ಬೆಂಗಳೂರು: ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಭೂಮಿ ಕೊಟ್ಟಿರುವ ಹಲವಾರು ರೈತರು ವ್ಯಾಜ್ಯವನ್ನು ನ್ಯಾಯಾಲಯದಿಂದ ಹೊರಗೆ ಇತ್ಯರ್ಥಪಡಿಸಿಕೊಳ್ಳಲು ಸಮ್ಮತಿ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸೂಚನೆ ಮೇರೆಗೆ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ನಿನ್ನೆ ಉದ್ದೇಶಿತ ಕೆಂಪೇಗೌಡ ಬಡಾವಣೆಯ ಕನ್ನಹಳ್ಳಿ, ಅರ್ಚಕರಹಳ್ಳಿ ಬಡಾವಣೆ, ಸೂಳೆಕೆರೆ ಸೇರಿದಂತೆ ಮುಂತಾದ ಪ್ರದೇಶಗಳಿಗೆ ಭೇಟಿ ನೀಡಿ ರೈತರೊಂದಿಗೆ ಸುದೀರ್ಘವಾದ ಚರ್ಚೆ ನಡೆಸಿದರು. ಜೊತೆಗೆ ರೈತರ ಮನವೊಲಿಸುವಲ್ಲಿ ಕೂಡ ಯಶಸ್ವಿಯಾಗಿದ್ದಾರೆ.
ರೈತರನ್ನು ಉದ್ದೇಶಿಸಿ ಮಾತನಾಡಿದ ಎಸ್.ಆರ್.ವಿಶ್ವನಾಥ್, ಪ್ರಸ್ತುತ ಇರುವ ನೀತಿಯಂತೆ ಜಮೀನು ನೀಡಿರುವ ರೈತರಿಗೆ 40:60 ರ ಅನುಪಾತದಲ್ಲಿ ನಿವೇಶನ ನೀಡಲು ಕಾನೂನಿನ ಯಾವುದೇ ತೊಡಕಿಲ್ಲ. ರಾಜ್ಯದ ಯಾವುದೇ ಮೂಲೆಯಲ್ಲಿ ರೈತರಿಗೆ ಸಮಸ್ಯೆ ಎದುರಾದರೆ ಮೊದಲು ಅದನ್ನು ಪರಿಹರಿಸುವಂತೆ ಬಿಎಸ್ವೈ ಸೂಚನೆ ನೀಡಿದ್ದಾರೆ. ಅದೇ ರೀತಿ ಕೆಂಪೇಗೌಡ ಬಡಾವಣೆಗೆ ಭೂಮಿಯನ್ನು ನೀಡಿರುವ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ನನಗೆ ಸೂಚನೆ ನೀಡಿದ್ದು, ನಮ್ಮ ಪಕ್ಷ ರೈತರ ಹಿತವನ್ನು ಎಂದಿಗೂ ಕೈಬಿಡುವುದಿಲ್ಲ. ಈ ಕಾರಣಕ್ಕಾಗಿಯೇ ರೈತರೊಂದಿಗೆ ಇಡೀ ದಿನ ಕುಳಿತು, ಅವರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡಲೆಂದು ಇಲ್ಲಿಗೆ ಬಂದಿದ್ದೇನೆ. ಆದಷ್ಟು ಬೇಗ ರೈತರ ಸಮಸ್ಯೆಗಳನ್ನು ಪರಿಹರಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಕೋರ್ಟ್ನಿಂದ ಹೊರಗೆ ವ್ಯಾಜ್ಯ ಇತ್ಯರ್ಥ:
ಬಿಡಿಎ ಕೈಗೊಂಡಿರುವ ಈ ಯೋಜನೆಗೆ ಭೂಮಿ ನೀಡುವುದಿಲ್ಲ ಎಂದು ಹಲವಾರು ರೈತರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಈ ಹಿನ್ನೆಲೆ ನ್ಯಾಯಾಲಯದಲ್ಲಿ ಮೊಕದ್ದಮೆ ಹಾಕಿ ವರ್ಷಾನುಗಟ್ಟಲೆ ತೀರ್ಮಾನವಾಗದೇ ಇತ್ತ ಯೋಜನೆಯೂ ಪೂರ್ಣಗೊಳ್ಳದೆ, ಅತ್ತ ರೈತರಿಗೆ ಪರಿಹಾರ ಸಿಗದೇ ಸಮಸ್ಯೆ ಜಟಿಲವಾಗುತ್ತ ಹೋಗುತ್ತದೆ. ಹಾಗಾಗಿ ಕೋರ್ಟ್ನಿಂದ ಹೊರಗೆ ವ್ಯಾಜ್ಯ ಇತ್ಯರ್ಥ ಮಾಡಬೇಕು. ಯೋಜನೆಗೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿರುವುದರ ವಿರುದ್ಧ ನ್ಯಾಯಾಲಯಕ್ಕೆ ಹೋಗಿರುವ ರೈತರು, ಮುಂದೆ ಬಂದು ಬಿಡಿಎ ಜತೆಗೆ ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಅವಕಾಶವನ್ನು ನೀಡಲಾಗುತ್ತಿದೆ ಎಂದು ಹೇಳಿದರು.