ಬೆಳಗಾವಿ:ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ 'ಡಬಲ್ ದೋಖಾ' ಸರ್ಕಾರ ನಡೆಸುತ್ತಿವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು. ವಿಧಾನಸಭೆಯಲ್ಲಿ ನಿಯಮ 69ರಡಿ ಚರ್ಚೆ ವೇಳೆ ಮಾತನಾಡಿದ ಅವರು, ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರಬೇಕು, ಆಗ ಡಬ್ಬಲ್ ಇಂಜಿನ್ ಸರ್ಕಾರ ವೇಗವಾಗಿ ಕೆಲಸ ಮಾಡುತ್ತೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದರು. ಆದರೆ, ಎರಡೂ ಬಿಜೆಪಿ ಸರ್ಕಾರಗಳು ಸೇರಿ ಡಬಲ್ ದೋಖಾ ಸರ್ಕಾರ ನಡೆಸುತ್ತಿವೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕೇವಲ 2 ವರ್ಷಗಳಲ್ಲಿ ರಾಜ್ಯದ ತೆರಿಗೆ ಪಾಲಿನಲ್ಲಿ 18,000 ಕೋಟಿ ರೂ. ಖೋತಾ ಆಗಿದೆ. ಬಿಜೆಪಿಯ ಯಾವೊಬ್ಬ ನಾಯಕರು ಈ ಅನ್ಯಾಯದ ವಿರುದ್ಧ ಮಾತನಾಡುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮಳೆಗೆ ಬಿದ್ದ ಮನೆಗಳಿಗೆ ಪರಿಹಾರ ಸಿಕ್ಕಿಲ್ಲ
2019 ರಲ್ಲಿ ಪ್ರವಾಹದಿಂದಾಗಿ ಸುಮಾರು 2 ಲಕ್ಷ 47 ಸಾವಿರ ಮನೆಗಳು ಬಿದ್ದು ಹೋಗಿವೆ ಎಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ಪರಿಹಾರಕ್ಕಾಗಿ ಮನವಿ ನೀಡಿತ್ತು. ಅದರಲ್ಲಿ 1 ಲಕ್ಷದ 33 ಸಾವಿರ ಮನೆಗಳಿಗೆ ಈ ವರೆಗೆ ಪರಿಹಾರ ನೀಡಲಾಗಿದೆ. ಇನ್ನುಳಿದ 1 ಲಕ್ಷದ 14 ಸಾವಿರ ಮನೆಗಳಿಗೆ ಪರಿಹಾರ ತಲುಪಿಲ್ಲ ಎಂದರು.
ಕಳೆದ ಕೆಲವು ದಿನಗಳ ಹಿಂದೆ ಪರಿಷತ್ ಚುನಾವಣೆ ಸಂಬಂಧ ನಾನು ಗೋಕಾಕ್, ರಾಯಭಾಗ, ರಾಮದುರ್ಗಕ್ಕೆ ಭೇಟಿನೀಡಿದಾಗ ನೂರಾರು ಮಹಿಳೆಯರು ಮನವಿ ಪತ್ರದ ಜೊತೆಗೆ ಬಂದು, 2019ರ ಪ್ರವಾಹದಲ್ಲಿ ನಾವು ಮನೆ ಕಳೆದುಕೊಂಡಿದ್ದೇವೆ, ನಮಗಿನ್ನೂ ಪರಿಹಾರ ಸಿಕ್ಕಿಲ್ಲ ಅಂತ ಕಣ್ಣೀರು ಹಾಕಿದರು.
ಹೊಲ, ಗದ್ದೆಗಳಲ್ಲಿ ಬೆಳೆದು ನಿಂತ ಬೆಳೆಗಳು ಹಾನಿಯಾದಾಗ ಮಾತ್ರ ಪರಿಹಾರ ನೀಡಲಾಗುತ್ತೆ. ಒಂದು ವೇಳೆ ಬೆಳೆ ಕಟಾವು ಆಗಿ, ಕಣ ಸೇರಿದ ಮೇಲೆ ಮಳೆಯಿಂದ ಹಾನಿಯಾದರೆ ಅದಕ್ಕೆ ಪರಿಹಾರ ಸಿಗಲ್ಲ ಎಂದರೆ ಏನು ಅರ್ಥ ಎಂದು ಪ್ರಶ್ನಿಸಿದರು.
ಹಳೆಯ ನಿಯಮಗಳಡಿ ಪರಿಹಾರ ನೀಡಿ
ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ನಿಯಮಗಳು 2015 ರಲ್ಲಿ ಪರಿಷ್ಕರಣೆಗೊಂಡಿದ್ದು, ನಿಯಮಗಳಲ್ಲಿ ಕೆಲವು ಲೋಪದೋಷಗಳಿವೆ. ಇನ್ನಾದರೂ ಹಳೆಯ ನಿಯಮಗಳಿಗೆ ಬದಲಾವಣೆ ತಂದು ನಷ್ಟದಲ್ಲಿರುವ ಎಲ್ಲ ರೈತರಿಗೆ ಪರಿಹಾರ ನೀಡುವಂತೆ ಪರಿಷ್ಕರಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇನೆ. ಎಂದರು.
