ಬೆಂಗಳೂರು: ಶಿವಮೊಗ್ಗದಲ್ಲಿ ಭಜರಂಗದಳದ ಕಾರ್ಯಕರ್ತ ಹರ್ಷ ಎಂಬ ಯುವಕನ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಶಂಕಿತ ಆರೋಪಿಗಳು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದು, ಈಗಲಾದರೂ ನನ್ನ ಆರೋಪವನ್ನು ಕಾಂಗ್ರೆಸ್ನ ಹರಿಪ್ರಸಾದ್ ಒಪ್ಪುತ್ತಾರಾ ಎಂದು ಸಚಿವ ಕೆಎಸ್ ಈಶ್ವರಪ್ಪ ಪ್ರಶ್ನಿಸಿದ್ದಾರೆ.
ಚಕ್ರವರ್ತಿ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೊಲೆ ಆದ ಸಮಯದಲ್ಲಿ ಎಸ್ಪಿಗೆ ಕಾಲ್ ಮಾಡಿ ಕೇಳಿದೆ. ಮುಸ್ಲಿಮರೇ ಕೊಲೆ ಮಾಡಿದ್ದಾರೆ ಅಂತ ಅವರು ಮಾಹಿತಿ ನೀಡಿದ್ದರು. ಸುತ್ತಮುತ್ತಲಿನ ಜನ ಕೂಡ ಅದೇ ಮಾತನ್ನು ಹೇಳಿದ್ದರು. ಹೀಗಾಗಿ ಕೊಲೆ ಮಾಡಿದ್ದು ಮುಸ್ಲಿಂ ಗೂಂಡಾಗಳು ಎನ್ನುವ ಮಾತನ್ನು ಹೇಳಿದ್ದೆ. ಈಗ ಅದು ಸತ್ಯ ಆಗಿದೆ. ಬಂಧನ ಆದವರೆಲ್ಲಾ ಮುಸ್ಲಿಮರು. ಈಗಲಾದರೂ ಬಿ.ಕೆ ಹರಿಪ್ರಸಾದ್ ನನ್ನ ಆರೋಪವನ್ನು ಒಪ್ಕೊತಾರಾ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: 'ಮುಸಲ್ಮಾನ ಗೂಂಡಾಗಳು ಶಿವಮೊಗ್ಗದ ಯುವಕನ ಕೊಲೆ ಮಾಡಿದ್ದಾರೆ': ಸಚಿವ ಕೆ.ಎಸ್.ಈಶ್ವರಪ್ಪ
ಕಾಂಗ್ರೆಸ್ ಸರ್ಕಾರ ಇದ್ದಾಗ ಗೋ ರಕ್ಷಣೆ ಮಾಡುವ ಹಿಂದೂ ಹುಡುಗರನ್ನು ಕೊಲೆ ಮಾಡ್ತಾ ಇದ್ದರು. ಈಗ ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕು ಅಂತ ಹಿಂದೂ ಯುವಕರ ಕೊಲೆ ಮಾಡುತ್ತಿದ್ದಾರೆ. ಈ ಕೊಲೆ ಕೇಸ್ ತನಿಖೆಯನ್ನು ಎನ್ಐಎ ಮೂಲಕ ಮಾಡಿಸಬೇಕು, ಮುಖ್ಯಮಂತ್ರಿಗಳ ಜೊತೆ ಈ ಬಗ್ಗೆ ಮಾತಾಡುತ್ತೇನೆ ಎಂದು ಈಶ್ವರಪ್ಪ ತಿಳಿಸಿದರು.