ಬೆಂಗಳೂರು:ವಾಹನ ದಟ್ಟಣೆ ನಿಯಂತ್ರಣ ಸಂಬಂಧ ಇರುವ ಎಲ್ಲಾ ಯೋಜನೆಗಳನ್ನು ತ್ವರಿತವಾಗಿ ಕಾರ್ಯರೂಪಕ್ಕೆ ತರುವಂತೆ ಐಟಿ, ಬಿಟಿ ಉದ್ಯಮಿಗಳು ಸಲಹೆ ನೀಡಿದ್ದಾರೆ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ತಿಳಿಸಿದರು.
ಬೆಂಗಳೂರು ಅಭಿವೃದ್ಧಿ, ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಸಂಬಂಧ ವಿಧಾನಸೌಧದಲ್ಲಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಇವತ್ತಿನ ಸಭೆಯನ್ನು ಸಿಎಂ ತೆಗೆದು ಕೊಳ್ಳಬೇಕಿತ್ತು. ಆದರೆ ನೆರೆಸಂತ್ರಸ್ಥರ ಪ್ರದೇಶಗಳಿಗೆ ಸಿಎಂ ಹೋಗಿರುವ ಕಾರಣ. ಅವರು ಈ ಸಭೆ ನಡೆಸಲು ಆಗಲಿಲ್ಲ. ಹೀಗಾಗಿ ನನ್ನ ಅಧ್ಯಕ್ಷತೆಯಲ್ಲಿ ಈ ಸಭೆ ನಡೆದಿದೆ. ವಿವಿಧ ಇಲಾಖೆಯ ಮುಖ್ಯಸ್ಥರು ಇಂದು ಸಭೆಯಲ್ಲಿ ಪಾಲ್ಗೊಂಡಿದ್ದರು. ಐಟಿ, ಬಿಟಿ ಉದ್ಯಮಿಗಳಾದ ಕಿರಣ್ ಮಜುಂದಾರ್ ಶಾ, ಮೋಹನ್ ದಾಸ್ ಪೈ ಅವರು ಕೆಲವೊಂದಿಷ್ಟು ಸಮಸ್ಯೆಗಳನ್ನು ಹೇಳಿದ್ದಾರೆ. ಅದನ್ನು ಸಿಎಂ ಜೊತೆ ಚರ್ಚಿಸಿ, ಬಗೆಹರಿಸುವ ಕೆಲಸ ಮಾಡುತ್ತೇವೆ. ಟ್ರಾಫಿಕ್, ರಸ್ತೆ ಸಮಸ್ಯೆಗಳು ಪ್ರಮುಖ ಆಗಿವೆ. ಇದು ಹಳೇ ವಿಚಾರ ಆದರೂ, ಸಂಬಂಧಪಟ್ಟ ಯೋಜನೆಗಳು ಕಾರ್ಯರೂಪಕ್ಕೆ ಬಂದಿಲ್ಲ. ಆದಷ್ಟು ಬೇಗ ಕಾರ್ಯರೂಪಕ್ಕೆ ತರಲು ಸಲಹೆ ನೀಡಿದ್ದಾರೆ ಎಂದು ತಿಳಿಸಿದರು.