ಕರ್ನಾಟಕ

karnataka

ETV Bharat / city

"ಜಗಡಾ ಕೆ ಪೀಚೆ ಕೌನ್ ಹೈ.. ಮುಜೆ ಮಾಲೂಮ್ ನಹಿ ಸರ್": ಪೊಲೀಸರ ಮುಂದೆ ಆರೋಪಿ ವರಸೆ

ಡಿಜೆ ಹಳ್ಳಿ ಠಾಣೆಯಲ್ಲಿ ಗಲಭೆಗೆ ಕಾರಣರಾದ ಇತರ ಆರೋಪಿಗಳನ್ನು ಪೊಲೀಸರು ತನಿಖೆಗೆ ಒಳಪಡಿಸಿದಾಗ ಆರೋಪಿಗಳು ಮೊಂಡತನ ತೋರಿಸುತ್ತಿದ್ದಾರೆ. ಪೊಲೀಸರ ಬಳಿ ಆರೋಪಿ ಜೈದ್‌, "ಜಗಡಾ ಕೆ ಪೀಚೆ ಕೌನ್ ಹೈ, ಮುಜೆ ಮಾಲೂಮ್ ನಹಿ ಸರ್" ಎಂದು ಹೇಳ್ತಿದ್ದಾನೆ. ಸದ್ಯ ಪೊಲೀಸರು ಸೆಕ್ಷನ್ 164 ರಡಿ ಆತನ ಹೇಳಿಕೆ ಪಡೆದು, ಸತ್ಯ ಬಾಯಿ ಬಿಡಿಸೋ ಪ್ರಯತ್ನ ಮಾಡಿದ್ದಾರೆ.

Bangalore riot case
ಆರೋಪಿ ಜೈದ್

By

Published : Aug 22, 2020, 1:58 PM IST

ಬೆಂಗಳೂರು: ಡಿ‌ಜೆ ಹಳ್ಳಿ ಮತ್ತು ಕೆಜಿ ‌ಹಳ್ಳಿ‌ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಉಗ್ರನ ಜೊತೆ ಲಿಂಕ್ ಹೊಂದಿರುವ ಆರೋಪಿಯನ್ನು ಡಿಜೆ ಹಳ್ಳಿ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಪ್ರಾಥಮಿಕ ತನಿಖೆ ವೇಳೆ ಆರೋಪಿ ಜೈದ್ ಆಟೋ ಚಾಲಕ ಎಂಬುದು ತಿಳಿದು ಬಂದಿದೆ. ಈತನ ಬಾವ ಅಫ್ರೀದಿ ಎಂಬಾತ ಬೆಂಗಳೂರಿನಲ್ಲಿ ನಡೆದಿದ್ದ ಚರ್ಚ್ ಸ್ಟ್ರೀಟ್ ಬಾಂಬ್ ಬ್ಲಾಸ್ಟ್ ಕೇಸ್​ನಲ್ಲಿ ಅರೆಸ್ಟ್ ಅಗಿದ್ದ. ಆತ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಪದೇ ಪದೆ ಜೈಲಿಗೆ ಹೋಗಿ ಆತನನ್ನು ಭೇಟಿಯಾಗಿ ಮಾತುಕತೆ ನಡೆಸಿ ಜೈದ್ ವಾಪಸಾಗುತ್ತಿದ್ದ ವಿಚಾರ ಪ್ರಾಥಮಿಕವಾಗಿ ತಿಳಿದುಬಂದಿದೆ. ಸದ್ಯ ಟೆರರ್ ಲಿಂಕ್ ಇರುವ ಕಾರಣ ಆರೋಪಿ ಜೈದ್​ನನ್ನು ಮೆಡಿಕಲ್ ಚೆಕ್ ನಡೆಸಿ ಮತ್ತೆ ವಿಚಾರಣೆ ಚುರುಕುಗೊಳಿಸಿದ್ದಾರೆ.

