ಬೆಂಗಳೂರು :ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆಗೆ ಒಮಿಕ್ರಾನ್ ರೂಪಾಂತರಿಯೇ ಕಾರಣವಾಗಬಹುದು ಅಂತಾ ತಜ್ಞರು ಆತಂಕ ಹೊರ ಹಾಕಿದ್ದಾರೆ. ಈ ಹಿಂದೆಯೇ ರೂಪಾಂತರಿಗಳಿಂದಲೇ ಮೂರನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ ಅಂತಾ ಹೇಳಲಾಗುತ್ತಿತ್ತು. ಇದೀಗ ಬೇರೆ ದೇಶಗಳಲ್ಲಿ ಒಮಿಕ್ರಾನ್ ಹರಡುವ ರೀತಿ ನೋಡಿದರೆ ಕರ್ನಾಟಕದಲ್ಲಿ ಇದರ ತೀವ್ರತೆ ಹೆಚ್ಚಾಗುವ ಎಲ್ಲ ಸಾಧ್ಯತೆಗಳು ಇವೆ.
ಯಾಕೆಂದರೆ, ಒಮಿಕ್ರಾನ್ ಸೋಂಕು ಸಮುದಾಯದಲ್ಲಿ ಹರಡಿದೆಯಾ ಎನ್ನುವ ಆತಂಕ ಶುರುವಾಗಿದೆ. ರಾಜ್ಯದಲ್ಲಿ ಈವರೆಗೆ 19 ಜನರಲ್ಲಿ ಒಮಿಕ್ರಾನ್ ಪತ್ತೆಯಾಗಿದೆ. ಆದರೆ, 19 ಕೇಸ್ಗಳಲ್ಲಿ 9 ಮಂದಿಗೆ ವಿದೇಶ ಪ್ರಯಾಣ ಹಿನ್ನೆಲೆಯೇ ಇಲ್ಲ. ಹೀಗಾಗಿ, ಒಮಿಕ್ರಾನ್ ಸಮುದಾಯಕ್ಕೆ ಹರಡಿರುವ ಅನುಮಾನ ಶುರುವಾಗಿದೆ.
ಜೀನೋಮ್ ಸೀಕ್ವೆನ್ಸಿಂಗ್ ಸ್ಯಾಂಪಲ್ ಹೆಚ್ಚಳಕ್ಕೆ ತಜ್ಞರ ಸಲಹೆ
ಒಮಿಕ್ರಾನ್ ಸಮುದಾಯಕ್ಕೆ ಹರಡಿದ್ಯಾ ಇಲ್ವಾ ಎಂಬುದನ್ನ ತಿಳಿಯಲು ಜೀನೋಮ್ ಸೀಕ್ವೆನ್ಸಿಂಗ್ ಸ್ಯಾಂಪಲ್ ಹೆಚ್ಚಳಕ್ಕೆ ತಜ್ಞರು ಸಲಹೆ ನೀಡಿದ್ದಾರೆ. ಸೆಂಟಿನಲ್ ಸೈಟ್ಸ್ಗಳಿಂದ ಅಂದರೆ ಸೋಂಕು ದಿಢೀರ್ ಹೆಚ್ಚಿರುವ ಕೆಲ ಪ್ರದೇಶಗಳು, ಜಿಲ್ಲಾಸ್ಪತ್ರೆಗಳು ಹಾಗೂ ಕ್ಲಸ್ಟರ್ಗಳಲ್ಲಿ ಸೀಕ್ವೆನ್ಸಿಂಗ್ಗ್ಗೆ ಸ್ಯಾಂಪಲ್ ಹೆಚ್ಚಿಸಲು ಸಲಹೆ ಬಂದಿದೆ.
