ಬೆಂಗಳೂರು: ಸಿನಿಮಾಗಳನ್ನು ಒಟಿಟಿ ಪ್ಲಾಟ್ ಫಾರ್ಮ್ನಲ್ಲಿ ಬಿಡುಗಡೆ ಮಾಡುವುದರಿಂದ ಚಿತ್ರರಂಗಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಗುಬ್ಬಿ ಜೈರಾಜ್ ಹೇಳಿದ್ದಾರೆ.
ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಗುಬ್ಬಿ ಜೈರಾಜ್ ಪ್ರತಿಕ್ರಿಯೆ ಸಿನಿಮಾಗಳನ್ನು ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಮಾಡುತ್ತಿರುವುದಕ್ಕೆ ಗಾಂಧಿನಗರದಲ್ಲಿ ಸಾಕಷ್ಟು ಪರ ವಿರೋಧದ ಚರ್ಚೆಗಳಾಗ್ತಿವೆ. ಆದ್ರೆ ಅದರಿಂದ ಚಿತ್ರರಂಗಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ. ಯಾಕಂದರೆ ಅದು ತಾತ್ಕಲಿಕ ವೇದಿಕೆ ಅಷ್ಟೇ. ಅಲ್ಲದೆ ಒಟಿಟಿಯಲ್ಲಿ ಸಿನಿಮಾ ರಿಲೀಸ್ ಮಾಡುವುದನ್ನು ತಡೆಯೋಕೆ ನಮಗೆ ಕಾನೂನಿನ ಚೌಕಟ್ಟಿನಲ್ಲಿ ಯಾವುದೇ ಅಧಿಕಾರವಿಲ್ಲ ಎಂದು ಜೈರಾಜ್ ಸ್ಪಷ್ಟಪಡಿಸಿದ್ದಾರೆ.
ಜೊತೆಗೆ ಚಿತ್ರಗಳನ್ನು ಎಲ್ಲಿ ಬಿಡುಗಡೆ ಮಾಡಬೇಕು ಎಂಬುದು ನಿರ್ಮಾಪಕರ ವೈಯಕ್ತಿಕ ಆಯ್ಕೆ ಆಗಿರುತ್ತದೆ. ಸಿನಿಮಾಗೆ ನಿರ್ಮಾಪಕರು ಹಣ ಹಾಕಿರ್ತಾರೆ. ಹೀಗಾಗಿ ಅವರನ್ನು ಪ್ರಶ್ನೆ ಮಾಡಲು ಆಗುವುದಿಲ್ಲ. ಅಲ್ಲದೆ ಒಟಿಟಿ ತಾತ್ಕಾಲಿಕ ಅಷ್ಟೇ ಎಂದು ಪುನೀತ್ ರಾಜ್ ಕುಮಾರ್ ಸಹ ಹೇಳಿದ್ದಾರೆ ಎಂದರು.
ಚಿತ್ರಮಂದಿರಗಳಿಲ್ಲದೆ ಸಿನಿಮಾಗಳಿಲ್ಲ ಅದು ನಮಗೆ ಗೊತ್ತಿರೋ ವಿಚಾರ. ಇದೊಂದು ತಾತ್ಕಾಲಿಕ ವೇದಿಕೆ ಆಗಿದ್ದು, ಸ್ಟಾರ್ ನಟರ ಚಿತ್ರಗಳು ಥಿಯೇಟರ್ ಗಳಲ್ಲೇ ಬಿಡುಗಡೆ ಆಗಲಿವೆ. ಅಲ್ಲದೆ ನಟರಿಗೆ ಸ್ಟಾರ್ ಪಟ್ಟ ಸಿಕ್ಕುವುದು ಚಿತ್ರಮಂದಿರಗಳಲ್ಲಿ. ಇವುಗಳಿಗೆ ಸರಿಸಮ ಯಾವುದು ಇಲ್ಲ. ಕಾಲಕ್ಕೆ ತಕ್ಕಂತೆ ಬದಲಾಗ್ತಿದೆ. ಇದೊಂದು ಟ್ರಯಲ್ ಅಂಡ್ ಎರರ್ ಪ್ರಯೋಗವಾಗಿದೆ. ಒಂದೆರಡು ಸಿನಿಮಾಗಳು ಒಟಿಟಿಯಲ್ಲಿ ರಿಲೀಸ್ ಆಗಲಿ ನಂತರ ಒಳಿತು ಕೆಡಕಿನ ಅರಿವಾಗಲಿದೆ ಎಂದರು.
ಇನ್ನು, ಒಂದೆರಡು ಸಿನಿಮಾ ರೀಲಿಸ್ ಆದ ಮೇಲೆ ಅದಕ್ಕೆ ಉತ್ತರ ಸಿಗಲಿದೆ. ಇದರಿಂದ ಸರ್ಕಾರಕ್ಕೆ ಯಾವುದೇ ಆದಾಯ ಇಲ್ಲ. ಒಟ್ಟಿನಲ್ಲಿ ಒಟಿಟಿ ಪ್ಲಾಟ್ ಫಾರ್ಮ್ ನಿಂದ ಚಿತ್ರಮಂದಿರಗಳಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ್ದಾರೆ.