ಬೆಂಗಳೂರು: ಲಾಕ್ಡೌನ್ನಿಂದಾಗಿ ಹೂ ಮಾರುಕಟ್ಟೆಗೆ ತೀವ್ರ ಹೊಡೆತ ಬಿದ್ದಿದ್ದು, ಮಾರುಕಟ್ಟೆಗೆ ತಂದ ಹೂಗಳು ಮಾರಾಟವಾಗದ ಹಿನ್ನೆಲೆ ರೈತರು ರಸ್ತೆಗೆ ಸುರಿದ ಘಟನೆ ನಗರದ ಕೆ.ಆರ್. ಮಾರುಕಟ್ಟೆಯಲ್ಲಿ ನಡೆದಿದೆ.
ರೈತರು ತಾವು ಬೆಳೆದ ಹೂಗಳನ್ನು ಕೆ.ಆರ್.ಮಾರುಕಟ್ಟೆಗೆ ಮಾರಾಟ ಮಾಡಲು ತಂದಿದ್ದರು. ಆದರೆ ಲಾಕ್ಡೌನ್ ಹಿನ್ನೆಲೆ ಮಾರುಕಟ್ಟೆ ಸಂಪೂರ್ಣ ಬಂದ್ ಆಗಿರುವ ಹಿನ್ನೆಲೆ ಮಾರಾಟ ಮಾಡಲು ಸಾಧ್ಯವಾಗದೇ ಹೂಗಳನ್ನು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದರು. ಸುಮಾರು ಎಂಟು ತಿಂಗಳ ಕಾಲ ಕಷ್ಟ ಪಟ್ಟು ಬೆಳೆದ ಗುಲಾಬಿ, ಸುಂಗಧರಾಜ ಹೂಗಳನ್ನು ರೈತರು ರಸ್ತೆ ಬದಿಗೆ ಸುರಿಯುತ್ತಿದ್ದಾರೆ.
ನಾಲ್ಕು ಲಕ್ಷ ರೂ. ಖರ್ಚು ಮಾಡಿ ಚೆಂಡು ಹೂ ಬೆಳೆದಿದ್ದೆ. ಈಗ ಯಾರೂ ಕೇಳುವವರಿಲ್ಲ, ವ್ಯಾಪಾರಸ್ಥರು ಕೂಡಾ ಬೇಡ ಅಂತಿದಾರೆ, ಯಾರಾದರೂ ವ್ಯಾಪಾರಿಗಳಿದ್ದರೆ ತಿಳಿಸಿ ಎಂದು ಕೋಲಾರ ಜಿಲ್ಲೆಯ ರೈತನೊಬ್ಬ ಅಳಲು ತೋಡಿದ್ದಾರೆ.
ಈ ಬಗ್ಗೆ ಮಾತನಾಡಿದ ಕೆ.ಆರ್ ಮಾರುಕಟ್ಟೆ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಿಎಮ್ ದಿವಾಕರ್, ಹೂವು ಮಾತ್ರ ಜೆಸಿ ರಸ್ತೆಯಲ್ಲಿ ಮಾರಾಟ ಮಾಡಲಾಗ್ತಿತ್ತು. ಆದರೆ, ಈಗ ಅದಕ್ಕೂ ಅವಕಾಶ ಕೊಡ್ತಿಲ್ಲ. ಹೂವುಗಳು ಒಂದೇ ದಿನಕ್ಕೆ ಹಾಳಾಗುತ್ತವೆ. ವ್ಯಾಪಾರ ಆಗದ ಕಾರಣ ರೈತರು ರಸ್ತೆಗೆ ಸುರಿಯುತ್ತಿದ್ದಾರೆ. ವ್ಯಾಪಾರ ವಹಿವಾಟು ನಡೆಸಲು ಹತ್ತಿರದ ಮೈದಾನವೊಂದರಲ್ಲಿ ಅವಕಾಶ ಕೊಡಿ ಅಂದ್ರೂ ಕೊಡುತ್ತಿಲ್ಲ. ಮದ್ಯ ಮಾರಾಟಕ್ಕೆ ಅವಕಾಶ ಕೊಡುವ ಸರ್ಕಾರ ರೈತರಿಗೇಕೆ ಲಾಕ್ ಡೌನ್‌ಮಾಡಿದೆ ಎಂದರು.