ಬೆಂಗಳೂರು :ಭಾರತದಲ್ಲಿ ಪ್ರತಿ ಐವರು ಆರೋಗ್ಯವಂತ ಮಹಿಳೆಯರಲ್ಲಿ ಒಬ್ಬರು ತಮ್ಮ ಸ್ತನಗಳ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದು ಸಾಮಾನ್ಯವಾಗಿ ನಿರುಪದ್ರವ ಎನಿಸಿದರೂ ಮಾರಣಾಂತಿಕ ಕ್ಯಾನ್ಸರ್ಗಳಾಗಿ ಬೆಳೆಯಬಹುದು. ಭಾರತದಲ್ಲಿ ಪ್ರತಿ 13 ನಿಮಿಷಕ್ಕೆ ಒಬ್ಬರು ಸ್ತನ ಕ್ಯಾನ್ಸರ್ನಿಂದ ಸಾವವನ್ನಪ್ಪುತ್ತಿದ್ದಾರೆ.
ಫ್ಯೂಜಿಫಿಲ್ಮ್ ಹೆಲ್ತ್‌ಕೇರ್ ಮತ್ತು ಬೆಂಗಳೂರಿನಲ್ಲಿ ಎಐ ಆಧಾರಿತ ಇಮೇಜಿಂಗ್ ಮತ್ತು ಪರಿಣಿತ ಆರೋಗ್ಯ ಆರೈಕೆ ಸಂಸ್ಥೆಯಾಗಿರುವ ಡಾ.ಕುಟ್ಟೀಸ್ ಹೆಲ್ತ್‌ಕೇರ್ ಸಹಭಾಗಿತ್ವದ ಎನ್ಯುಆರ್ಎ ಕಳೆದ ಕೆಲವು ತಿಂಗಳಲ್ಲಿ ಸುಮಾರು 200 ಆರೋಗ್ಯವಂತ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ತಪಾಸಣೆ ನಡೆಸಿದ ಸಂದರ್ಭದಲ್ಲಿ ಈ ಅಂಕಿ-ಅಂಶಗಳು ದೊರೆತಿವೆ.
ಭಾರತದಲ್ಲಿ ಪ್ರತಿ 13 ನಿಮಿಷಕ್ಕೆ ಒಬ್ಬರು ಸ್ತನ ಕ್ಯಾನ್ಸರ್ನಿಂದ ಸಾವು ಈ ಸಂಬಂಧ ವೆಬಿನಾರ್ ಮೂಲಕ ಮಾತನಾಡಿದ ಎನ್ಯುಆರ್ಎ ನಿರ್ದೇಶಕ ಡಾ.ತೌಸಿಫ್ ಅಹ್ಮದ್ ತಂಗಲ್ವಾಡಿ, ಜಾಗತಿಕ ಮಟ್ಟದಲ್ಲಿ ಪ್ರತಿ ಹತ್ತು ಮಹಿಳೆಯರಲ್ಲಿ ಒಬ್ಬರಿಗೆ ಸ್ತನ ಸಮಸ್ಯೆಗಳಿದ್ದರೆ, ಭಾರತದಲ್ಲಿ ಇದರ ಪ್ರಮಾಣ ದ್ವಿಗುಣವಾಗಿದೆ.
ಈ ಹಿನ್ನೆಲೆಯಲ್ಲಿ ಸಕಾಲದಲ್ಲಿ ಅತ್ಯಾಧುನಿಕ ತಪಾಸಣಾ ಯಂತ್ರಗಳ ಸಹಾಯದಿಂದ ಪತ್ತೆ ಮಾಡಿ ಸೂಕ್ತ ಚೆಕ್‍ಅಪ್‍ಗಳು ಮತ್ತು ನಂತರದ ಚಿಕಿತ್ಸೆಗಳನ್ನು ಪಡೆದುಕೊಳ್ಳುವ ಮೂಲಕ ನಿಜವಾದ ಅಪಾಯಗಳ ಮಟ್ಟವನ್ನು ನಿರ್ಧರಿಸಬಹುದು ಎಂದರು.
