ಬೆಂಗಳೂರು:ನಗರದ ಇನ್ಫೆಂಟ್ರೆ ರಸ್ತೆಯಲ್ಲಿರುವ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ತುರ್ತು ಸಭೆ ನಡೆಸಿದರು. ಸಭೆಯಲ್ಲಿ ನಗರದ ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು.
370, 35ಎ ರದ್ದು ವಿಚಾರ, ಸ್ವಾತಂತ್ರ್ಯ ದಿನಾಚರಣೆ, ಬಕ್ರೀದ್ ಹಾಗೂ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ಮತ್ತು ವಿಧ್ವಂಸಕ ಕೃತ್ಯಗಳು ನಡೆಯದಂತೆ ಪೂರ್ವಭಾವಿಯಾಗಿ ಸಭೆ ಕರೆಯಲಾಗಿದೆ. ಅಲ್ಲದೆ ನಗರದ ಪುಡಿರೌಡಿಗಳು, ಡ್ರಗ್ಸ್ ಮಾಫಿಯಾ ಸೇರಿ ಇತರೆ ಅಪರಾಧ ಕೃತ್ಯಗಳಿಗೆ ಬ್ರೇಕ್ ಹಾಕುವ ಬಗ್ಗೆ ಆಯಾ ವಿಭಾಗದ ಅಧಿಕಾರಿಗಳು ಅಲರ್ಟ್ ಇರುವಂತೆ ಅಧಿಕಾರಿಗಳಿಗೆ ಕಮಿಷನರ್ ಸೂಚಿಸಿದ್ದಾರೆ. ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರು, ಡಿಸಿಪಿಗಳು, ಎಸಿಪಿಗಳು, ಇನ್ಸ್ಪೆಕ್ಟರ್ಗಳು ಭಾಗಿಯಾಗಿದ್ದರು.
ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ತುರ್ತು ಸಭೆ ಪೊಲೀಸ್ ಅಧಿಕಾರಿಗಳ ಸಭೆ ಬಳಿಕ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾತನಾಡಿ, ಇಂದು ಇನ್ಸ್‌ಪೆಕ್ಟರ್, ಎಸಿಪಿ, ಡಿಸಿಪಿಗಳ ಜೊತೆ ಸಭೆ ಮಾಡಲಾಗಿದೆ. ಸಭೆಯಲ್ಲಿ ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ಮಾಡಿ ಸೂಚಿಸಲಾಗಿದೆ. ಮುಖ್ಯವಾಗಿ ಡ್ರಗ್ಸ್ ಸರಬರಾಜಿಗೆ ಕಡಿವಾಣ ಹಾಕಬೇಕು. ಅಲ್ಲದೇ ಶಾಲಾ-ಕಾಲೇಜುಗಳ ಬಳಿ ಡ್ರಗ್ಸ್ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ಜಮ್ಮು-ಕಾಶ್ಮೀರದಲ್ಲಿ 370 , 35ಎ ರದ್ದು ಸಂಬಂಧ, ಕೇಂದ್ರ ಸಚಿವಾಲಯದಿಂದ ರಾಜ್ಯಕ್ಕೆ ಹಾಗೂ ನಗರಕ್ಕೆ ಸೂಕ್ತ ಭದ್ರತೆ ನೀಡುವಂತೆ ಸೂಚನೆ ಬಂದಿದೆ. ನಗರದಲ್ಲಿ ಯಾವ ಸ್ಥಳಗಳಲ್ಲಿ ಜಮ್ಮು-ಕಾಶ್ಮೀರ ನಿವಾಸಿಗಳು ಇದ್ದಾರೋ, ಅಂತಹ ಏರಿಯಾಗಳಲ್ಲಿ ಬಿಗಿ ಭದ್ರತೆ ನೀಡಬೇಕಿದೆ. ಎಷ್ಟು ಜನ ನಗರದಲ್ಲಿ ಜಮ್ಮು ನಿವಾಸಿಗಳು ಇದ್ದಾರೆ ಎಂಬುದರ ಬಗ್ಗೆ ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ಸೂಚನ ನೀಡಲಾಗಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದರು.