ಬೆಂಗಳೂರು:ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಅಭಿಯಾನಕ್ಕೆ ಹೆಚ್ಚುವರಿ 15 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಕಂದಾಯ ಸಚಿವರು ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಅಭಿಯಾನದಲ್ಲಿ ಭಾಗವಹಿಸಲು ಆಯ್ಕೆ ಮಾಡಿಕೊಳ್ಳುವ ತೀರಾ ಹಿಂದುಳಿದಿರುವ ಹಳ್ಳಿ, ಗ್ರಾಮಗಳಲ್ಲಿನ ಮೂಲ ಸೌಕರ್ಯಗಳಾದ ರಸ್ತೆ ಸಾರಿಗೆ, ಕುಡಿಯುವ ನೀರು, ಆರೋಗ್ಯ ಕೇಂದ್ರಗಳು, ಗುಡಿಸಲು ವಾಸಿಗಳಿಗೆ ಮನೆ ನಿರ್ಮಾಣ, ಒಳಚರಂಡಿ ವ್ಯವಸ್ಥೆ, ಶಾಲಾ ಮತ್ತು ಅಂಗನವಾಡಿ ದುರಸ್ತಿ, ಹಾಗೂ ಇನ್ನಿತರ ಮೂಲ ಸೌಕರ್ಯಗಳನ್ನು ಒದಗಿಸುವ ಸಲುವಾಗಿ 2022-23 ನೇ ಸಾಲಿನ ಆಯವ್ಯಯದಲ್ಲಿ 15 ಕೋಟಿ ರೂ. ಹೆಚ್ಚುವರಿ ಅನುದಾನ ಒದಗಿಸಲಾಗಿದೆ.
ಈ ಮೊತ್ತದಿಂದ ತಲಾ ಒಂದು ಕೋಟಿಯನ್ನು ಸಂಬಂಧಿಸಿದ ಜಿಲ್ಲಾಧಿಕಾರಿಗಳು, ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಅಭಿಯಾನದ ಅನುಷ್ಠಾನದ ವೆಚ್ಚಗಳಿಗೆ ಪಾವತಿಸಲು ಅನುಮತಿ ನೀಡಲಾಗಿದೆ. 2021-22 ಸಾಲಿನಲ್ಲಿ, ಕಂದಾಯ ಸಚಿವರು ಈ ಹಿಂದೆ ಭಾಗವಹಿಸಿರುವ ಗ್ರಾಮಗಳಾದ ಯಾದಗಿರಿ ಜಿಲ್ಲೆ ದೇವತ್ಕಲ್ ಗ್ರಾಮ, ಉಡುಪಿ ಜಿಲ್ಲೆಯ ಕೊಕ್ಕರ್ಣೆ ಗ್ರಾಮ, ಉತ್ತರ ಕನ್ನಡ ಜಿಲ್ಲೆಯ ಕುಂಟಕಣಿ ಗ್ರಾಮಕ್ಕೆ ತಲಾ ಒಂದು ಕೋಟಿಯಂತೆ ಒಟ್ಟು 3 ಕೋಟಿ ರೂ. ಬಿಡುಗಡೆ ಮಾಡಲು ಅನಮೋದನೆ ನೀಡಲಾಗಿದೆ.