ತಾಂತ್ರಿಕ ಸಲಹಾ ಸಮಿತಿ ತಜ್ಞರಿಂದ ಆರೋಗ್ಯ ಇಲಾಖೆಗೆ ಸಲಹೆ ನೀಡಿದೆ. ಎರಡು ವಾರಕ್ಕೊಮ್ಮೆ ಸೆಂಟಿನಲ್ ಸೈಟ್ಗಳಿಂದ 432 ಸ್ಯಾಂಪಲ್ಗಳನ್ನ ರವಾನಿಸಬೇಕು. ಪ್ರತಿ ಜಿಲ್ಲೆಗಳಿಂದಲೂ ಸ್ಯಾಂಪಲ್ ಸೀಕ್ವೆನ್ಸಿಂಗ್ಗೆ ಕಳಿಸಲು ಸಲಹೆ ಬಂದಿದೆ. ಇದರ ಜೊತೆಗೆ ರಾಜ್ಯದಲ್ಲಿ INSACOGನಿಂದ ಮತ್ತಷ್ಟು ಸೀಕ್ವೆನ್ಸಿಂಗ್ ಲ್ಯಾಬ್ಗಳಿಗೆ ಅನುಮತಿ ನೀಡಿದೆ. ಈ ಮೂಲಕ ಹೆಚ್ಚು ಹೆಚ್ಚು ಜೀನೋಮ್ ಸೀಕ್ವೆನ್ಸಿಂಗ್ ಮಾಡಲು ತಿಳಿಸಲಾಗಿದೆ.
ರಾಜಧಾನಿಯೇ ಒಮಿಕ್ರಾನ್ ತಾಣ
ಇನ್ನು ರಾಜಧಾನಿ ಬೆಂಗಳೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರು ಬರುವುದರಿಂದ ಒಮಿಕ್ರಾನ್ ಹರಡುವ ತಾಣವಾಗಿ ಬದಲಾಗಬಹುದು. ಈ ಹಿನ್ನೆಲೆಯಲ್ಲಿ ನಗರದ ಎಲ್ಲಾ ವಲಯಗಳ ಆರೋಗ್ಯಾಧಿಕಾರಿ, ಜಂಟಿ ಆಯುಕ್ತರಿಗೆ ಪಾಲಿಕೆ ನಿರ್ದೇಶನ ನೀಡಿದೆ. ಈಗಾಗಲೇ ಕೇಂದ್ರ ಸರ್ಕಾರದ ವರದಿ ಬಂದಿದೆ. ಒಮಿಕ್ರಾನ್ ಹೆಚ್ಚಾಗುವ ಮುನ್ಸೂಚನೆ ನೀಡಿದೆ. ಹೀಗಾಗಿ, ಪಾಲಿಕೆ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಸೂಚನೆಗಳು ಈ ಕೆಳಕಂಡಂತಿವೆ..
- ಒಮಿಕ್ರಾನ್ ಬಗ್ಗೆ ನಿರ್ಲಕ್ಷ್ಯಬೇಡ, ಎದುರಿಸಲು ಎಲ್ಲರೂ ಸಿದ್ಧರಾಗಬೇಕು.
