ಬೆಂಗಳೂರು:15 ವರ್ಷಕ್ಕಿಂತ ಹಳೆಯದಾದ ವಾಹನಗಳ ರಿಜಿಸ್ಟ್ರೇಷನ್ ಮತ್ತು ಫಿಟ್ನೆಸ್ ಸರ್ಟಿಫಿಕೇಟ್ ನವೀಕರಣಕ್ಕೆ ದುಬಾರಿ ಶುಲ್ಕ ಮತ್ತು ದಂಡ ವಿಧಿಸುವ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಸರ್ಕಾರದ ಆದೇಶ ಪ್ರಶ್ನಿಸಿ ಕರ್ನಾಟಕ ಲಾರಿ ಮಾಲೀಕರ ಒಕ್ಕೂಟ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಪೀಠ ಈ ಆದೇಶ ಮಾಡಿದೆ.
ಹಾಗೆಯೇ, ಅರ್ಜಿ ಸಂಬಂಧ ರಾಜ್ಯ ಸರ್ಕಾರ, ಸಾರಿಗೆ ಇಲಾಖೆ ಸೇರಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, 2022ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ 15 ವರ್ಷ ಮೇಲ್ಪಟ್ಟ ಹಳೆಯ ವಾಹನಗಳ ದಂಡದ ಪ್ರಮಾಣದಲ್ಲಿ ಭಾರಿ ಏರಿಕೆ ಮಾಡಲಾಗಿದೆ.
ನೋಂದಣಿ ಮತ್ತು ಫಿಟ್ನೆಸ್ ಪ್ರಮಾಣಪತ್ರಗಳ ನವೀಕರಣಕ್ಕೆ 10 ಸಾವಿರ ರೂಪಾಯಿ ಶುಲ್ಕ ವಿಧಿಸಲಾಗುತ್ತಿದೆ. ಒಂದು ವೇಳೆ ಫಿಟ್ನೆಸ್ ಸರ್ಟಿಫಿಕೇಟ್ ನವೀಕರಣದ ಅವಧಿ ಮುಗಿದಿದ್ದರೆ ಸಾರಿಗೇತರ ವಾಹನಗಳಿಗೆ ತಿಂಗಳಿಗೆ ಹೆಚ್ಚುವರಿಯಾಗಿ 500 ರೂ ದಂಡ ವಿಧಿಸಲಾಗುತ್ತಿದೆ. ಇದು ದುಬಾರಿ ಶುಲ್ಕ ಮತ್ತು ದಂಡವಾಗಿದ್ದು, ವಾಹನಗಳ ಮಾಲೀಕರಿಗೆ ಹೊರೆಯಾಗಿದೆ ಎಂದು ವಿವರಿಸಿದರು.