ಬೆಂಗಳೂರು:ರಾಜ್ಯ ಬಂದ್ಗೆ ಸಂಪೂರ್ಣ ಬೆಂಬಲ ಇದೆ. ನಾಡಿನ ವಿಚಾರ ಬಂದಾಗ ನಾವು ರಾಜ್ಯದ ಪರವಾಗಿ ನಿಲ್ಲುತ್ತೇವೆ. ರಾಜ್ಯದೊಳಗೆ ಬೇರೆ ರಾಜ್ಯಗಳ ಪ್ರಕ್ರಿಯೆ ನಡೆಯಬಾರದು. ಎಂಇಎಸ್ ಅನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದರು.
ನಗರದ ಪ್ರೆಸ್ ಕ್ಲಬ್ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಿಯಾದ ಸಿದ್ಧತೆ ಮಾಡಿಕೊಂಡು ಬಂದ್ಗೆ ಕರೆ ಕೊಡಬೇಕಿತ್ತು. ಸಿನಿಮಾ ಲಾಸ್ ಆಗುತ್ತೆ ಎನ್ನುವುದು, ವ್ಯಾಪಾರಸ್ಥರು ನಷ್ಟ ಆಗುತ್ತೆ ಅಂತ ಸಬೂಬು ನೀಡುವುದು ಸರಿಯಾದ ಉತ್ತರ ಅಲ್ಲ. ಕರ್ನಾಟಕ ಬಂದ್ಗೆ ರೈತ ಸಂಘ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಅವರು ಹೇಳಿದರು.
ಶಿಕ್ಷಣಕ್ಕೆ ಸಂಬಂಧಿಸಿದಂತೆ ಸರ್ಕಾರ ತಪ್ಪು ನಿರ್ಧಾರ ಕೈಗೊಂಡಿದೆ. ಕರ್ನಾಟಕ ಯುನಿವರ್ಸಿಟಿ, ಧಾರವಾಡ ವಿದ್ಯಾರ್ಥಿಗಳ ಜತೆ ಸಂಘರ್ಷಕ್ಕಿಳಿದಿದೆ. ಕಾನೂನು ಸಚಿವ ಮಾಧುಸ್ವಾಮಿ ಆದಷ್ಟು ಬೇಗ ಸಮಸ್ಯೆ ಬಗೆಹರಿಸಬೇಕು. ವಿದ್ಯಾರ್ಥಿಗಳು ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.