ಕರ್ನಾಟಕ

karnataka

ETV Bharat / city

ಸನ್ನಡತೆ ಆಧಾರದ ಮೇಲೆ 57 ಜೈಲು ಹಕ್ಕಿಗಳ ಬಿಡುಗಡೆಗೆ ರಾಜ್ಯಪಾಲರಿಂದ ರೆಡ್​​ ಸಿಗ್ನಲ್​​! - ಸೆರೆಮನೆ ಶಿಕ್ಷೆ

ಸನ್ನಡತೆ ತೋರಿದ ಅರ್ಹ ಶಿಕ್ಷಾ ಬಂಧಿಗಳ ಅವಧಿ ಪೂರ್ವ ಬಿಡುಗಡೆ ಕೋರಿ ರಾಜ್ಯ ಸರ್ಕಾರವು ಕಳುಹಿಸಿದ್ದ ಪ್ರಸ್ತಾವನೆಯಲ್ಲಿನ 57 ಕೈದಿಗಳ ಬಿಡುಗಡೆಗೆ ರಾಜ್ಯಪಾಲ ವಾಜುಭಾಯ್​ ವಾಲಾ ತಡೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

excuslive-story

By

Published : Oct 3, 2019, 9:57 PM IST

ಬೆಂಗಳೂರು: ಸನ್ನಡತೆ ತೋರಿದ ಅರ್ಹ ಶಿಕ್ಷಾ ಬಂಧಿಗಳ ಅವಧಿ ಪೂರ್ವ ಬಿಡುಗಡೆ ಕೋರಿ ರಾಜ್ಯ ಸರ್ಕಾರವು ಕಳುಹಿಸಿದ್ದ ಪ್ರಸ್ತಾವನೆಯಲ್ಲಿನ 57 ಕೈದಿಗಳ ಬಿಡುಗಡೆಗೆ ರಾಜ್ಯಪಾಲ ವಾಜುಭಾಯ್​ ವಾಲಾ ತಡೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ರಾಜ್ಯದ ಏಳು ಕೇಂದ್ರ ಕಾರಾಗೃಹಗಳಿಂದ ಪಟ್ಟಿ ಮಾಡಿ ರಾಜ್ಯಪಾಲರಿಗೆ ಸರ್ಕಾರ ಕಳುಹಿಸಿದ್ದ 199 ಕೈದಿಗಳ ಹಿನ್ನೆಲೆ, ಅಪರಾಧ ಪ್ರಮಾಣ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಸನ್ನಡತೆ ತೋರಿದ 142 ಶಿಕ್ಷಾ ಬಂಧಿಗಳಿಗೆ ಮಾತ್ರ ಬಿಡುಗಡೆಗೆ ಹಸಿರು ನಿಶಾನೆ ತೋರಿದರೆ, ಉಳಿದ 57 ಕೈದಿಗಳನ್ನು ಬಿಡುಗಡೆ ಮಾಡದಂತೆ ರೆಡ್​ ಸಿಗ್ನಲ್​ ನೀಡಿದ್ದಾರೆ ಎಂದು ತಿಳಿದು ಬಂದಿದೆ.

14 ವರ್ಷಕ್ಕಿಂತ ಹೆಚ್ಚು ವರ್ಷಗಳ ಕಾಲ ಸೆರೆಮನೆ ಶಿಕ್ಷೆ ಅನುಭವಿಸಿರುವ ಹಾಗೂ ಸನ್ನಡತೆ ತೋರಿರುವ ಶಿಕ್ಷಾ ಬಂಧಿಗಳ ಬಿಡುಗಡೆಗೆ ರಾಜ್ಯಪಾಲರು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಇನ್ನೂ ಕೆಲವೇ ದಿನಗಳಲ್ಲಿ ಬಂಧಿಗಳನ್ನು ಬಿಡುಗಡೆ ಮಾಡುವುದಾಗಿ ರಾಜ್ಯ ಬಂಧೀಖಾನೆ ಇಲಾಖೆ ಹಿರಿಯ ಅಧಿಕಾರಿಯೊಬ್ಬರು 'ಈಟಿವಿ ಭಾರತ್​'ಗೆ ತಿಳಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜೋತ್ಸವ ವೇಳೆ ಅವಧಿಪೂರ್ವ ಹಾಗೂ ಸನ್ನಡತೆ ತೋರಿದ ಕೈದಿಗಳ ಬಿಡುಗಡೆಗೆ ಕಾರಾಗೃಹ ಇಲಾಖೆಯು ಕ್ರಮ ಕೈಗೊಳ್ಳುತ್ತದೆ. ಅರ್ಹ ಸಜಾಬಂಧಿಗಳ ಬಿಡುಗಡೆ ಪಟ್ಟಿ ತಯಾರಿಸಲು ಒಂದೆರಡು ತಿಂಗಳ ಹಿಂದೆಯೇ ರಾಜ್ಯದ ಎಲ್ಲಾ ಜೈಲುಗಳಲ್ಲಿ ಉತ್ತಮ ನಡತೆ ತೋರಿರುವ ಕೈದಿಗಳ ಮಾಹಿತಿ ತರಿಸಿಕೊಂಡು ಸಮಗ್ರ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಶಿಫಾರಸು ಮಾಡಲಾಗುತ್ತೆ. ಇದರಂತೆ ಇಲಾಖೆಯಿಂದ ಈ ಬಾರಿಯೂ 199 ಮಂದಿಯ ಪಟ್ಟಿ ಗೃಹ ಇಲಾಖೆಗೆ ಕಾರಾಗೃಹ ಇಲಾಖೆ ಪ್ರಸ್ತಾವನೆ ಸಲ್ಲಿಸಿತ್ತು. ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಮಂಡಿಸಿ ಅನುಮತಿ ಪಡೆದು ರಾಜಭವನಕ್ಕೆ ಕಳುಹಿಸಲಾಗಿತ್ತು.

