ಕರ್ನಾಟಕ

karnataka

ಮೋದಿಯ ಈ ಪೊಗರು, ಅಹಂಕಾರಕ್ಕೆ ರೈತರೇ ಕಾರಣ.. ಅದನ್ನ ಅನ್ನದಾತರೇ ಸರಿಪಡಿಸ್ತಾರೆ- ಕೋಡಿಹಳ್ಳಿ

By

Published : Jan 26, 2021, 8:56 PM IST

ಎಂಥಾ ಕಲ್ಲು ಹೃದಯದ ಪ್ರಧಾನಿಯನ್ನು ನೀವು ಪಡೆದಿದ್ದೀರಿ. ಕ್ರಿಕೆಟಿಗ ಸೌರವ್ ಗಂಗೂಲಿಗೆ ಮೈಲ್ಡ್ ಹಾರ್ಟ್ ಅಟ್ಯಾಕ್ ಆದರೆ ಟ್ವೀಟ್ ಮಾಡುತ್ತಾರೆ, ಶಿವಮೊಗ್ಗದಲ್ಲಿ ಕ್ವಾರಿ ಬ್ಲಾಸ್ಟ್ ಆಗಿ ಜನ ಸತ್ತರೆ ಸಂತಾಪ ಸೂಚಿಸುತ್ತಾರೆ‌. ಅಂಬಾನಿ ಅದಾನಿ ಮಕ್ಕಳಿಗೆ ಏನಾದ್ರೂ ಆದರೆ ದವಾಖಾನೆಗೆ ಓಡಿ ಹೋಗಿ ನೋಡಿಕೊಂಡು ಬರುತ್ತಾರೆ..

farmers-forced-government-to-take-back-farm-bill-in-freedom-park
ರೈತ ಸಂಘಟನೆ ಪ್ರತಿಭಟನೆ

ಬೆಂಗಳೂರು :ರೈತ ಗಣತಂತ್ರ ಪಥಸಂಚಲನಕ್ಕೆ ಸ್ವಾತಂತ್ರ್ಯ ಉದ್ಯಾನವನ ಸಾಕ್ಷಿಯಾಯಿತು. ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಸಮಾಗಮಗೊಂಡು ರೈತರ ಪರೇಡ್‌ನ ಸಫಲಗೊಳಿಸಿದರು.

ರೈತರ ಪರೇಡ್ ಹಿನ್ನೆಲೆಯಲ್ಲಿ ನಗರದ ಫ್ರೀಡಂ ಪಾರ್ಕ್​ನಲ್ಲಿ ವಿವಿಧ ಸಂಘಟನೆಗಳು ರೈತರನ್ನು ಬೆಂಬಲಿಸಿ ಪ್ರತಿಭಟನೆ ನಡೆಸಿದವು. ನಗರದ ಹೊರವಲಯದ ವಿವಿಧ ಭಾಗಗಳಿಂದ ಮೆರವಣಿಗೆ ಮೂಲಕ ರೈತರು ಫ್ರೀಡಂ ಪಾರ್ಕ್​ಗೆ ಆಗಮಿಸಿದವು. ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಟ್ರ್ಯಾಕ್ಟರ್ ಚಲಾಯಿಸಿಕೊಂಡೇ ಬೆಂಬಲಿಗರೊಂದಿಗೆ ಫ್ರೀಡಂ ಪಾರ್ಕ್​ಗೆ ಆಗಮಿಸಿದರು.

ರೈತರ ಪ್ರವೇಶದ ನಂತರ ವೇದಿಕೆ ಕಾರ್ಯಕ್ರಮ ನಡೆಸಲಾಯಿತು. ರಾಷ್ಟ್ರಧ್ವಜಾರೋಹಣ ನೆರವೇರಿಸಬೇಕಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್ ಎಸ್ ದೊರೆಸ್ವಾಮಿ ತಡವಾಗಿ ಆಗಮಿಸಿದ ಕಾರಣ, ಅವರ ಬದಲಿಗೆ ರೈತ ಮುಖಂಡ ಬಡಗಲ ನಾಗೇಂದ್ರ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಜನವಿರೋಧಿ ಸರ್ಕಾರದ ವಿರುದ್ಧದ ಈ ಹೋರಾಟ ಸ್ವಾಗತಾರ್ಹ :ನಂತರ ವೇದಿಕೆಗೆ ಆಗಮಿಸಿ ಮಾತನಾಡಿದ ಸ್ವಾತಂತ್ರ್ಯ ಹೋರಾಟಗಾರ ಹೆಚ್ ಎಸ್ ದೊರೆಸ್ವಾಮಿ, ಜನವಿರೋಧಿ ಸರ್ಕಾರದ ವಿರುದ್ದ ಈ ಹೋರಾಟ ನಡೆದಿರುವುದು ಸ್ವಾಗತಾರ್ಹ. ಇಷ್ಟೊಂದು ಸಂಘಟನೆಗಳು ಒಂದಾಗಿರೋದು ಸಂತೋಷ. ನಿಮ್ಮ ಜತೆಗೆ ಹೋರಾಟದಲ್ಲಿ ಪಾಲ್ಗೊಳ್ಳಲು ನನಗೆ ಚೈತನ್ಯವಿಲ್ಲವೆಂಬುದೇ ನನಗೆ ಬೇಸರದ ಸಂಗತಿ.

