ಬೆಂಗಳೂರು: ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಬೃಹತ್ ಗಾತ್ರದ ಎರಡು ಆನೆ ದಂತಗಳನ್ನು ಅಕ್ರಮವಾಗಿ ನಗರದಲ್ಲಿ ಮಾರಾಟ ಮಾಡಲು ಯತ್ನಿಸಿದ್ದ ಮೂವರನ್ನು ದಕ್ಷಿಣ ವಿಭಾಗದ ಚನ್ನಮನಕೆರೆ ಅಚ್ಚುಕಟ್ಟು ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮಾರ್ಚ್ 18 ರಂದು ರಾತ್ರಿ 8 ಗಂಟೆಯ ಸುಮಾರಿಗೆ ಮೂವರು ಬನಶಂಕರಿಯ 3ನೇ ಹಂತದ ಶಾಲೆಯೊಂದರ ಗೇಟ್ ಮುಂಭಾಗ ಆನೆ ದಂತಗಳನ್ನು ಕಾರಿನಲ್ಲಿಟ್ಟುಕೊಂಡು ಮಾರಾಟ ಮಾಡಲು ಯತ್ನಿಸಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ಮಾಡಿದ್ದರು.
ಈ ಸಂದರ್ಭದಲ್ಲಿ ಹಾಸನ ಜಿಲ್ಲೆಯ ಸಾಲಗಾಮೆ ಸಮೀಪದ ವೀರಾಪುರ ಗ್ರಾಮದ ಚಂದ್ರೇಗೌಡ (46), ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಬಂಕಾಪುರ ಗ್ರಾಮದ ಸೋಮಲಿಂಗಪ್ಪ ಕೊಡದ್ (41), ಹಾವೇರಿ ಜಿಲ್ಲೆಯ ಬಸವನಾಳ ಗ್ರಾಮದ ಪ್ರವೀಣ್ ಗುಳೇದ (24) ಎಂಬ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪ್ರಕರಣದ ಕುರಿತು ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.
ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಆನೆ ದಂತಗಳ ಮಾರಾಟಕ್ಕೆ ಯತ್ನ: ಮೂವರ ಬಂಧನ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಬೃಹತ್ ಗಾತ್ರದ ಎರಡು ಆನೆ ದಂತಗಳು ಪತ್ತೆಯಾಗಿವೆ. ಒಂದು ದಂತ 150 ಸೆ.ಮೀ ಉದ್ದ, 16 ಕೆಜಿ ಇದೆ. ಮತ್ತೊಂದು ದಂತ 125 ಸೆ.ಮೀ ಉದ್ದ ಮತ್ತು 13 ಕೆಜಿಯದ್ದಾಗಿದೆ ಎಂದು ಹೇಳಿದ್ದಾರೆ.
ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿ ಪ್ರಕರಣ:ಎರಡು ದಂತಗಳು 20 ಕೆಜಿ ತೂಕ ಹೊಂದಿದ್ದು, ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿ ಸಿ.ಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದಿದ್ದಾರೆ.
ಕಾರ್ಯಾಚರಣೆ ನಡೆಸಿದ ತಂಡ: ಎಸಿಪಿ ಬಿ.ಎಸ್.ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ಪಿ.ಆರ್. ಜನಾರ್ದನ್ ಮತ್ತು ಪಿಎಸ್‌ಐಗಳಾದ ಮನೋಜ್ ಕುಮಾರ್, ಮಹೇಶ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು ಎಂದು ಹರೀಶ್ ಪಾಂಡೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಗರ್ಭಪಾತಕ್ಕೆ ಬಂದಿದ್ದ ಮಹಿಳೆಯನ್ನೇ ಬಾಡಿಗೆ ತಾಯಿಯೆಂದು ಬಿಂಬಿಸಿ ಮಗು ಮಾರಿದ್ದ ವೈದ್ಯನ ಬಂಧನ