ಕರ್ನಾಟಕ

karnataka

ETV Bharat / city

ಕೋವಿಡ್ ಸೋಂಕಿತರಿಂದ ಹೆಚ್ಚುವರಿ ಹಣ ವಸೂಲಿ: 577 ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್‌

ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ ಯೋಜನೆಯಡಿ ಸರ್ಕಾರದಿಂದ ಹಣ ಪಡೆಯುವುದರ ಜೊತೆಗೆ ಕೋವಿಡ್‌ ರೋಗಿಗಳಿಂದಲೂ ಶುಲ್ಕ ವಸೂಲಿ ಮಾಡಿದ ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್‌ ಜಾರಿ ಮಾಡಲಾಗಿದೆ.

Govt  Notice to private hospitals
ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್‌

By

Published : Aug 21, 2022, 2:25 PM IST

ಬೆಂಗಳೂರು:ಕೋವಿಡ್‌ ಸೋಂಕಿತರಿಂದ ಶುಲ್ಕ ಪಡೆಯುವುದರ ಜೊತೆಗೆ ಸರ್ಕಾರದಿಂದಲೂ ಹಣ ಪಡೆದ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ವಹಿಸಿರುವ ಆರೋಗ್ಯ ಇಲಾಖೆ 577 ಆಸ್ಪತ್ರೆಗಳಿಗೆ ನೋಟಿಸ್‌ ಜಾರಿ ಮಾಡಿದೆ. ಹಾಗೆಯೇ 403 ರೋಗಿಗಳ ಕುಟುಂಬಗಳಿಗೆ 1,58,22,359 ರೂ. ಹಣವನ್ನು ಹಿಂದಿರುಗಿಸುವಂತೆ ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ ನೀಡಲಾಗಿದೆ.

ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ ಯೋಜನೆಯಡಿ, ರೆಫರಲ್‌ ಆಧಾರದಲ್ಲಿ ಕೋವಿಡ್‌ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಹಿಂದೆಯೇ ಕ್ರಮ ವಹಿಸಲಾಗಿತ್ತು. ಕೋವಿಡ್‌ ರೋಗಿಗಳ ಕುಟುಂಬಕ್ಕೆ ನೆರವಾಗುವ ಸದುದ್ದೇಶದಿಂದ ಸರ್ಕಾರ ಈ ಪ್ರಯೋಜನವನ್ನು ನೀಡುತ್ತಿದೆ. ರೋಗಿಗಳ ಚಿಕಿತ್ಸಾ ವೆಚ್ಚವನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಿಂದ ಭರಿಸಲಾಗುತ್ತದೆ. ಆದರೆ ಕೆಲ ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ಶುಲ್ಕ ವಸೂಲಿ ಮಾಡುವುದರ ಜೊತೆಗೆ, ಟ್ರಸ್ಟ್‌ನಿಂದಲೂ ಹಣ ಪಡೆದುಕೊಂಡಿವೆ.

ಈ ಕುರಿತು ದೂರುಗಳು ಬಂದಾಗ ತಕ್ಷಣ ಕ್ರಮ ವಹಿಸಿದ ಇಲಾಖೆ ಪರಿಶೀಲನೆ ನಡೆಸಿ ನೋಟಿಸ್‌ ಜಾರಿ ಮಾಡುವಂತೆ ಸೂಚನೆ ನೀಡಿದ್ದರು. ಅದರಂತೆ, ಈವರೆಗೆ 577 ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಒಟ್ಟು 18.87 ಕೋಟಿ ರೂ. ಹಣವನ್ನು ಖಾಸಗಿ ಆಸ್ಪತ್ರೆಗಳು ಹೆಚ್ಚುವರಿಯಾಗಿ ಪಡೆದಿರುವುದು ತಿಳಿದು ಬಂದಿದೆ. ಈ ಪೈಕಿ ಈಗಾಗಲೇ 1.58 ಕೋಟಿ ರೂ. ಹಣವನ್ನು ರೋಗಿಗಳ ಕುಟುಂಬಕ್ಕೆ ಹಿಂದಿರುಗಿಸಲಾಗಿದೆ. ಕೆಲ ಪ್ರಕರಣಗಳಲ್ಲಿ ಹೆಚ್ಚಿನ ಪರಿಶೀಲನೆಗಾಗಿ ದೂರುಗಳನ್ನು ಜಿಲ್ಲಾ ಮಟ್ಟದ ಕುಂದು ಕೊರತೆ ಸಮಿತಿಗೆ ವರ್ಗಾಯಿಸಲಾಗಿದೆ.

ಚಿಕಿತ್ಸಾ ವೆಚ್ಚ ಭರಿಸಿದ್ದೆಷ್ಟು?: ಕೋವಿಡ್‌ ರೋಗಿಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರದಿಂದಲೇ ಭರಿಸಲಾಗಿದೆ. ಮೊದಲನೇ ಅಲೆಯಲ್ಲಿ 2020ರ ಮಾರ್ಚ್‌ನಿಂದ 2021ರ ಮಾರ್ಚ್‌ವರೆಗೆ 391.26 ಕೋಟಿ ರೂ., 2ನೇ ಅಲೆಯಲ್ಲಿ 2021ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ 376.76 ಕೋಟಿ ರೂ. ಹಾಗೂ 3ನೇ ಅಲೆಯ ವೇಳೆ 2022 ರ ಜನವರಿಯಿಂದ ಮಾರ್ಚ್‌ವರೆಗೆ 11.80 ಕೋಟಿ ರೂ. ಪಾವತಿಸಲಾಗಿದೆ.

ಈ ಕುರಿತು ಮಾತನಾಡಿದ ಸಚಿವ ಡಾ.ಕೆ.ಸುಧಾಕರ್‌, ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ ಯೋಜನೆಯಡಿ ಸರ್ಕಾರದಿಂದ ಹಣ ಪಡೆಯುವುದರ ಜೊತೆಗೆ ಕೋವಿಡ್‌ ರೋಗಿಗಳಿಂದಲೂ ಶುಲ್ಕ ವಸೂಲಿ ಮಾಡಿದ ಆಸ್ಪತ್ರೆಗಳಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಈವರೆಗೆ 1.58 ಕೋಟಿ ರೂ.ನಷ್ಟು ಹಣವನ್ನು ರೋಗಿಗಳ ಕುಟುಂಬಕ್ಕೆ ಹಿಂದಿರುಗಿಸಿ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ. ಇದು, ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ನೀಡಿರುವ ಸ್ಪಷ್ಟ ಎಚ್ಚರಿಕೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಕೋವಿಡ್ ಟೆಸ್ಟ್​ಗೆ ಹೆಚ್ಚುವರಿ ಹಣ ವಸೂಲಿ: ವಿಕ್ರಂ ಆಸ್ಪತ್ರೆಯಿಂದ ರೋಗಿಗಳಿಗೆ ರಿಫಂಡ್

ABOUT THE AUTHOR

...view details