ಬೆಂಗಳೂರು: ಒಂದೆಡೆ ಕೊರೊನಾ ಇನ್ನೊಂದೆಡೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದಾಗಿ ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದುIshwar Khandre ಅಭಿಪ್ರಾಯಪಟ್ಟಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ದೇಶವನ್ನು ಒಂದೆಡೆ ಕೊರೊನಾ ಎಂಬ ಮಹಾಮಾರಿ ಕಾಡುತ್ತಿದೆ. ಈ ನಡುವೆ ಆಶಾದಾಯಕವಾದ ಸುದ್ದಿ, ಮುಂಗಾರು ಉತ್ತಮವಾಗಿದೆ. ರಾಜ್ಯದ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆ ಆಗುತ್ತಿದೆ. ಆದರೆ, ರಾಜ್ಯ ಸರ್ಕಾರ ರೈತರ ಅಗತ್ಯಕ್ಕೆ ಅನುಗುಣವಾಗಿ ಬಿತ್ತನೆ ಬೀಜ, ರಸಗೊಬ್ಬರ ಪೂರೈಸುವಲ್ಲಿ ವಿಫಲವಾಗಿದೆ.
ಇದು ನಿಜಕ್ಕೂ ದೌರ್ಭಾಗ್ಯವೇ ಸರಿ. ಈವರೆಗೆ ಮುಂಗಾರು ಹಂಗಾಮಿನ ಬೆಳೆ ವಿಮೆ ಪರಿಹಾರವನ್ನೂ ಸೂಕ್ತವಾಗಿ ನೀಡಿಲ್ಲ. ರೈತರಿಗೆ ವಿಮಾ ಸಂಸ್ಥೆಗಳು ಪಾವತಿಸಬೇಕಾದ ನೂರಾರು ಕೋಟಿ ರೂಪಾಯಿ ಪರಿಹಾರವನನು ನೀಡಿಲ್ಲ. ಸರ್ಕಾರ ವಿಮಾ ಸಂಸ್ಥೆಗಳ ಜೊತೆ ಶಾಮೀಲಾಗಿರುವುದು ಇದರಿಂದ ಮೇಲ್ನೋಟಕ್ಕೆ ಕಾಣಿಸುತ್ತಿದೆ ಎಂದಿದ್ದಾರೆ.
ಬಿತ್ತನೆ ಬೀಜದ ಸಮಸ್ಯೆ ರಾಜ್ಯ ರೈತರಿಗೆ ಕಾಡುತ್ತಿದೆ. ಹಿಂದೆಲ್ಲಾ ರೈತರು ತಮಗೆ ಬೇಕಾದ ಬಿತ್ತನೆ ಬೀಜವನ್ನು ತಾವೇ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದರು. ಆದರೆ, ಈಗ ಆಧುನಿಕ ಕಾಲಘಟ್ಟದಲ್ಲಿ, ಹೈಬ್ರೀಡ್ ಬಿತ್ತನೆ ಬೀಜವನ್ನು ಸರ್ಕಾರವೇ ರೈತ ಸಂಪರ್ಕ ಕೇಂದ್ರ, ಕೃಷಿ ಸಹಕಾರಿ ಪತ್ತಿನ ಸಹಕಾರ ಸಂಘ, ಕರ್ನಾಟಕ ರಾಜ್ಯ ಬೀಜ ನಿಗಮ ಇತ್ಯಾದಿಗಳಲ್ಲಿ ಪೂರೈಕೆ ಮಾಡುತ್ತಿದೆ.
ಹೈದರಾಬಾದ್ ಕರ್ನಾಟಕದ ಬೀದರ್ ಮತ್ತು ಕುಲ್ಬರ್ಗಿ ಹಾಗೂ ಇತರ ಭಾಗದಲ್ಲಿ ಹೆಚ್ಚಾಗಿ ಸೋಯಾಬೀನ್ ಬೆಳೆಯುತ್ತಾರೆ. ಆದರೆ ಸರ್ಕಾರ ಸೂಕ್ತ ಸಮಯದಲ್ಲಿ ಬಿತ್ತನೆ ಬೀಜಕ್ಕೆ ಒಪ್ಪಂದ ಮಾಡಿಕೊಳ್ಳದ ಕಾರಣ, ಬಿತ್ತನೆ ಬೀಜ ಬೆಲೆಯನ್ನು ಹೆಚ್ಚಳ ಮಾಡಿದ್ದು, ಬಹುತೇಕ ದುಪ್ಪಟ್ಟಾಗಿದೆ ಎಂದು ಈಶ್ವರ್ ಖಂಡ್ರೆ ವಿವರಿಸಿದರು.