ಘಟನೆ ಹಿಂದಿನ ಸತ್ಯಕ್ಕೆ ತನಿಖೆ

ಡಿಜೆ ಹಳ್ಳಿ ಠಾಣೆಯಲ್ಲಿ ಗಲಭೆಗೆ ಕಾರಣರಾದ ಇತರ ಆರೋಪಿಗಳನ್ನು ಪೊಲೀಸರು ತನಿಖೆಗೆ ಒಳಪಡಿಸಿದಾಗ ಆರೋಪಿಗಳು ಮೊಂಡತನ ತೋರಿಸುತ್ತಿದ್ದಾರೆ. ಪೊಲೀಸರ ಬಳಿ ಜೈದ್‌, "ಜಗಡಾ ಕೆ ಪೀಚೆ ಕೌನ್ ಹೈ, ಮುಜೆ ಮಾಲೂಮ್ ನಹಿ ಸರ್" ಅಂತ ಹೇಳ್ತಿದ್ದಾನೆ. ಸದ್ಯ ಪೊಲೀಸರು ಸೆಕ್ಷನ್ 164 ರಡಿ ಆತನ ಹೇಳಿಕೆ ಪಡೆದು, ಸತ್ಯ ಬಾಯಿ ಬಿಡಿಸೋ ಪ್ರಯತ್ನ ಮಾಡಿದ್ದಾರೆ. ಆತನನ್ನು ಓರ್ವ ಸಾಕ್ಷಿದಾರನನ್ನಾಗಿ ಪರಿಗಣಿಸಿ ಬಿಟ್ಟುಬಿಡುವುದಾಗಿ ಹೇಳಿದ್ದಾರೆ. ಘಟನೆಗೆ ಕುಮ್ಮಕ್ಕು ನೀಡಿರೋದು ಯಾರು ಎಂದು ತನಿಖಾಧಿಕಾರಿಗಳು ಪ್ರಶ್ನೆ ಮಾಡಿದ್ದಾರೆ. ಕೇಸ್​ನಲ್ಲಿ ಫಿಟ್ ಆಗ್ತೀವಿ ಅನ್ನೋದು ಗೊತ್ತಿದ್ರೂ, ಆರೋಪಿಗಳು ಸತ್ಯ ಬಾಯಿಬಿಡುತ್ತಿಲ್ಲ. ಇದರಿಂದ ಪೊಲೀಸರಿಗೆ ತಲೆನೋವು ಶುರುವಾಗಿದೆ.

ಗೋಣಿ‌ ಚೀಲದಲ್ಲಿ ಮಾರಕಾಸ್ತ್ರ...

ಇನ್ನು ಗಲಭೆ ವೇಳೆ,‌ ಆರೋಪಿಗಳು ಮಾರಕಾಸ್ತ್ರಗಳನ್ನು ಬಳಕೆ ಮಾಡಿದ್ದು, ಈ ಮಾರಕಾಸ್ತ್ರಗಳನ್ನು ಗಲಭೆ ನಡೆಸಿದ ಬಳಿಕ ಡಿಜೆ ಹಳ್ಳಿ ಸುತ್ತಮುತ್ತಾ ಎಸೆದು ಹೋಗಿದ್ರು. ಹೀಗಾಗಿ ಸದ್ಯ ಆರೋಪಿಗಳ ಹೇಳಿಕೆಯ ಆಧಾರದ‌ ಮೇರೆಗೆ ಅವುಗಳನ್ನು ಜಪ್ತಿ ಮಾಡಲಾಗಿದೆ.

‌ಠಾಣೆ ಸಂಪೂರ್ಣವಾಗಿ ಸ್ಯಾನಿಟೈಸೇಷನ್...