ಆದಾಗ್ಯೂ, ಮಾನಸಿಕ-ಸಾಮಾಜಿಕ ಅಡೆತಡೆಗಳು, ಮುಜುಗರ, ಸ್ತನ ಕ್ಯಾನ್ಸರ್ ವಿಚಾರದ ಬಗ್ಗೆ ಚರ್ಚಿಸಲು, ಮ್ಯಾಮೋಗ್ರಾಂಗೆ ಒಳಗಾಗುವ ವೇಳೆ ಆಗುವ ನೋವಿನ ಆತಂಕ ಮತ್ತು ವ್ಯತಿರಿಕ್ತ ಪರಿಣಾಮ ಉಂಟಾಗಬಹುದು ಎಂಬ ಕಾರಣದಿಂದ ಹಲವರು ತಮ್ಮ ಸ್ತನಗಳ ತಪಾಸಣೆ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ. ಇದೇ ವೇಳೆ, ಬಹುತೇಕ ಜನರು ಕೇವಲ ವೃದ್ಧಾಪ್ಯದಲ್ಲಿರುವ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ತಪಾಸಣೆ ಅಗತ್ಯವಿದೆ ಎಂದು ಭಾವಿಸುತ್ತಾರೆ ಎಂದರು.
ಭಾರತೀಯ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ :ಭಾರತೀಯ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಅತ್ಯಂತ ಸಾಮಾನ್ಯವಾದ ಕ್ಯಾನ್ಸರ್ ಎನಿಸಿದೆ. ಇಲ್ಲಿ ಪ್ರತಿ 1,00,000 ಮಹಿಳೆಯರಲ್ಲಿ 25.8 ಜನರಲ್ಲಿ ಪ್ರಕರಣ ಕಂಡು ಬಂದರೆ, 12.7 ಜನರಲ್ಲಿ ಮರಣವನ್ನುಪ್ಪುತ್ತಿದ್ದಾರೆ. ದೆಹಲಿಯಲ್ಲಿ ಪ್ರತಿ 1,00,000 ಮಹಿಳೆಯರ ಪೈಕಿ 41 ಜನರಿಗೆ, ಚೆನ್ನೈನಲ್ಲಿ 37.9 ಜನರಲ್ಲಿ ಹಾಗೂ ಬೆಂಗಳೂರಿನಲ್ಲಿ 34.4 ಜನರಲ್ಲಿ ಸ್ತನ ಕ್ಯಾನ್ಸರ್ ಕಂಡು ಬರುತ್ತಿದೆ.
ಕಳೆದ 30 ವರ್ಷಗಳಲ್ಲಿ ಬೆಂಗಳೂರಿನಲ್ಲಿ ಮಹಿಳೆಯರ ಸ್ತನ ಕ್ಯಾನ್ಸರ್ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡು ಬಂದಿದ್ದು, ಶೇ.2.84ರಷ್ಟು ಹೆಚ್ಚಳವಾಗಿದೆ. ದೆಹಲಿಯಲ್ಲಿ ಇದರ ಪ್ರಮಾಣ ಶೇ.1.44ರಷ್ಟಿದ್ದರೆ, ಮುಂಬೈನಲ್ಲಿ ಶೇ.1.42 ಹಾಗೂ ಚೆನ್ನೈನಲ್ಲಿ ಶೇ.2.44ರಷ್ಟು ಹೆಚ್ಚಳವಾಗಿದೆ ಎಂದರು.
ಬೆಂಗಳೂರಿನಲ್ಲಿ ಹೆಚ್ಚಿನ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಕುರಿತು ಅರಿವು ಹೆಚ್ಚಾಗಿರುವುದು ಹಾಗೂ ಐಟಿ ಉದ್ಯೋಗದವರೇ ಇರುವುದರಿಂದ ತಪಾಸಣೆಗೆ ಒಳಗಾಗುತ್ತಾರೆ. ಹೀಗಾಗಿ, ಸ್ತನ ಕ್ಯಾನ್ಸರ್ ರೇಟಿಂಗ್ ಜಾಸ್ತಿ ಇದೆ. ಇದು ಒಂದ್ ರೀತಿ ಒಳ್ಳೆಯದ್ದೇ ಎಂದು ಹೇಳಿದರು.
