ಕರ್ನಾಟಕ

karnataka

ETV Bharat / city

ನಿರಾಶ್ರಿತರ ವಿಚಾರದಲ್ಲಿ ಸುಳ್ಳು ಮಾಹಿತಿ: ಬಿಬಿಎಂಪಿಗೆ ಹೈಕೋರ್ಟ್ ಛೀಮಾರಿ - ಬೆಂಗಳೂರು ಸುದ್ದಿ

ಲಕ್ಷಾಂತರ ಮಂದಿ ನಿರಾಶ್ರಿತರಿಗೆ ಆಶ್ರಯ, ಆಹಾರ ಒದಗಿಸಿದ್ದೇವೆ ಎಂದು ಸುಳ್ಳು ಮಾಹಿತಿ ನೀಡಿರುವ ಬಿಬಿಎಂಪಿಗೆ ಛೀಮಾರಿ ಹಾಕಿರುವ ಹೈಕೋರ್ಟ್‌, ಈ ಕುರಿತು ವರದಿ ನೀಡುವಂತೆ ಸರ್ಕಾರಕ್ಕೆ ಆದೇಶಿಸಿದೆ.

False Information on Refugees ... High Court rebuke to BBMP
ನಿರಾಶ್ರಿತರ ವಿಚಾರದಲ್ಲಿ ಸುಳ್ಳು ಮಾಹಿತಿ...ಬಿಬಿಎಂಪಿಗೆ ಹೈಕೋರ್ಟ್ ಛೀಮಾರಿ

By

Published : Apr 16, 2020, 11:05 PM IST

ಬೆಂಗಳೂರು:ಲಾಕ್‍ಡೌನ್‍ನಿಂದ ನಿರಾಶ್ರಿತರಾಗಿರುವ ವಲಸೆ ಕಾರ್ಮಿಕರ ಕುರಿತು ಸ್ಪಷ್ಟ ಅಂಕಿ-ಅಂಶ ನೀಡುವ ಬದಲು ಲಕ್ಷಾಂತರ ಮಂದಿಗೆ ಆಶ್ರಯ, ಆಹಾರ ಒದಗಿಸಿದ್ದೇವೆ ಎಂದು ಸುಳ್ಳು ಮಾಹಿತಿ ನೀಡಿರುವ ಬಿಬಿಎಂಪಿಗೆ ಛೀಮಾರಿ ಹಾಕಿರುವ ಹೈಕೋರ್ಟ್‌, ಈ ಕುರಿತು ವರದಿ ನೀಡುವಂತೆ ಸರ್ಕಾರಕ್ಕೆ ಆದೇಶಿಸಿದೆ.

ವಲಸೆ ಕಾರ್ಮಿಕರಿಗೆ ಅಗತ್ಯ ಸೌಕರ್ಯ ಕಲ್ಪಿಸಲು ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿತು. ಈ ವೇಳೆ ಬಿಬಿಎಂಪಿ ಪರ ವಕೀಲರು ವರದಿ ಮಂಡಿಸಿ, ನಗರದಲ್ಲಿ ಲಕ್ಷಾಂತರ ಕಾರ್ಮಿಕರು ನಿರಾಶ್ರಿತರಾಗಿದ್ದು ತಾತ್ಕಾಲಿಕ ಶಿಬಿರಗಳನ್ನು ತೆರೆದಿದ್ದೇವೆ. ಈವರೆಗೂ 8 ಲಕ್ಷ ಆಹಾರ ಪದಾರ್ಥಗಳ ಕಿಟ್ ಪೂರೈಸಿದ್ದೇವೆ ಎಂದು ಮಾಹಿತಿ ನೀಡಿದರು. ಇದೇ ವೇಳೆ ಕಾನೂನು ಪ್ರಾಧಿಕಾರದ ಪರ ವಕೀಲರು ಮಾಹಿತಿ ನೀಡಿ, ಬಿಬಿಎಂಪಿ ಹೇಳಿರುವಂತೆ ಸ್ಥಳ ಪರಿಶೀಲನೆ ನಡೆಸಿದಾಗ ಯಶವಂತಪುರದಲ್ಲಿ ಯಾವುದೇ ಶಿಬಿರ ತೆರೆದಿಲ್ಲದಿರುವುದು ಪತ್ತೆಯಾಗಿದೆ. ಅದೇ ರೀತಿ ಗೂಡ್‌ ಶೆಡ್‌ ರಸ್ತೆಯಲ್ಲಿರುವ ಶಿಬಿರವನ್ನು ಬಿಬಿಎಂಪಿ ನಡೆಸುತ್ತಿಲ್ಲ. ಬದಲಿಗೆ ಎನ್‌ಜಿಒವೊಂದು ನಿರ್ವಹಿಸುತ್ತಿದೆ ಎಂದು ವಿವರಿಸಿದರು.

ಈ ಕುರಿತು ದಾಖಲೆಗಳನ್ನು ಪರಿಶೀಲಿಸಿದ ಪೀಠ, ಬಿಬಿಎಂಪಿ ಪರ ವಕೀಲರು ಸುಳ್ಳು ಮಾಹಿತಿ ನೀಡುತ್ತಿರುವುದನ್ನು ಗಮನಿಸಿತು. ಬಳಿಕ ಪಾಲಿಕೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪೀಠ, ನಗರದಲ್ಲಿ ಲಕ್ಷಾಂತರ ನಿರಾಶ್ರಿತರಿಗೆ ಆಶ್ರಯ, ಆಹಾರ ಒದಗಿಸಿದ್ದೇವೆ ಎಂದು ಬಿಬಿಎಂಪಿ ಹೇಳುತ್ತಿದೆ. ಆದರೆ, ನಿಜಕ್ಕೂ ಎಷ್ಟು ಜನ ವಲಸೆ ಕಾರ್ಮಿಕರು, ಕಟ್ಟಡ ನಿರ್ಮಾಣ ಕಾರ್ಮಿಕರು, ದಿನಗೂಲಿ ನೌಕರರು, ನಿರ್ಗತಿಕರಿದ್ದಾರೆ ಎಂಬ ಮಾಹಿತಿಯನ್ನೇ ಈವರೆಗೆ ಕೋರ್ಟ್‍ಗೆ ಒದಗಿಸಿಲ್ಲ. ಕೊಟ್ಟಿರುವ ಮಾಹಿತಿಯೂ ಸಂಪೂರ್ಣವಾಗಿಲ್ಲ. ಹೀಗಿರುವಾಗ ಲಕ್ಷಾಂತರ ಜನಕ್ಕೆ ಆಹಾರ ಪೂರೈಕೆ ಮಾಡಲಾಗಿದೆ ಎಂಬ ಪಾಲಿಕೆಯ ಹೇಳಿಕೆಯನ್ನು ನಂಬಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು.

ಇಂತಹ ತುರ್ತು ಪರಿಸ್ಥಿತಿಯಲ್ಲಿ ಬಿಬಿಎಂಪಿಯ ಈ ಕಾರ್ಯವೈಖರಿಯನ್ನು ಒಪ್ಪಲು ಸಾಧ್ಯವಿಲ್ಲ. ಸುಳ್ಳು ಮಾಹಿತಿ ನೀಡಿ ನ್ಯಾಯಾಲಯವನ್ನೇ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಹೀಗಾಗಿ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಪಾಲಿಕೆ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಯಾವ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಬಗ್ಗೆ ವರದಿ ಸಿದ್ಧಪಡಿಸಿ ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸರ್ಕಾರದ ಪರ ವಕೀಲರಿಗೆ ತಾಕೀತು ಮಾಡಿತು.

ABOUT THE AUTHOR

...view details