ಠಾಣೆ ಸ್ಯಾನಿಟೈಸೇಷನ್

ಮತ್ತೊಂದೆಡೆ ಘಟನೆ ಬೆಳಕಿಗೆ ಬಂದ ದಿನದಿಂದ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಠಾಣೆಗೆ ಹಲವಾರು ಜನ ಬಂದು ಹೋಗುತ್ತಿದ್ದಾರೆ. ಅಲ್ಲದೇ ಆರೋಪಿಗಳನ್ನು ಬಂಧಿಸಿ ಕರೆತಂದು ವಿಚಾರಣೆ ನಡೆಸುತ್ತಿರುವ ಕಾರಣ ಠಾಣೆ ಹಾಗೂ ಠಾಣೆಯ ಹೊರಭಾಗವನ್ನೂ ಸ್ಯಾನಿಟೈಸ್ ಮಾಡಲಾಗುತ್ತಿದೆ.

ಡಿಸಿಪಿ‌ ಗರಂ

ಮತ್ತೊಂದೆಡೆ, ಡಿಜೆ ಹಳ್ಳಿ ಠಾಣೆಯಲ್ಲಿ ತನಿಖೆ ಬಿರುಸಿನಿಂದ ಸಾಗುತ್ತಿದ್ದು, ಮುಂಜಾನೆಯೇ ಪೂರ್ವ ವಿಭಾಗ ಡಿಸಿಪಿ ಶರಣಪ್ಪ ಠಾಣೆಗೆ ಬಂದಿದ್ದಾರೆ. ಈ ವೇಳೆ, ಸಿಬ್ಬಂದಿ ತಡವಾಗಿ ಠಾಣೆಗೆ ಬರುತ್ತಿರುವುದಕ್ಕೆ ಡಿಸಿಪಿ ಗರಂ ಆಗಿದ್ದಾರೆ. ಸಮಯಕ್ಕೆ ಬಾರದೇ ತಡವಾಗಿ ಬರುತ್ತೀರಿ. ಡ್ಯೂಟಿ ಟೈಂನಲ್ಲೇ ಮೊಬೈಲ್‌ ಬಳಸುವ ಹಾಗಿಲ್ಲ ಎಂದು ಡಿಜೆ ಹಳ್ಳಿ ಪೊಲೀಸ್ ಸ್ಟೇಷನ್ ಮುಂಭಾಗದಲ್ಲಿ ಖಡಕ್ ವಾರ್ನಿಂಗ್ ನೀಡಿದ್ದಾರೆ. ಕೆಲಸಕ್ಕೆ ನಿಯೋಜನೆ ಮಾಡಿದ ವೇಳೆ ಫುಲ್ ಟೈಂ ಮೊಬೈಲ್​ನಲ್ಲೇ ಇರ್ತಿರಿ. ಅಕ್ಕಪಕ್ಕ ಏನೇ ನಡೆಯುತ್ತಿದ್ದರೂ ನಿಮ್ಮ ಪಾಡಿಗೆ ನೀವು ಮೊಬೈಲ್​ನಲ್ಲಿ ಬ್ಯುಸಿ ಆಗಿರ್ತೀರಿ. ಪರಿಸ್ಥಿತಿ ಇನ್ನೂ ಸಂಪೂರ್ಣವಾಗಿ ತಿಳಿಯಾಗಿಲ್ಲ. ಹೀಗಿದ್ರೂ ಬಹುತೇಕರು ನಿರ್ಲಕ್ಷ್ಯ ವಹಿಸಿದ್ದಾರೆ. ಇನ್ಮುಂದೆ ಇದೇ ರೀತಿ ನಡೆದುಕೊಂಡ್ರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸದ್ಯ ಡಿಜೆ ಹಳ್ಳಿ ಠಾಣೆಯಲ್ಲಿ ಗಲಭೆ ಪ್ರಕರಣದ ವಿಚಾರಣೆ ಬಿರುಸಿನಿಂದ ಸಾಗಿದೆ.

ABOUT THE AUTHOR

...view details