ಬೆಂಗಳೂರು:ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಈ ಉಪಚುನಾವಣೆಯಲ್ಲಿ ದಾಖಲೆ ಮತಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದ್ದರೆ, ಮಂಡ್ಯದ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ಅವರು ಕಡಿಮೆ ಮತಗಳ ಅಂತರದಿಂದ ವಿಜಯ ಪತಾಕೆ ಹಾರಿಸಿದ್ದಾರೆ.
54,386 ಮತಗಳ ಅಂತರದಿಂದ ವಿಜಯಿ ಆಗಿರುವ ಗೋಪಾಲಯ್ಯ ಅವರ ಬತ್ತಳಿಕೆಗೆ 85,889 ಮತಗಳು ಬಿದ್ದಿವೆ. ಚುನಾವಣೆ ಜರುಗಿದ 15 ಕ್ಷೇತ್ರಗಳಲ್ಲಿ ಯಾರೂ ಇಷ್ಟು ಮತಗಳ ಅಂತದಿಂದ ಜಯ ಸಾಧಿಸಿಲ್ಲ. ಈ ಕ್ಷೇತ್ರದ ಎದುರಾಳಿ ಅಭ್ಯರ್ಥಿಗಳು ಕಾಂಗ್ರೆಸ್ನ ಎಂ.ಶಿವರಾಜು 31,503 ಮತಗಳು, ಜೆಡಿಎಸ್ನ ಗಿರೀಶ್ ನಾಶಿ 23,516 ಮತಗಳನ್ನಷ್ಟೆ ಪಡೆಯಲು ಶಕ್ತರಾದರು.
ಕೆ.ಆರ್.ಪೇಟೆ ಕ್ಷೇತ್ರವನ್ನು ಜೆಡಿಎಸ್ನ ಭದ್ರಕೋಟೆ ಎಂದೇ ಕರೆಯಲಾಗುತ್ತಿತ್ತು. ಆದರೆ, ಈ ಉಪಚುನಾವಣೆಯಲ್ಲಿ ತೆನೆ ಹೊತ್ತ ಮಹಿಳೆ ತೆನೆ ಇಳಿಸಿ ಕಮಲಕ್ಕೆ ಮುತ್ತಿಕ್ಕಿದ್ದಾಳೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ನಾರಾಯಣಗೌಡ ಬದಲಾದ ರಾಜಕೀಯ ಸನ್ನಿವೇಶಗಳಲ್ಲಿ ಕಮಲದತ್ತ ವಾಲಿದರು. ಇದೀಗ ಬಿಜೆಪಿಯಿಂದಲೇ ಸ್ಪರ್ಧಿಸಿ 66,094 ಮತಗಳನ್ನು ಪಡೆದು 9,731 ಮತಗಳ ಅಂತರದಿಂದ ಗೆದ್ದಿದ್ದಾರೆ. ಈ ಉಪಚುನಾವಣೆಯಲ್ಲಿ ಅತೀ ಕಡಿಮೆ ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ.
ಈ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಕೂಡ ಪ್ರಬಲ ಸ್ಪರ್ಧೆ ಒಡ್ಡಿ 56,363 ಮತಗಳನ್ನು ಪಡೆದುಕೊಂಡರು. ಇತ್ತ ಕಾಂಗ್ರೆಸ್ ಅಭ್ಯರ್ಥಿ ಸಹ ಈ ಇಬ್ಬರಿಗೂ ನೇರ ಪೈಪೋಟಿಯನ್ನೇ ನೀಡಿ 41,665 ಮತಗಳನ್ನು ಪಡೆದು ಮತಗಳ ಹಂಚಿಕೆಗೆ ಕಾರಣರಾದರು.