ಗ್ರಾಮೀಣ ಭಾಗದ ಮಹಿಳೆಯರಿಗೆ ಬೇಕು ಜಾಗೃತಿ :45 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಪ್ರತಿವರ್ಷ ಮ್ಯಾಮೋಗ್ರಾಫಿ ಸಹಿತ ಸ್ತನ ತಪಾಸಣೆಯನ್ನು ಮಾಡಿಸಿಕೊಳ್ಳುವುದು ಉತ್ತಮ. ಅದೇ ರೀತಿಯಲ್ಲಿ 40 ರಿಂದ 44 ವರ್ಷದವರೆಗಿನ ಮಹಿಳೆಯರು ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು.
ಒಂದು ವೇಳೆ, ತಮ್ಮ ಕುಟುಂಬದ ಸದಸ್ಯರಲ್ಲಿ ಸ್ತನ ಕ್ಯಾನ್ಸರ್‍ನಂತಹ ಪ್ರಕರಣಗಳು ಕಂಡು ಬಂದಿದ್ದಲ್ಲಿ ಅಥವಾ ಸ್ತನದಲ್ಲಿ ಗೆಡ್ಡೆ ಇದೆ ಎಂಬ ಅನುಮಾನ ಕಂಡು ಬಂದಲ್ಲಿ ವಯಸ್ಕ ಮಹಿಳೆಯರು ತಪಾಸಣೆ ಮಾಡಿಸಿಕೊಳ್ಳಬೇಕು. ತಮಗಿರುವ ಅನುಮಾನಗಳನ್ನು ಹೋಗಲಾಡಿಸಿಕೊಳ್ಳಲು ಇಚ್ಛಿಸುವ ವಯಸ್ಕ ಮಹಿಳೆಯರು ಪ್ರತಿ 2 ವರ್ಷಕ್ಕೊಮ್ಮೆ ಮ್ಯಾಮೋಗ್ರಾಂ ಮಾಡಿಸಿಕೊಳ್ಳಬಹುದು ಎಂದು ಡಾ.ತೌಸಿಫ್ ಅಹ್ಮದ್ ತಂಗಲ್ವಾಡಿ ತಿಳಿಸಿದರು.
ಸಕಾಲದಲ್ಲಿ ಪತ್ತೆ ಮಾಡದೇ ಹೋದಲ್ಲಿ ಸ್ತನ ಕ್ಯಾನ್ಸರ್ ಉಲ್ಬಣವಾಗಿ ಸಾವಿನ ಪ್ರಮಾಣ ಹೆಚ್ಚಬಹುದು. ತಡವಾಗಿ ರೋಗವನ್ನು ಪತ್ತೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಸ್ತನ ಕ್ಯಾನ್ಸರ್‍ನಿಂದಾಗಿ ಮರಣ ಪ್ರಕರಣ ಅನುಪಾತವು 66% ರಷ್ಟಿದೆ. ಇದು ನಗರ ಪ್ರದೇಶದಲ್ಲಿ ಕೇವಲ 8% ರಷ್ಟಿದೆ. ಯಾಕೆಂದರೆ, ನಗರ ಪ್ರದೇಶದ ಜನರಲ್ಲಿ ಸ್ತನ ಕ್ಯಾನ್ಸರ್ ಮತ್ತು ಅದರಿಂದಾಗುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಮಹಿಳೆಯರಿಗೆ ಅರಿವಿದೆ ಮತ್ತು ಅವರು ಆರಂಭಿಕ ಹಂತದಲ್ಲಿಯೇ ತಪಾಸಣೆ ಮಾಡಿಸಿಕೊಳ್ಳುತ್ತಾರೆ.
