ಬೆಂಗಳೂರು: ಚುನಾವಣೆಯಲ್ಲಿ ಹೇಗೆಲ್ಲಾ ಭ್ರಷ್ಟಾಚಾರದ ನಡೆಯುತ್ತದೆ ಎನ್ನುವ ಕುರಿತು ಸ್ವಾರಸ್ಯಕರ ಚರ್ಚೆ ಇಂದು ಮೇಲ್ಮನೆಯಲ್ಲಿ ನಡೆಯಿತು.
ಸಂವಿಧಾನದ ಮೇಲಿನ ವಿಶೇಷ ಚರ್ಚೆಯಲ್ಲಿ ಜೆಡಿಎಸ್‌ನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ, ಇಂದಿನ ಚುನಾವಣೆಯಲ್ಲಿ ಮತದಾರರು ಹಣ ಪಡೆದು ಮತ ಹಾಕುವುದೇ ಹೆಚ್ಚು ಎಂದು ಚುನಾವಣಾ ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸಿದರು. ಆಗ ಮಧ್ಯ ಪ್ರವೇಶಿಸಿದ ವಿಪಕ್ಷ ನಾಯಕ ಎಸ್ ಆರ್ ಪಾಟೀಲ್, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರದಿಂದಲೂ ಕಣಕ್ಕಿಳಿದಿದ್ದರು. 6ನೇ ವೇತನ ಆಯೋಗ ಜಾರಿ ಮಾಡಿ, ಸರ್ಕಾರಿ ನೌಕರರಿಗೆ ಸಹಾಯ ಮಾಡಿದ್ದ ಸಿದ್ದರಾಮಯ್ಯ ಅವರಿಗೆ ಸರ್ಕಾರಿ ನೌಕರರೇ ಹಣ ಖರ್ಚು ಮಾಡಿ ಚುನಾವಣೆಯಲ್ಲಿ ಗೆಲ್ಲಿಸುತ್ತಾರೆ ಎಂಬ ನಿರೀಕ್ಷೆ ನಮ್ಮದಾಗಿತ್ತು. ಪ್ರಚಾರಕ್ಕೆ ಹೋಗಿ ನೋಡಿದಾಗ ಅದು ಸಂಪೂರ್ಣ ತಿರುವು ಮುರುವಾಗಿತ್ತು. ಸರ್ಕಾರಿ ನೌಕರರು ಅಂಚೆ ಮತದಾನ ಮಾಡಲು ಒಂದು ವೋಟಿಗೆ 5 ಸಾವಿರ ರೂ. ನಿಗದಿ ಮಾಡಿದ್ದರು. ಅದನ್ನು ಕಂಡು ಗಾಬರಿಯಾಗಿ ನೀವು ದೊಡ್ಡವರು ಎಂದು ಹೇಳಿ ನಾನು ಕೈ ಮುಗಿದು ಬಂದೆ ಎಂದರು.
ಆಗ ಬಿಜೆಪಿ ಸದಸ್ಯ ರವಿಕುಮಾರ್ ಮಾತನಾಡಿ, ಬಡವ ಊಟಕ್ಕೆ ಗತಿ ಇಲ್ಲದವನು. ಆ ರೀತಿ ಹಣ ತೆಗೆದುಕೊಳ್ಳುವುದಾದರೆ ಕ್ಷಮಿಸಬಹದು. ಯುಜಿಸಿ ವೇತನ ಪಡೆದು ಲಕ್ಷಾಂತರ ರೂ. ಮಾಸಿಕ ಸಂಬಳ ಇರುವ ವಿದ್ಯಾವಂತ ವರ್ಗವೇ ಈ ರೀತಿಯಾದರೆ, ಏನು ಮಾಡುವುದು ಎಂದು ಬೇಸರ ವ್ಯಕ್ತಪಡಿಸಿದರು. ಮಧ್ಯೆ ಪ್ರವೇಶಿದ ಸಚಿವ ಸಿ ಟಿ ರವಿ, ಚುನಾವಣೆ ಗೆಲ್ಲುವುದು ಹೇಗೆ ಎಂಬ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡಿದರೆ ಹೇಗೆ? ಅದಕ್ಕೆ ಯಾರನ್ನು ಉಪ ಕುಲಪತಿಯಾಗಿ, ಕುಲ ಸಚಿವರನ್ನಾಗಿ ಮಾಡಬಹುದು ಎಂದು ಪ್ರಶ್ನೆ ಮುಂದಿಟ್ಟರಲ್ಲದೆ, ಶ್ರೀಕಂಠೇಗೌಡರನ್ನು ಉಪ ಕುಲಪತಿ ಮಾಡಬಹುದು ಎಂದರು. ಆಗ ತಕ್ಷಣವೇ ಎದ್ದು ನಿಂತ ಜೆಡಿಎಸ್‌ನ ಟಿ ಎ ಶರವಣ ಅವರು, ನಿಮಗೆ ಹೆಚ್ಚಿನ ಅನುಭವ ಇದ್ದಂತೆ ಇದೆ. ನೀವೇ ಕುಲಪತಿ ಆಗಿಬಿಡಿ ಎಂದು ಸಲಹೆ ರೂಪದಲ್ಲೇ ಸಿ ಟಿ ರವಿ ಅವರ ಕಾಲೆಳೆದರು.
ಆಗ ಶ್ರೀಕಂಠೇಗೌಡರು ಮಾತನಾಡಿ, ಸ್ನೇಹಿತರು ಕೊಟ್ಟ ಹಣದಲ್ಲಿ ನಾನು ಚುನಾವಣೆ ನಡೆಸಿ, ಗೆದ್ದು ಬಂದಿದ್ದೇನೆ. ನಮ್ಮ ಕಾಲ ಬೇರೆ ಇತ್ತು. ನಾರಾಯಣಸ್ವಾಮಿ ಹಾಗೂ ಪುಟ್ಟಣ್ಣ ಅವರು ರಾಜಕಾರಣಕ್ಕೆ ಪ್ರವೇಶ ಮಾಡಿದ ಬಳಿಕ ಖರ್ಚು ದುಬಾರಿಯಾಗಿದೆ. ಕಳೆದ ಚುನಾವಣೆ ನಡೆಸಲು ನಾನು ಐದು ಎಕರೆ ಜಮೀನು ಮಾರಿಕೊಳ್ಳುವ ಪರಿಸ್ಥಿತಿ ಬಂತು ಎಂದರು. ಮಧ್ಯ ಪ್ರವೇಶಿಸಿದ ಕಾಂಗ್ರೆಸ್ ಸದಸ್ಯ ಎಸ್.ರವಿ, ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಮತದಾರರು ನಿಮಗೆ ವೋಟು ಹಾಕುತ್ತೇವೆ ಎಂದು ದೇವರ ಫೋಟೋ ಮೇಲೆ ಪ್ರಮಾಣ ಮಾಡಿ, ಹತ್ತು ಸಾವಿರ ರೂ. ಪಡೆದರು.
ಮತಗಟ್ಟೆಗೆ ಹೋಗಿ ಅಭ್ಯರ್ಥಿಗಳು ಸಿದ್ದಪಡಿಸಿದ್ದ ಮಾದರಿ ಮತ ಪತ್ರದ ಮೇಲೆ ಮತಹಾಕಿ ಅದನ್ನು ತಂದು ಜೆಡಿಎಸ್‌ನವರಿಗೆ ತೋರಿಸಿ ₹15 ಸಾವಿರ ಪಡೆದರು. ವರ್ಜಿನಲ್ ಮತ ಪತ್ರವನ್ನು ಪೆಟ್ಟಿಗೆಗೆ ಹಾಕದೆ ಜೇಬಿನಲ್ಲಿಟ್ಟುಕೊಂಡು ಬಂದು ಬಿಜೆಪಿಯವರಿಗೆ ಕೊಟ್ಟು 20 ಸಾವಿರ ರೂ. ಪಡೆದುಕೊಂಡರು. ಇದು ನಮ್ಮ ಕಣ್ಣೆದುರಿಗೇ ನಡೆದ ಕಥೆ ಎಂದರು. ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ನಾವು ಜನಸಾಮಾನ್ಯರ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದೇವೆ. ವಿಧಾನಸಭೆಗೆ ಆಯ್ಕೆಯಾದ ಶಾಸಕರು, ಅಲ್ಲಿಂದ ಮೇಲ್ಮನೆ ಹಾಗೂ ರಾಜ್ಯಸಭೆಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಎಷ್ಟೆಲ್ಲಾ ತೆಗೆದುಕೊಳ್ಳುತ್ತಾರೆ ಎಂಬ ಬಗ್ಗೆ ನಾವು ಧೈರ್ಯವಾಗಿ ಮಾತನಾಡಬೇಕಿದೆ ಎಂದರು.