ಬೆಂಗಳೂರು:ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಮುಖಂಡರು ತೆರೆಮರೆಯಲ್ಲಿ ಹಣ, ಮದ್ಯ ಹಾಗೂ ದುಬಾರಿ ಬೆಲೆಯ ಗಿಫ್ಟ್ಗಳನ್ನು ನೀಡುವ ಆಮಿಷಗಳಿಗೆ ಕೊನೆಯಿಲ್ಲದಂತಾಗಿದೆ. ಇದಕ್ಕೆಲ್ಲಾ ರಾಜ್ಯ ಅಬಕಾರಿ ಇಲಾಖೆ ಬ್ರೇಕ್ ಹಾಕಲು ಮುಂದಾಗಿದೆ.
ರಾಜ್ಯ ಅಬಕಾರಿ ಇಲಾಖೆಯು ರಾಜ್ಯದಲ್ಲೆಡೆ ತಪಾಸಣೆ ನಡೆಸಿ, ಇದುವರೆಗೂ 45.57 ಕೋಟಿ ರೂ. ಮದ್ಯ ಹಾಗೂ ವಿವಿಧ ವಾಹನಗಳನ್ನು ಜಪ್ತಿ ಮಾಡಿಕೊಂಡಿದೆ. ಮತದಾರರನ್ನು ವೀಕ್ನೆಸ್ ಅರಿತುಕೊಂಡಿರುವ ರಾಜಕೀಯ ಮುಖಂಡರು, ಕಾರ್ಯಕರ್ತರ ಮೂಲಕ ಮತದಾರರಿಗೆ ಮದ್ಯ ಸಾಗಿಸುವ ಕೆಲಸದಲ್ಲಿ ನಿರತರಾಗಿದ್ದು, ಆಂಧ್ರಪ್ರದೇಶ, ತಮಿಳುನಾಡು, ಗೋವಾ ಸೇರಿದಂತೆ ವಿವಿಧ ರಾಜ್ಯಗಳಿಂದ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಸುಮಾರು 29,65 ಕೋಟಿ ಮೌಲ್ಯದ 5.17 ಲಕ್ಷ ರೂ. ಲೀಟರ್ ಮದ್ಯ, 4.05 ಕೋಟಿ ರೂ. ಬೆಲೆಯ 2.12 ಲಕ್ಷ ಲೀಟರ್ ಬಿಯರ್, 11 ಕೋಟಿ ರೂ. ಮೌಲ್ಯದ 1141 ಮದ್ಯ ಸಾಗಾಣೆಯ ವಿವಿಧ ವಾಹನಗಳನ್ನ ಜಪ್ತಿ ಮಾಡಿಕೊಂಡಿದ್ದಾರೆ.
ಮದ್ಯ ಖರೀದಿಸುವವರ ಮೇಲೆ ಅಬಕಾರಿ ಇಲಾಖೆ ಹದ್ದಿನ ಕಣ್ಣು ಇದುವರೆಗೂ 14,420 ಪ್ರಕರಣಗಳನ್ನು ದಾಖಲಿಸಲಾಗಿದ್ದು, ರಾಜ್ಯದ ಆಯಾ ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ ದಾಖಲಿಸಿ ಪರವಾನಗಿ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ಎಸ್.ಎಲ್.ರಾಜೇಂದ್ರ ಪ್ರಸಾದ್ ಈಟಿವಿ ಭಾರತ್ಗೆ ತಿಳಿಸಿದ್ದಾರೆ.
ಶೇ.10ರಷ್ಟು ಮದ್ಯ ಖರೀದಿಯಾದರೂ ಕ್ರಮ ಗ್ಯಾರಂಟಿ
ಹೊರರಾಜ್ಯಗಳಲ್ಲಿ ಬರುವ ಅಕ್ರಮ ಮದ್ಯ ಸಾಗಾಟ ವಾಹನಗಳನ್ನು ಪತ್ತೆ ಹಚ್ಚಲು, ಈಗಾಗಲೇ ಆಯಾ ವಿಭಾಗೀಯ ಮಟ್ಟ ಹಾಗೂ ಸೂಕ್ತ ಪ್ರದೇಶಗಳಲ್ಲಿ ಚೆಕ್ ಪೋಸ್ಟ್ಗಳನ್ನು ನಿರ್ಮಿಸಲಾಗಿದೆ. ಹೀಗಿದ್ದರೂ ಕೆಲವೊಮ್ಮೆ ಮದ್ಯ ಸರಬರಾಜು ಮಾಡಲು ಸಿದ್ಧತೆ ನಡೆಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ರಾಜ್ಯದಲ್ಲಿ 3400 ಬಾರ್ ಅಂಡ್ ರೆಸ್ಟೋರೆಂಟ್ಸ್ ಹಾಗೂ 3900 ವೈನ್ ಶಾಪ್ ಮಾಲೀಕರಿಗೆ ಅಕ್ರಮ ಮದ್ಯ ಸಾಗಾಟದಲ್ಲಿ ತೊಡಗಿಸಿಕೊಳ್ಳಬಾರದೆಂದು ಕಟ್ಟುನಿಟ್ಟಾಗಿ ಸೂಚನೆ ಹೊರಡಿಸಲಾಗಿದೆ. ಹೊರರಾಜ್ಯಗಳಿಂದ ನ್ಯಾಯಯುತವಾಗಿ ಮದ್ಯ ಸರಬರಾಜು ಮಾಡಿಕೊಳ್ಳುವಾಗ ಎಚ್ಚರ ವಹಿಸಬೇಕಿದೆ. ಪರ್ಮಿಟ್ ಪ್ರಕಾರ ಮದ್ಯ ಸಾಗಿಸಬೇಕು. ನಿಗದಿಗಿಂತ ಹಾಗೂ ಸಾಮರ್ಥ್ಯಕ್ಕಿಂತ ಹಾಗೂ ವಾಯಿದೆ ಮೀರಿ ಲಿಕ್ಕರ್ ಸಾಗಿಸಿದವರ ಮೇಲೆ ಈಗಾಗಲೇ ಪ್ರಕರಣ ದಾಖಲಾಗುತ್ತಿದೆ ಎಂದು ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.
ಸ್ಥಳೀಯ ಮಟ್ಟದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಬಾರ್ ಮಾಲೀಕರ ನಡುವೆ ಒಳ ಒಪ್ಪಂದ ಮಾಡಿಕೊಂಡು ಮತದಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಕುಡಿಸುವವವರ ಮೇಲೆ ಇಲಾಖೆ ಕಣ್ಗಾಗಲು ಇರಿಸಿದೆ. ಸರಾಸರಿ ದಿನಕ್ಕೆ ಶೇ.10ರಷ್ಟು ಮದ್ಯ ಖರೀದಿಸಿದವರ ಮೇಲೆ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ.