ಬೆಂಗಳೂರು :ರಾಜ್ಯ ಸರ್ಕಾರವು ಕೊರೊನಾ ನೆಪವೊಡ್ಡಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವರ್ಗಕ್ಕೆ ಸೇರಿದ ಪಿಹೆಚ್ಡಿ ಹಾಗೂ ಎಂಫಿಲ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಕೊಡುತ್ತಿದ್ದ ಪ್ರೋತ್ಸಾಹಧನ 25,000 ರೂಪಾಯಿ ಕಡಿತ ಮಾಡಿದೆ.
ಏಕಾಏಕಿ ಈ ಶೈಕ್ಷಣಿಕ ವರ್ಷದಲ್ಲಿ ₹15,000 ಕಡಿತ ಮಾಡಿ ಕೇವಲ ₹10,000 ಮಾತ್ರ ಕೊಡುವುದಾಗಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಹಜ್ ಮತ್ತು ವಕ್ಫ್ ಇಲಾಖೆಯು ಇತ್ತೀಚೆಗೆ ಆದೇಶ ಮಾಡಿರುವುದನ್ನು ಎಸ್ಎಫ್ಐ ಸಂಘಟನೆ ಖಂಡಿಸುತ್ತದೆ ಎಂದು ಅಂತರ ರಾಜ್ಯ ಜಂಟಿ ಕಾರ್ಯದರ್ಶಿ ಭೀಮನಗೌಡ ತಿಳಿಸಿದ್ದಾರೆ.
ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಕಡಿತಗೊಳಿಸಿದ್ದಕ್ಕೆ ಎಸ್ಎಫ್ಐ ಸಂಘಟನೆ ಖಂಡನೆ.. ವರ್ಷಕ್ಕೆ 3 ಲಕ್ಷ ಶೈಕ್ಷಣಿಕ ಪ್ರೋತ್ಸಾಹ ಧನ ನೀಡುತ್ತಿತ್ತು. ಈಗ ಕೊರೊನಾ ಕಾರಣ ನೀಡಿ ಒಂದು ಲಕ್ಷಕ್ಕೆ ಇಳಿಸಿರುವ ವಿದ್ಯಾರ್ಥಿ ವಿರೋಧಿ ನೀತಿ ಸರಿಯಲ್ಲ. ಬಿಜೆಪಿ ಸರ್ಕಾರ ಬಂದ ನಂತರದಲ್ಲಿ ವಿದ್ಯಾರ್ಥಿಗಳ ಹಕ್ಕುಗಳನ್ನು ದಮನ ಮಾಡುತ್ತಿರುವುದಲ್ಲದೆ ಅವರಿಗೆ ಸಿಗಬೇಕಾದ ಶೈಕ್ಷಣಿಕ ಪ್ರೋತ್ಸಾಹ ಧನವನ್ನು ಕಡಿತಗೊಳಿಸಿದೆ.
ಇತ್ತೀಚೆಗೆ ಕೇಂದ್ರ ಸರ್ಕಾರದ ವಿದ್ಯಾರ್ಥಿ ವೇತನ ಕಡಿತ ಮಾಡಿದ್ದರಿಂದಾಗಿ ಶೈಕ್ಷಣಿಕ ಶುಲ್ಕಗಳು ಕಟ್ಟಲು ಸಾಧ್ಯವಾಗದೆ ಐಶ್ವರ್ಯ ಎಂಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತಿಂಗಳಿಗೆ ₹25 ಸಾವಿರದಂತೆ ಪಿಹೆಚ್ಡಿ ವಿದ್ಯಾರ್ಥಿಗಳಿಗೆ ಮೂರು ವರ್ಷ ಹಾಗೂ ಎಂಫಿಲ್ ಮಾಡುವವರಿಗೆ ಎರಡು ವರ್ಷ ಈ ಫೆಲೋಶಿಪ್ ಸಿಗುತ್ತಿತ್ತು.
ಆದರೆ, ಕಳೆದ 10 ತಿಂಗಳಿನಿಂದ ಈ ಹಣವನ್ನು ವಿದ್ಯಾರ್ಥಿಗಳಿಗೆ ತಲುಪಿಸಲು ಸರ್ಕಾರ ವಿಫಲವಾಗಿದೆ. ಈಗ ಏಕಾಏಕಿ ವರ್ಷಕ್ಕೆ ಒಂದು ಲಕ್ಷ ಮಾತ್ರ ನೀಡಲಾಗುವುದು ಎಂಬ ಸುತ್ತೋಲೆ ಹೊರಡಿಸಿರುವುದು ವಿದ್ಯಾರ್ಥಿಗಳಿಗೆ ಆತಂಕ ಉಂಟು ಮಾಡಿದೆ.
ಹಾಗೆಯೇ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಲ್ಲಿ ಬಹಳ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಈ ಕೂಡಲೇ ಈ ವಿದ್ಯಾರ್ಥಿ ವಿರೋಧಿ ನೀತಿಗಳನ್ನು ಕೈಬಿಡಬೇಕು. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾದ ಆರ್ಥಿಕ ಯೋಜನೆಗಳನ್ನು ಮುಂದುವರೆಸಬೇಕು ಎಂದು ಒತ್ತಾಯಿಸಿದರು.