ದೆಹಲಿಯಲ್ಲಿ ಚಳಿ, ಮಳೆ ಲೆಕ್ಕಿಸದೆ ರೈತರು ಹೋರಾಟ ಮಾಡುತ್ತಿದ್ದಾರೆ‌. ರೈತರ ಹೋರಾಟವನ್ನು ತಡೆಯಲು ಸರ್ಕಾರ ಪ್ರಯತ್ನಿಸಿದ್ದು, ಬೇಸರ ತಂದಿದೆ. ಪೊಲೀಸರ ಗೋಡೆಗಳು, ಬ್ಯಾರಿಕೇಡ್‌ಗಳನ್ನು ಮುರಿದು ರೈತರು ಮುನ್ನುಗ್ಗಿದ್ದಾರೆ‌. ಮೋದಿ ಒಣ ಪ್ರತಿಷ್ಠೆಗೋಸ್ಕರ ರೈತ ಹೋರಾಟ ತಡೆಯಲು ಪ್ರಯತ್ನಿಸಿದ್ದಾರೆ‌.

ಟಿಯರ್ ಗ್ಯಾಸ್‌ನ ಸಹಿಸಿಕೊಂಡು ಮುನ್ನುಗಿರೋದು ಸಾಹಸ. ಇಲ್ಲೂ ಕೂಡ ಕೋಡಿಹಳ್ಳಿ ಚಂದ್ರಶೇಖರ್ ಬಣವನ್ನು ತಡೆಯುವ ಪ್ರಯತ್ನ ಮಾಡಿದ್ದರು. ಅದನ್ನು ಬೇಧಿಸಿ ಚಂದ್ರಶೇಖರ್ ಸಾಹಸ ಮಾಡಿ ಬಂದಿದ್ದಾರೆ‌ ಎಂದರು. ಈ ಕಾಯ್ದೆಗಳನ್ನು ಜಾರಿಗೆ ತರುವ ಮೊದಲು ಅಂಬಾನಿ ಅದಾನಿಗಳಿಗೆ ಸರ್ಕಾರ ರೈಲುಗಳನ್ನು, ಕಂಟೈನರ್​ಗಳನ್ನು ಕೊಟ್ಟಿದೆ‌. ಅದಾನಿ ಅಂಬಾನಿಗಳು 150 ಔಟ್ ಲೆಟ್​ಗಳನ್ನು ಪ್ರಾರಂಭಿಸಲು ಸಜ್ಜಾಗಿದ್ದರು‌.

ಆದರೆ, ಅಷ್ಟರಲ್ಲಿ ಪಂಜಾಬ್, ಹರ್ಯಾಣ ರೈತರು ಎಚ್ಚೆತ್ತು ಪ್ರತಿಭಟನೆ ಮಾಡಿದರು. ಅದಕ್ಕೆ ನಿಂತು ಹೋಯ್ತು. ನಮ್ಮ ಹಣಕಾಸು ಸಚಿವರು ರೈತರ ಕೃಷಿ ಉತ್ಪನ್ನಗಳನ್ನು ಕೊಳ್ಳಲು ಹಣವಿಲ್ಲ ಎಂದು ಕೈ ಎತ್ತಿದ್ದರು. ಇದು ಅದಾನಿ-ಅಂಬಾನಿಗೆ ಎಲ್ಲವನ್ನು ಕೊಡಲು ಮುನ್ಸೂಚನೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಅದಾನಿ-ಅಂಬಾನಿಗೆ ರೈತರ ಭೂಮಿ ಧಾರೆ ನೀಡಲು ಮೋದಿ ನಿರ್ಧಾರ :ರೈತ ಮುಖಂಡ ಚಾಮರಸ ಮಾಲಿ ಪಾಟೀಲ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಾವು ರೈತರ ಪರವಾಗಿಲ್ಲ. ಕಾರ್ಪೊರೇಟ್ ಕಂಪನಿಗಳ ಪರವಾಗಿದ್ದೇವೆ ಎಂದು ಸಾಬೀತು ಮಾಡಿದ್ದಾರೆ.