ಕೊಲೆ, ಕೊಲೆ ಯತ್ನ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಹಾಗೂ ಮನಪರಿವರ್ತನೆಗೊಂಡಿರುವ ಕೈದಿಗಳು ಅವಧಿ ಪೂರ್ವದಲ್ಲೇ ಬಿಡುಗಡೆಯಾಗುತ್ತಿದ್ದಾರೆ. ಆದರೆ ದರೋಡೆ ಹಾಗೂ ಅತ್ಯಾಚಾರ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳು ಮಾತ್ರ ಬಿಡುಗಡೆ ಭಾಗ್ಯದಿಂದ ವಂಚಿತರಾಗಿದ್ದಾರೆ. 14 ವರ್ಷಕ್ಕಿಂತ ಹೆಚ್ಚು ವರ್ಷಗಳ ಕಾಲ ಶಿಕ್ಷೆ ಅನುಭವಿಸುವುದ್ದಲ್ಲದೆ ಸನ್ನಡತೆ ತೋರಿದ ಕೈದಿಗಳ ಬಿಡುಗಡೆಗೆ ಜೈಲಿನ ನಿಯಮಗಳೇ ಅಡ್ಡಿಯಾಗಿದ್ದು, ಕೂಡಲೇ ನಿಯಮ ಸರಳೀಕರಣಗೊಳಿಸಬೇಕೆಂದು ದರೋಡೆ ಪ್ರಕರಣವೊಂದರಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕೈದಿಯ ಸಂಬಂಧಿಕರೊಬ್ಬರು ಆಗ್ರಹಿಸಿದ್ದಾರೆ.

ಮಹಾತ್ಮ ಗಾಂಧೀಜಿಯ 150ನೇ ಜಯಂತಿ ಪ್ರಯುಕ್ತ ಗರಿಷ್ಠ ಶಿಕ್ಷೆ ಅನುಭವಿಸಿರುವ ಹಾಗೂ 55 ವರ್ಷಗಳಿಗಿಂತ ಮೇಲ್ಪಟ್ಟ 20 ಕೈದಿಗಳ ಬಿಡುಗಡೆಗೂ ಸರ್ಕಾರ ಅನುಮೋದಿಸಿದೆ. ಒಂದೇ ಬಾರಿ ಎಲ್ಲರನ್ನು ಬಿಡುಗಡೆ ಮಾಡಲು ಇಲಾಖೆಯು ಮುಂದಾಗಿದೆ.

ಯಾವ ಜೈಲಿನಿಂದ ಎಷ್ಟೆಷ್ಟು ಕೈದಿಗಳ ಬಿಡುಗಡೆ?

ಎಲ್ಲಿ? ಕೈದಿಗಳ ಸಂಖ್ಯೆ
ಬೆಂಗಳೂರು ಸೆಂಟ್ರಲ್ ಜೈಲು 71
ಮೈಸೂರು ಸೆರೆಮನೆ 24
ಬೆಳಗಾವಿ ಜೈಲು 06
ಕಲಬುರಗಿ ಜೈಲು 13
ವಿಜಯಪುರ ಜೈಲು 06
ಬಳ್ಳಾರಿ ಜೈಲು 11
ಧಾರವಾಡ ಜೈಲು 11

ABOUT THE AUTHOR

...view details