ಬೆಂಗಳೂರು:ಮಂಗಳೂರಿನ ಪಚ್ಚನಾಡಿ ಘನತ್ಯಾಜ್ಯ ಭೂಭರ್ತಿ ಘಟಕದಿಂದ ಹೊರಬರುವ ಕಲುಷಿತ ನೀರು ಫಲ್ಗುಣಿ ನದಿ ಹಾಗೂ ಮರವೂರು ಅಣೆಕಟ್ಟು ಸೇರುವುದನ್ನು ತಡೆಯದ ಮಂಗಳೂರು ಮಹಾನಗರ ಪಾಲಿಕೆ ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಪಚ್ಚನಾಡಿ ಘನತ್ಯಾಜ್ಯ ಭೂಭರ್ತಿ ಘಟಕದ ಅನಾಹುತಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಘಟಕದ ತ್ಯಾಜ್ಯ ನೀರು ನದಿ ಸೇರುವುದನ್ನು ತಡೆಯುವಲ್ಲಿ ವಿಫಲವಾಗಿರುವ ಪಾಲಿಕೆ ವಿರುದ್ಧ ಇದೊಂದು ನಿರ್ಲಕ್ಷ್ಯದ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿತು. ಅಲ್ಲದೇ, ಭೂಭರ್ತಿ ಘಟಕದ ಕಲುಷಿತ ನೀರು ಫಲ್ಗುಣಿ ನದಿ ಹಾಗೂ ಮರವೂರು ಡ್ಯಾಂ ಸೇರದಂತೆ ತಡೆಯಲು ಯಾವೆಲ್ಲಾ ಕ್ರಮ ಕೈಗೊಳ್ಳುತ್ತೀರಿ ಎಂಬ ವಿವರಣೆ ನೀಡಿ ಜುಲೈ 26ರೊಳಗೆ ಪ್ರಮಾಣಪತ್ರ ಸಲ್ಲಿಸುವಂತೆ ಪಾಲಿಕೆ ಆಯುಕ್ತರಿಗೆ ತಾಕೀತು ಮಾಡಿತು.
ಜೂನ್ 24ರಂದು ಕಾನೂನು ಸೇವಾ ಪ್ರಾಧಿಕಾರ, ಘಟಕದ ಕಲುಷಿತ ನೀರು ಫಲ್ಗುಣಿ ನದಿ ಹಾಗೂ ಮರವೂರು ಡ್ಯಾಂ ಸೇರುತ್ತಿರುವ ಕುರಿತು ಹೈಕೋರ್ಟ್ಗೆ ವರದಿ ಸಲ್ಲಿಸಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಪೀಠ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್ಪಿಸಿಬಿ) ಕೂಡಲೇ ತನ್ನ ಪರಿಸರ ಅಧಿಕಾರಿಯನ್ನು ಸ್ಥಳಕ್ಕೆ ಕಳುಹಿಸಿ ವಾಸ್ತವ ಸ್ಥಿತಿ ಪರಿಶೀಲಿಸಿ ವರದಿ ಸಲ್ಲಿಸುವಂತೆ ನಿರ್ದೇಶಿಸಿತ್ತು. ಈ ಕುರಿತು ಶುಕ್ರವಾರ ವರದಿ ಸಲ್ಲಿಸಿದ ಕೆಎಸ್ಪಿಸಿಬಿ, ಘಟಕದ ಕಲುಷಿತ ನೀರು ನದಿ ಹಾಗೂ ಡ್ಯಾಂ ಸೇರುತ್ತಿರುವುದು ನಿಜ ಎಂದು ತಿಳಿಸಿತ್ತು. ಹಾಗೆಯೇ, ನೀರಿನ ಮಾದರಿ ಪರೀಕ್ಷೆ ನಡೆಸಿದಾಗ ಅದರಲ್ಲಿ ವಿಷಕಾರಿ ಅಂಶ ಪತ್ತೆಯಾಗಿದ್ದು, ಈ ನೀರನ್ನು ಸುತ್ತಮುತ್ತಲ 13 ಹಳ್ಳಿಗಳ ಜನ ಕುಡಿಯುತ್ತಾರೆ ಎಂದು ತಿಳಿಸಿತು.