ಸ್ವಾತಂತ್ರ್ಯ ಉದ್ಯಾನವನದಲ್ಲಿ ರೈತ ಸಂಘಟನೆಗಳ ಸಮಾಗಮ

ಈ ಕಾಯ್ದೆಗಳು ಜಾರಿಗೆ ಬಂದ್ರೆ ನಮ್ಮ ಭೂಮಿ ರೈತರ ಕೈಯಲ್ಲಿ ಉಳಿಯೋದಿಲ್ಲ. ರೈತರ ಭೂಮಿ ಅದಾನಿ ಅಂಬಾನಿಗೆ ಧಾರೆ ಎರೆದುಕೊಡಲು ಮೋದಿ ನಿರ್ಧಾರ ಮಾಡಿದ್ದಾರೆ. ರೈತರ ಜತೆ ಮಾತುಕತೆಯ ನಾಟಕ ಮಾಡಿದ್ದಾರೆ ಎಂದು ಟೀಕಿಸಿದರು.

ಕಲ್ಲು ಹೃದಯದ ಪ್ರಧಾನಿ :ಎಂಥಾ ಕಲ್ಲು ಹೃದಯದ ಪ್ರಧಾನಿಯನ್ನು ನೀವು ಪಡೆದಿದ್ದೀರಿ. ಕ್ರಿಕೆಟಿಗ ಸೌರವ್ ಗಂಗೂಲಿಗೆ ಮೈಲ್ಡ್ ಹಾರ್ಟ್ ಅಟ್ಯಾಕ್ ಆದರೆ ಟ್ವೀಟ್ ಮಾಡುತ್ತಾರೆ, ಶಿವಮೊಗ್ಗದಲ್ಲಿ ಕ್ವಾರಿ ಬ್ಲಾಸ್ಟ್ ಆಗಿ ಜನ ಸತ್ತರೆ ಸಂತಾಪ ಸೂಚಿಸುತ್ತಾರೆ‌. ಅಂಬಾನಿ ಅದಾನಿ ಮಕ್ಕಳಿಗೆ ಏನಾದ್ರೂ ಆದರೆ ದವಾಖಾನೆಗೆ ಓಡಿ ಹೋಗಿ ನೋಡಿಕೊಂಡು ಬರುತ್ತಾರೆ.

ಅದೇ ದೆಹಲಿಯಲ್ಲಿ ರೈತರು 150 ಜನ ಸತ್ತರೂ ಕನಿಷ್ಟ ಸಂತಾಪ ವ್ಯಕ್ತಪಡಿಸಲಿಲ್ಲ. ಇವರು ಪ್ರಧಾನಿಯಾಗಲು ನಾಲಾಯಕ್. ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗಬೇಕು. ಫೆಬ್ರವರಿ 1ರವರೆಗೆ ನಾವು ಸರ್ಕಾರಕ್ಕೆ ಗಡುವು ಕೊಡುತ್ತಿದ್ದೇವೆ. ಅಷ್ಟರಲ್ಲಿ ಕಾಯ್ದೆಗಳನ್ನು ವಾಪಸ್ ಪಡೆಯದೇ ಇದ್ದಲ್ಲಿ ಸಂಸತ್ ಭವನಕ್ಕೆ ನುಗ್ಗುತ್ತೇವೆ ಎಂದು ಎಚ್ಚರಿಸಿದರು.

ಎಂಥಾ ಅಯೋಗ್ಯ ಈ ದೇಶದ ಪ್ರಧಾನಿ :ರೈತ ಮುಖಂಡ ಬಡಗಲಪುರ ನಾಗೇಂದ್ರ ಮಾತನಾಡಿ, ಈ ದೇಶದ ಸಾರ್ವಭೌಮತ್ವವನ್ನು ಮೂರು ಕಾಸಿಗೆ ಹರಾಜು ಹಾಕುತ್ತಿದ್ದಾರೆ. ಈ ದೇಶದ ಸಂಪತ್ತನ್ನು ಕಾರ್ಪೊರೇಟ್ ಸಂಸ್ಥೆಗಳಿಗೆ ದಾನ ಮಾಡಿ, ರೈತಾಪಿ ಕುಲವನ್ನೇ ನಾಶ ಮಾಡುತ್ತಿದ್ದಾರೆ. ಕೃಷಿಕರನ್ನು ದಾಸ್ಯದಲ್ಲಿ ಉಳಿಸಬೇಕೆಂಬ ಹುನ್ನಾರ ಮಾಡಿದ್ದಾರೆ. ಎಂಥಾ ಅಯೋಗ್ಯ ಈ ದೇಶದ ಪ್ರಧಾನಿಯಾಗಿದ್ದಾನೆ. ಈ ದೇಶದ ರೈತರ ಮೇಲೆ ದೆಹಲಿಯಲ್ಲಿ ದಬ್ಬಾಳಿಕೆ ಮಾಡುತ್ತಿರುವುದನ್ನು ನೋಡಿದ್ರೆ, ಈ ದೇಶದ ರಕ್ಷಣೆ ಈ ಪ್ರಧಾನಿಯಿಂದ ಸಾಧ್ಯವಿಲ್ಲ. ನಮ್ಮ ರಕ್ಷಣೆಯನ್ನು ನಾವೇ ಮಾಡಿಕೊಳ್ಳಬೇಕು ಎಂದರು.