ಪ್ರಸಕ್ತ ವರ್ಷ 39,000 ಮನೆಗಳು ಮಳೆಯಿಂದಾಗಿ ಹಾನಿಗೀಡಾಗಿದೆ. ಈವರೆಗೆ ಒಂದೇ ಒಂದು ಮನೆಗೆ ಪರಿಹಾರದ ಹಣ ನೀಡಿಲ್ಲ. 12 ಲಕ್ಷ ಎಕರೆ ಪ್ರದೇಶಕ್ಕೆ 782 ಕೋಟಿ ರೂ. ಬೆಳೆ ಪರಿಹಾರದ ಹಣ ಮಾತ್ರ ನೀಡಲಾಗಿದೆ. ಜೊತೆಗೆ ಬೆಳೆ ನಷ್ಟ ನಮೂದು ಮಾಡುವುದನ್ನು ಈ ತಿಂಗಳ 8ನೇ ತಾರೀಖಿಗೆ ಕೊನೆಗೊಳಿಸಲಾಗಿದೆ. ಹಲವು ರೈತರ ಬೆಳೆನಷ್ಟದ ಮಾಹಿತಿ ಇನ್ನೂ ನಮೂದಾಗದೇ ಬಾಕಿ ಉಳಿದಿರುವುದರಿಂದ ಸಮೀಕ್ಷೆ ಮುಂದುವರೆಸಿ, ಬೆಳೆ ನಷ್ಟ ನಮೂದು ಮಾಡುವಂತೆ ಸರ್ಕಾರ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಆದೇಶ ನೀಡಬೇಕು ಎಂದು ಆಗ್ರಹಿಸಿದರು.
2019 ರಲ್ಲಿ ರಾಜ್ಯ ಸರ್ಕಾರ ನೀಡಿದ್ದು 1652 ಕೋಟಿ ರೂ.
ರಾಜ್ಯ ವಿಪತ್ತು ಪರಿಹಾರ ನಿಧಿ ನಿಯಮಗಳ ಅನ್ವಯ ನೀಡಬೇಕಾದುದ್ದು 3,891 ಕೋಟಿ ರೂ., 2020 ರಲ್ಲಿ 1,318 ಕೋಟಿ ರೂ. ಪರಿಹಾರ ನೀಡಲಾಗಿದೆ. ಕಳೆದ 2 ವರ್ಷದಲ್ಲಿ 2,971 ಕೋಟಿ ರೂ. ಪರಿಹಾರ ನೀಡಲಾಗಿದೆ. ಇನ್ನುಳಿದ ಪರಿಹಾರದ ಹಣ ಸಂತ್ರಸ್ತ ಬಡಜನರನ್ನು ತಲುಪುವುದು ಯಾವಾಗ? ಎಂದು ಪ್ರಶ್ನಿಸಿದರು.
ನಾನು ಹೇಳಿದ್ದು ಸುಳ್ಳಾದರೆ, ಪ್ರತಿಪಕ್ಷ ಸ್ಥಾನಕ್ಕೆ ರಾಜೀನಾಮೆ
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ವಸತಿ ಸಚಿವರಾಗಿದ್ದ ಎಂ.ಟಿ.ಬಿ ನಾಗರಾಜ್ ಅವರು ಬಾದಾಮಿ ಕ್ಷೇತ್ರಕ್ಕೆ 7,500 ಮನೆಗಳನ್ನು ಮಂಜೂರು ಮಾಡಿದ್ದರು, ನಂತರ ಬಿಜೆಪಿ ಸರ್ಕಾರ ಬಂದ ಮೇಲೆ ಆ ಮನೆಗಳ ಮಂಜೂರಾತಿ ಆದೇಶವನ್ನು ರದ್ದು ಮಾಡಿದೆ ಎಂದು ಆರೋಪಿಸಿದರು.
ನಮ್ಮ ಸರ್ಕಾರ 5 ವರ್ಷಗಳ ಅವಧಿಯಲ್ಲಿ 15 ಲಕ್ಷ ಮನೆಗಳನ್ನು ನಿರ್ಮಾಣ ಮಾಡಿತ್ತು. ನನ್ನ ಕೊನೆಯ ಬಜೆಟ್ನಲ್ಲಿ ನಾವು ಮತ್ತೆ ಅಧಿಕಾರಕ್ಕೆ ಬಂದರೆ ಮುಂದಿನ 5 ವರ್ಷಗಳಲ್ಲಿ 20 ಲಕ್ಷ ಮನೆಗಳನ್ನು ನಿರ್ಮಾಣ ಮಾಡುವುದಾಗಿ ಘೋಷಿಸಿದ್ದೆ. ಆದರೆ, ಬಿಜೆಪಿ ಸರ್ಕಾರ ಬಂದ ಎರಡೂವರೆ ವರ್ಷಗಳಲ್ಲಿ ಒಂದೇ ಒಂದು ಮನೆಯಾಗಲೀ, ನಿವೇಶನವನ್ನಾಗಲೀ ಮಂಜೂರು ಮಾಡಿಲ್ಲ. ನಾನು ಹೇಳಿದ್ದು ಸುಳ್ಳಾದರೆ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸವಾಲು ಹಾಕಿದರು.
ಇದನ್ನೂ ಓದಿ: ಪರಿಷತ್ನಲ್ಲಿ ಸರಳ ಬಹುಮತ ಪಡೆಯುವಲ್ಲಿ ಎಡವಿದ ಕೇಸರಿ ಪಡೆ: ಆದ್ರೂ ಇನ್ಮುಂದೆ ಬಿಜೆಪಿಗಿಲ್ಲ ಬಿಲ್ ಪಾಸ್ ಕಿರಿಕಿರಿ..!