- ಒಮಿಕ್ರಾನ್ ತಡೆಗಟ್ಟಲು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಕ್ಕೆ ಸಿದ್ದರಾಗಿ
- ಆಸ್ಪತ್ರೆಗಳಲ್ಲಿ ಬೆಡ್ಗಳ ಸಂಖ್ಯೆಯನ್ನು ಹೆಚ್ಚಳ ಮಾಡಿ
- ಅಗತ್ಯಬಿದ್ರೆ ಖಾಸಗಿ ಅಸ್ಪತ್ರೆಗಳ ಬೆಡ್ಗಳನ್ನು ಕಾಯ್ದಿರಿಸಿ
- ಆಕ್ಸಿಜನ್ ಸಿಲಿಂಡರ್ಗಳನ್ನು ಸ್ಟಾಕ್ ಮಾಡಿ
- ಆಕ್ಸಿಜನ್ ವಿಚಾರದಲ್ಲಿ ಹಿಂದೆ ಆದ ಅನಾಹುತ ಮರುಕಳಿಸಬಾರದು
- ಮುಚ್ಚಿರುವ ಕೊವೀಡ್ ಕೇರ್ ಸೆಂಟರ್ಗಳನ್ನು ಓಪನ್ ಮಾಡಿಸಲು ಕ್ರಮ ಕೈಗೊಳ್ಳಿ
- ಟ್ರಯಾಜ್ ಚಿಕಿತ್ಸಾ ಕೇಂದ್ರಗಳನ್ನು ತೆರೆಯಿರಿ
- ಆಸ್ಪತ್ರೆಗಳು, ಐಸಿಯು ಬೆಡ್ಗಳು, ಆ್ಯಂಬುಲೆನ್ಸ್, ಆಕ್ಸಿಜನ್, ಆರೈಕೆ ಕೇಂದ್ರಗಳ ಬಗ್ಗೆ ಮಾಹಿತಿ ಸಂಗ್ರಹಿಸಿ
- ಕೂಡಲೇ ಐಸಿಯು ಬೆಡ್ಗಳು ಇರುವ ಆಸ್ಪತ್ರೆಗಳ ಪಟ್ಟಿ ಮಾಡಿ
- ಈ ಹಿಂದೆ ಆ್ಯಂಬುಲೆನ್ಸ್ ಕೊರತೆಯಿಂದ ರೋಗಿಗಳು ರಸ್ತೆಯಲ್ಲಿ ನರಳಾಡಿದ್ರು. ಪ್ರತಿ ವಲಯಗಳಲ್ಲಿ 10ಕ್ಕೂ ಹೆಚ್ಚು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿ
- ಸೋಂಕು ಕಂಡುಬಂದ್ರೆ ಕೂಡಲೇ ಸೋಂಕಿತನ ಮನೆ ಸೀಲ್‌ಡೌನ್ ಮಾಡಿ
- ಅಕ್ಕಪಕ್ಕದ ನೂರು ಮೀಟರ್ ಜಾಗವನ್ನು ಸಾರ್ವಜನಿಕರ ಓಡಾಟ ನಿಷೇಧ ಪ್ರದೇಶ ಅಂತಾ ಬೋರ್ಡ್ ಹಾಕಿ
- ಮೂರಕ್ಕಿಂತ ಹೆಚ್ಚು ಒಮಿಕ್ರಾನ್ ಸೋಂಕು ಒಂದೇ ಮನೆ ಅಥವಾ ಅಪಾರ್ಟೆಂಟ್ನಲ್ಲಿ ಕಾಣಿಸಿಕೊಂಡ್ರೆ ಆ ರಸ್ತೆ ಲಾಕ್ಡೌನ್ ಮಾಡಿ
- ವ್ಯಾಕ್ಸಿನ್ ನೀಡೋದು ಹೆಚ್ಚು ಮಾಡಿ
- ಸಿಬ್ಬಂದಿ ಕೊರತೆಯದ್ರೆ ಆಶಾ ಕಾರ್ಯಕರ್ತೆಯರು, ಸ್ಟಾಫ್ ನರ್ಸಗಳನ್ನೂ ಗುತ್ತಿಗೆ ಆಧಾರದ ಮೇಲೆ ನೇಮಿಸಿ
- ಮುಖ್ಯವಾಗಿ ಬೊಮ್ಮನಹಳ್ಳಿ, ಮಹಾದೇವಪುರ ಸೇರಿದಂತೆ ನಗರದ ಹೊರ ವಲಯಗಳಲ್ಲಿ ಹೆಚ್ಚು ನಿಗಾವಹಿಸುವಂತೆ ಸೂಚನೆ ನೀಡಲಾಗಿದೆ
ಇದನ್ನೂ ಓದಿ : ದೇಶದಲ್ಲಿ ಹೊಸದಾಗಿ 5,326 ಸೋಂಕಿತರು: 202ಕ್ಕೆ ಏರಿದ ಒಮಿಕ್ರಾನ್ ಪ್ರಕರಣ ಸಂಖ್ಯೆ