ಬೆಂಗಳೂರು: ಈ ಬಾರಿಯ ಚುನಾವಣೆ ಯಾವುದೇ ರಾಜ್ಯ ಅಥವಾ ಸ್ಥಳೀಯ ವಿಷಯಗಳ ಮೇಲೆ ನಡೆಯಲ್ಲ. ರಾಷ್ಟ್ರೀಯ ವಿಷಯಗಳ ಆಧಾರದ ಮೇಲೆ ಮಾತ್ರ ಲೋಕಸಭಾ ಚುನಾವಣೆ ನಡೆಯುತ್ತದೆ. ರಾಷ್ಟ್ರ ರಕ್ಷಣೆ, ದೇಶಾಭಿವೃದ್ದಿ ಆಧಾರದ ಮೇಲೆ ನಡೆಯುತ್ತದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಚುನಾವಣಾ ಮಾಧ್ಯಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರಿನ ಪುಣ್ಯಭೂಮಿಯಲ್ಲಿ ಪ್ರಾರಂಭವಾದ ಮಹಾಘಟಬಂಧನ್ ಕರ್ನಾಟಕದಲ್ಲೇ ಉಳಿದು ಹೋಯ್ತು. ಎನ್ಡಿಎ ಘಟಬಂಧನ ಬಿಟ್ಟರೆ ಈ ದೇಶದಲ್ಲಿ ಬೇರೆ ಯಾವುದೇ ಘಟಬಂಧನಗಳಿಗೆ ಉಳಿಗಾಲವಿಲ್ಲ ಎಂಬುದು ನಗ್ನ ಸತ್ಯ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಕರ್ನಾಟಕದಲ್ಲಿ ಬಿಜೆಪಿ 22 ಸ್ಥಾನಗಳನ್ನು ಗೆಲ್ಲುತ್ತದೆ. ಜೆಡಿಎಸ್-ಕಾಂಗ್ರೆಸ್ ಒಳ ಜಗಳ ನೋಡಿದರೆ ಇದು 28 ಸ್ಥಾನಗಳವರೆಗೆ ಹೋದರೂ ಆಶ್ಚರ್ಯವಿಲ್ಲ, ಟಾರ್ಗೆಟ್ ರೀಚ್ ಆಗುತ್ತೇವೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಯಡಿಯೂರಪ್ಪ ಡೈರಿ ವಿಷಯದಲ್ಲಿ ಕಾಂಗ್ರೆಸ್ ತಾನೇ ತೋಡಿದ ಗುಂಡಿಗೆ ತಾನೇ ಬೀಳುವಂತಾಗಿದೆ. ಅಷ್ಟು ವರ್ಷ ಕಾಲ ಯಾಕೆ ಕಾಂಗ್ರೆಸ್ಸಿಗರು ಈ ಡೈರಿ ವಿಷಯ ಪ್ರಸ್ತಾಪಿಸಲಿಲ್ಲ. 2010ರ ಘಟನೆ ನಡೆದ ನಂತರ ಐದು ವರ್ಷ ಕಾಂಗ್ರೆಸ್ ಆಡಳಿತವಿದ್ದು ಘಟನೆ ನಡೆದ ವೇಳೆ ಯುಪಿಎ ಸರ್ಕಾರವೇ ಇತ್ತು. ಆದರೂ ಯಾಕೆ ತನಿಖೆ ಮಾಡಿಸಲಿಲ್ಲ, ಈ ಡೈರಿ ಸಂಪೂರ್ಣ ಫೇಕ್, ಇದರಲ್ಲಿ ಯಾವುದೇ ಹುರುಳಿಲ್ಲ ಎಂದರು.
ಇದುವರೆಗೆ ದೇವೇಗೌಡರು ಬೆಂಗಳೂರು ಉತ್ತರದಲ್ಲಿ ಸ್ಪರ್ಧಿಸುತ್ತಾರೆ ಎಂದು ನಮ್ಮ ಬಿಜೆಪಿ ಕಾರ್ಯಕರ್ತರ ಉತ್ಸಾಹ ಹೆಚ್ಚಾಗಿತ್ತು. ದೊಡ್ಡಗೌಡರ ವಿರುದ್ದ ಒಮ್ಮೆ ಸ್ಪರ್ಧೆ ಮಾಡಬೇಕು ಎಂಬ ಬಯಕೆ ಇತ್ತು. ಈಗ ಎರಡು ಮೂರು ದಿನದಿಂದ ದೊಡ್ಡಗೌಡರು ತುಮಕೂರಿಗೆ ವಲಸೆ ಹೋಗುತ್ತಾರೆ ಎಂದು ತಿಳಿದು ನಮ್ಮ ಕಾರ್ಯರ್ತರಿಗೆ ಸ್ವಲ್ಪ ನಿರಾಸೆಯಾಗಿದೆ. ಯಾರೇ ನಮ್ಮ ವಿರುದ್ದ ಸ್ಪರ್ಧಿಸಲಿ, ಕ್ಯಾಂಡಿಡೇಟ್ ಬಗ್ಗೆ ನಾವು ತಲೆಕೆಡಿಸಿಕೊಂಡಿಲ್ಲ ಎಂದರು.
ಮಂಡ್ಯದಲ್ಲಿ ದರ್ಶನ್ ಮನೆ ಮೇಲೆ ನಾವಂತೂ ಬಿಜೆಪಿಯವರು ದಾಳಿ ಮಾಡಿಲ್ಲ. ಜೆಡಿಎಸ್ ಕಾರ್ಯಕರ್ತರು ನಾಳೆ ನಮ್ಮ ಮೇಲೂ ದಾಳಿ ಮಾಡುವ ಆತಂಕವಂತೂ ಇದೆ. ದ್ವೇಷದ ರಾಜಕೀಯ ಒಳ್ಳೆಯದಲ್ಲ. ನಾಯಕರ ಮಾತಿನಿಂದ ಉತ್ತೇಜಿತರಾಗಿ ಈ ರೀತಿ ದಾಳಿ ಮಾಡಿದ್ರೆ ಸಿಕ್ಕಿಹಾಕಿಕೊಂಡು ತೊಂದರೆ ಅನುಭವಿಸುವುದು ಸಾಮಾನ್ಯ ಕಾರ್ಯಕರ್ತರು. ಇಂದು ದ್ವೇಷಿಗಳಂತೆ ವರ್ತಿಸುವ ನಾಯಕರು ನಾಳೆ ಪರಸ್ಪರ ಹೆಗಲ ಮೇಲೆ ಕೈ ಹಾಕಿಕೊಂಡು ಹೋಗುತ್ತಾರೆ. ಇದನ್ನು ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.