ಬೆಂಗಳೂರು:ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಸ್ಥಾನಕ್ಕೆ ಕೆ.ಎಸ್.ಈಶ್ವರಪ್ಪ ಇಂದು ಸಂಜೆ ರಾಜೀನಾಮೆ ಸಲ್ಲಿಸಿದ್ದಾರೆ. ಸಿಎಂ ಬೊಮ್ಮಾಯಿ ನಿವಾಸಕ್ಕೆ ಆಗಮಿಸಿದ ಈಶ್ವರಪ್ಪ ತಮ್ಮ ರಾಜೀನಾಮೆ ಪತ್ರ ಒಪ್ಪಿಸಿದರು. ರಮೇಶ್ ಜಾರಕಿಹೊಳಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಮುರುಗೇಶ್ ನಿರಾಣಿ, ಭೈರತಿ ಬಸವರಾಜ್ ಸೇರಿದಂತೆ ಬಿಜೆಪಿ ನಾಯಕರು ಈ ವೇಳೆ ಉಪಸ್ಥಿತರಿದ್ದರು.
ಶಿವಮೊಗ್ಗದಲ್ಲಿ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಇಂದು ರಾಜೀನಾಮೆ ನೀಡುವುದಾಗಿ ಈಶ್ವರಪ್ಪ ನಿನ್ನೆ ಘೋಷಿಸಿದ್ದರು. ಅದರಂತೆ ಇಂದು ಶಿವಮೊಗ್ಗದಿಂದಲೇ ಅಪಾರ ಬೆಂಬಲಿಗರ ಜೊತೆ ಬೆಂಗಳೂರಿಗೆ ಬಂದು ಸಿಎಂ ಬೊಮ್ಮಾಯಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಮಾರ್ಗ ಮಧ್ಯೆ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದು ಬೆಂಗಳೂರಿಗೆ ತೆರಳಿದರು.
ಗುತ್ತಿಗೆದಾರ ಸಂತೋಷ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಶ್ವರಪ್ಪ ವಜಾ ಹಾಗೂ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ಮುಖಂಡರು ಸಿಎಂ ನಿವಾಸಕ್ಕೆ ಘೇರಾವ್ ಹಾಕಲು ಯತ್ನಿಸಿದ್ದರು. ಅಷ್ಟೇ ಅಲ್ಲದೆ, 24 ಗಂಟೆಗಳ ಕಾಲ ಆಹೋರಾತ್ರಿ ಧರಣಿ ನಡೆಸಿದ್ದರು. ಒತ್ತಡ ಹೆಚ್ಚುತ್ತಿದ್ದ ಹಾಗೇ ಈಶ್ವರಪ್ಪ ರಾಜೀನಾಮೆ ಘೋಷಣೆ ಮಾಡಿದ್ದರು
ಸಿಎಂ ನಿವಾಸದ ಮುಂದೆ ಈಶ್ವರಪ್ಪ ಬೆಂಬಲಿಗರು (ಇದನ್ನೂ ಓದಿ: ರಾಜೀನಾಮೆಗೂ ಮುನ್ನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಸಚಿವ ಕೆ.ಎಸ್.ಈಶ್ವರಪ್ಪ)
ಬೆಂಬಲಿಗರಿಂದ ಈಶ್ವರಪ್ಪ ಪರವಾಗಿ ಘೋಷಣೆ:ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ ನೀಡುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ರೇಸ್ ಕೋರ್ಸ್ನಲ್ಲಿ ಇರುವ ಸಿಎಂ ನಿವಾಸದ ಮುಂದೆ ಈಶ್ವರಪ್ಪ ಪರವಾಗಿ ಅವರ ಬೆಂಬಲಿಗರು ಘೋಷಣೆ ಕೂಗಿದರು. ರಾಜೀನಾಮೆ ಬೇಡ ಎಂಬ ಘೋಷಣೆ ಕೂಗುತ್ತಾ ಬೆಂಬಲ ಸೂಚಿಸಿದರು. ಇದೇ ವೇಳೆ ಡಿಕೆಶಿ ವಿರುದ್ಧ ಬೆಂಬಲಿಗರು ಧಿಕ್ಕಾರ ಕೂಗಿದರು.
ರಾಜೀನಾಮೆ ಸಲ್ಲಿಸದಂತೆ ಬೆಂಬಲಿಗರ ಪಟ್ಟು