ಸಕಾಲದಲ್ಲಿ ಪತ್ತೆ ಮಾಡಿಕೊಳ್ಳುವುದು ಬಹುಮುಖ್ಯವಾಗಿರುತ್ತದೆ. ಯಾಕೆಂದರೆ, ಸ್ಟೇಜ್ 1ರಲ್ಲಿಯೇ ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ಸ್ತನ ಕ್ಯಾನ್ಸರ್ ರೋಗಿಗಳು ಉಳಿದುಕೊಳ್ಳುವ ಪ್ರಮಾಣ ಶೇ.100 ರಷ್ಟಿರುತ್ತದೆ. ಇದು ಸ್ಟೇಜ್ 4ಕ್ಕೆ ಹೋದರೆ ಉಳಿಯುವ ಪ್ರಮಾಣ ಶೇ.22ಕ್ಕೆ ಇಳಿಯುತ್ತದೆ. ವಯೋಮಾನಕ್ಕೆ ಅನುಗುಣವಾಗಿ ಸ್ತನ ಕ್ಯಾನ್ಸರ್ ಅಪಾಯದ ಪ್ರಮಾಣ ಹೆಚ್ಚಾಗುತ್ತದೆ. ಬಹುತೇಕ ಸ್ತನ ಕ್ಯಾನ್ಸರ್ ಪ್ರಕರಣಗಳನ್ನು 50 ವರ್ಷ ವಯಸ್ಸಿನ ನಂತರ ಪತ್ತೆ ಮಾಡಲಾಗುತ್ತದೆ ಎಂದು ತಿಳಿಸಿದರು.
ವಿಶ್ವ ಸ್ತನ ಕ್ಯಾನ್ಸರ್ ದಿನ:
ಅಕ್ಟೋಬರ್ನಲ್ಲಿ ವಿಶ್ವ ಸ್ತನ ಕ್ಯಾನ್ಸರ್ ಜಾಗೃತಿ ತಿಂಗಳಾಗಿ ಆಚರಿಸಲಾಗುತ್ತೆ. ಇದರ ಅಂಗವಾಗಿ ಹೆಚ್ಸಿಜಿ ಆಸ್ಪತ್ರೆ ಸಹಯೋಗದಲ್ಲಿಂದು ಕೆಎಸ್ಆರ್ಟಿಸಿಯ ಬೆಂಗಳೂರು ಕೇಂದ್ರೀಯ ವಿಭಾಗದ ಘಟಕ 2 ರ ಯೋಗ ಕೊಠಡಿಯಲ್ಲಿ ಸ್ತನ ಕ್ಯಾನ್ಸರ್ ಜಾಗೃತಿ ಮತ್ತು ತಪಾಸಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ರೇಡಿಯೇಷನ್ ಆಂಕಲಾಜಿಸ್ಟ್ ಡಾ.ಪ್ರಮಿತಾ, ಸ್ತನ ಕ್ಯಾನ್ಸರ್ ಕುರಿತು ಮಾಹಿತಿ ನೀಡಿದರು.
ಜೊತೆಗೆ 60 ಮಹಿಳಾ ಸಿಬ್ಬಂದಿಗಳಿಗೆ ಉಚಿತ ತಪಾಸಣೆಗೆ ಒಳಗಾದರು.ಇದೇ ಸಂದರ್ಭದಲ್ಲಿ ವಿಭಾಗದ ನೌಕರರಿಗೆ ಕೋವಿಡ್ 19 ಗಂಟಲು ದ್ರವದ ಪರೀಕ್ಷೆ, ಲಸಿಕೆ ನೀಡುವಲ್ಲಿ ಸಹಕರಿಸಿದ ಬಿಬಿಎಂಪಿ ವೈದ್ಯಾಧಿಕಾರಿಗಳಿಗೆ ಅಭಿನಂದಿಸಲಾಯಿತು.