ರೈತರ ಹಕ್ಕನ್ನು ಉಳಿಸಬೇಕು :ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ್ ಮಾತನಾಡಿ, ಸ್ವಾತಂತ್ರ್ಯೋತ್ತರ ಭಾರತದಲ್ಲಿ ನಡೆಯುತ್ತಿರುವ ಅಪೂರ್ವವಾದ ಹೋರಾಟ ಇದು. ಈಗ ನಡೆಯುತ್ತಿರುವ ಹೋರಾಟ, ರೌಲಟ್ ಕಾಯ್ದೆ ವಿರುದ್ದ ನಡೆದ ಸ್ವಾತಂತ್ರ್ಯ ಹೋರಾಟದ ಮಾದರಿಯಲ್ಲಿ ನಡೆಯುತ್ತಿರುವ 2ನೇ ಸ್ವಾತಂತ್ರ್ಯ ಹೋರಾಟ ಇದು.

ಇವರು ಏನೇ ಮಾಡಿದ್ರೂ ರೈತರ ಹೋರಾಟದ ಮುಂದೆ ಏನೂ ನಡೆಯಲ್ಲ. ರೈತರು ಇಟ್ಟಿರುವ ಬೇಡಿಕೆ ನ್ಯಾಯಯುತವಾದ ಬೇಡಿಕೆ. ಜನರಿಂದ ಆಯ್ಕೆಯಾದವರು ಬದುಕುವ ರೈತರ ಹಕ್ಕನ್ನು ಉಳಿಸಬೇಕು ಎಂದರು.

56 ಇಂಚಿನ ಎದೆ ಮೇಲೆ ರೈತರು ಟ್ರಾಕ್ಟರ್ ಓಡಿಸಿದ್ದಾರೆ :ಡಿಎಸ್ಎಸ್ ಮುಖಂಡ ಮಾವಳ್ಳಿ ಶಂಕರ್ ಮಾತನಾಡಿ, ಮೋದಿಯ 56 ಇಂಚಿನ ಎದೆಯ ಮೇಲೆ ಇವತ್ತು ದೆಹಲಿಯಲ್ಲಿ ರೈತರು ಟ್ರ್ಯಾಕ್ಟರ್ ಓಡಿಸಿದ್ದಾರೆ. ಯಡಿಯೂರಪ್ಪ ಫೇಕ್ ರೈತ ಹೋರಾಟಗಾರ. ಅವರ ಸುಳ್ಳುಗಳು ಈ ರಾಜ್ಯದ ರೈತರಿಗೆ ಅರ್ಥವಾಗಿದೆ.

ರೈತರ ಬಗರ್ ಹುಕುಂ ಸಾಗುವಳಿ ಜಮೀನುಗಳನ್ನು ಕಾರ್ಪೊರೇಟ್ ಸಂಸ್ಥೆಗಳಿಗೆ ಕೊಡಲು ಹುನ್ನಾರ ಮಾಡಿದ್ದಾರೆ‌. ಯಡಿಯೂರಪ್ಪ ಸರ್ಕಾರದಲ್ಲಿರುವ ಮಂತ್ರಿಗಳು ಮೊದಲು ಕಾಂಗ್ರೆಸ್​ನಲ್ಲಿದ್ದರು. ಅವರಿಗಂತೂ ಎರಡು ನಾಲಿಗೆ‌. ಕಾಂಗ್ರೆಸ್​ನಲ್ಲಿದ್ದಾಗ ಒಂದು ನಾಲಿಗೆ, ಬಿಜೆಪಿಯಲ್ಲಿದ್ದಾಗ ಮತ್ತೊಂದು ನಾಲಿಗೆ ಎಂದು ಕಿಡಿಕಾರಿದರು.

ABOUT THE AUTHOR

...view details