಿಪಿ ಅಂದಾಜು ಮಾಡುವ ಮೂಲವರ್ಷವನ್ನು 2004-05ರಿಂದ 2011-12ಕ್ಕೆ ಬದಲಾಯಿಸಲಾಯಿತು. ಅದರ ನಂತರ ಬಣ್ಣ ಬಯಲಾಗಬಾರದೆಂದು ಅಧಿಕೃತ ಅಂಕಿ ಅಂಶಗಳನ್ನೇ ತಡೆಹಿಡಿಯಲಾಯಿತು. ಈಗ ಎಲ್ಲವನ್ನು ಕೊರೊನಾ ಲೆಕ್ಕಕ್ಕೆ ಬರೆದು ಕೈತೊಳೆದುಕೊಳ್ಳಲು ಪ್ರಧಾನಿ ನರೇಂದ್ರ ಮೋದಿಯವರು ಹೊರಟಿದ್ದಾರೆ. ಕೊರೊನಾ ರೋಗದ ಬಗ್ಗೆ ಜನ ಜಾಗೃತಿ ಮೂಡಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿದ್ದ ಪ್ರಧಾನಿ ಜನರಿಗೆ ಜಾಗಟೆ ಬಾರಿಸಲು, ದೀಪ ಹಚ್ಚಲು ಹೇಳಿರುವುದು ಕೊರೊನಾ ಮಾರಿಯನ್ನು ಸರ್ಕಾರ ಎಷ್ಟು ಗಂಭೀರವಾಗಿದೆ ಪರಿಗಣಿಸಿತ್ತು ಎನ್ನುವುದಕ್ಕೆ ಸಾಕ್ಷಿ.

ಲಾಕ್‌ಡೌನ್ ಅಗತ್ಯವಿತ್ತು ನಿಜ. ನಮ್ಮ ಪಕ್ಷ ಕೂಡ ಅದನ್ನು ಬೆಂಬಲಿಸಿತ್ತು. ಆದರೆ, ಅವೈಜ್ಞಾನಿಕವಾಗಿ ದಿನಕ್ಕೊಂದು ರೀತಿಯ ಅನಿಶ್ಚಿತ ನಿರ್ಧಾರಗಳ ಮೂಲಕ ಲಾಕ್‌ಡೌನ್ ಜಾರಿಗೊಳಿಸಿದ್ದ ಪರಿಣಾಮವಾಗಿ ಅದರಿಂದ ಲಾಭವಾಗಲಿಲ್ಲ, ನಷ್ಟವಾಗಿದ್ದೇ ಹೆಚ್ಚು. ಇದರ ಪೂರ್ಣ ಹೊಣೆಯನ್ನು ಪ್ರಧಾನ ಮಂತ್ರಿಯವರೇ ವಹಿಸಿಕೊಳ್ಳಬೇಕಾಗುತ್ತದೆ ಎಂದಿದ್ದಾರೆ.

ದೇಶ ಎದುರಿಸುತ್ತಿರುವ ಈಗಿನ ಆರ್ಥಿಕ ದುಸ್ಥಿತಿಗೆ ನೋಟು ಅಮಾನ್ಯೀಕರಣ, ದೋಷಪೂರಿತ ಜಿಎಸ್​ಟಿಯ ಅವೈಜ್ಞಾನಿಕ ಜಾರಿ ಮತ್ತು ಕೆಲಸವೇ ಗೊತ್ತಿಲ್ಲದ ಅಡ್ಡಕಸುಬಿ ಸಚಿವರು ಕೂಡ ಕಾರಣ ಎಂದು ಅವರು ದೇಶದ ಮುಂದೆ ಮೊದಲು ತಪ್ಪೊಪ್ಪಿಕೊಳ್ಳಬೇಕು. ರೋಗದ ಕಾರಣ ತಿಳಿಯದೆ ಔಷಧಿ ಕೊಟ್ಟರೆ ರೋಗ ಗುಣವಾಗಲಾರದು ಎಂದಿದ್ದಾರೆ.

For All Latest Updates

ABOUT THE AUTHOR

...view details